ಡೆತ್ ನೋಟ್ ಬರೆದಿಟ್ಟು ಮದುವೆ ನಿಶ್ಚಯ ಆಗಿದ್ದ ಯುವತಿ ಮತ್ತು ತಂದೆ ತಾಯಿ ಆತ್ಮಹತ್ಯೆ

ಸಾಕಾರ ನ್ಯೂಸ್: ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ಡೆತ್‌ನೋಟ್ ಬರೆದಿಟ್ಟು ತಂದೆ, ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ತಂದೆ ಶಿವಣ್ಣ (54), ತಾಯಿ ನಾಗರತ್ನ (44) ಹಾಗೂ ಮಗಳು ರಕ್ಷಿತಾ (21) ಆತ್ಮಹತ್ಯೆಗೆ ಶರಣಾದವರು. ಮೂವರ ಸಾವಿಗೂ ಉಲ್ಲಾಸ್ ಗೌಡ ಕಾರಣನೆಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ಮೂರು ತಿಂಗಳ ಹಿಂದೆ ಮೃತ ರಕ್ಷಿತಾಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಅವರ ನಿಶ್ಚಿತಾರ್ಥದ ಸಮಯದಲ್ಲಿಯೂ ಉಲ್ಲಾಸ್ ಗೌಡ ಓಡಾಡಿಕೊಂಡಿದ್ದ. ಇದೇ ತಿಂಗಳ 23-24ರಂದು ಮದುವೆ ನಿಗದಿಯಾಗಿತ್ತು.


ಆದರೆ ಒಂದು ವಾರದ ಹಿಂದಷ್ಟೇ ಉಲ್ಲಾಸ್ ರಕ್ಷಿತಾಳನ್ನು ಲವ್ ಮಾಡುತ್ತಿದ್ದೇನೆ, ಮದುವೆ ಮಾಡಿಕೊಡಿ ಎಂದು ಆಕೆಯ ಪೋಷಕರ ಬಳಿ ಕೇಳಿದ್ದ. ಆಗ ಬೈದು ಬುದ್ದಿಮಾತು ಹೇಳಿದ್ದರು. ಅಷ್ಟಕ್ಕೂ ಕೇಳದೇ ಗಲಾಟೆ ಮಾಡಿದ್ದ. ರಾತ್ರಿ ಗ್ರಾಮದಲ್ಲಿ ಹಿರಿಯರನ್ನು ಸೇರಿಸಿ ನ್ಯಾಯ ಪಂಚಾಯತಿ ಮಾಡಿದ್ದರು.

ಅದಾದ ಬಳಿಕ ಈ ಹಿಂದೆ ರಕ್ಷಿತಾ ತನಗೆ ಕಳುಹಿಸಿದ್ದ ಕೆಲವು ಮೆಸೇಜ್ ಹಾಗೂ ಫೋಟೋಗಳನ್ನು ಇಟ್ಟುಕೊಂಡು ಆಕೆಗೆ ನಿರಂತರವಾಗಿ ಮಾನಸಿಕ ಹಿಂಸೆ ಹಾಗೂ ಕಿರುಕುಳ ನೀಡುತ್ತಿದ್ದ. ಅಷ್ಟಕ್ಕೇ ನಿಲ್ಲಿಸದೇ ರಕ್ಷಿತಾಳ ಮದುವೆ ನಿಶ್ಚಯವಾಗಿದ್ದ ಯುವಕನಿಗೂ ಆ ಮೆಸೇಜ್ ಹಾಗೂ ಫೋಟೋಗಳನ್ನು ಕಳುಹಿಸಿದ್ದ. ಇದರಿಂದ ಅವಮಾನಕ್ಕೊಳಗಾದ ಕುಟುಂಬಸ್ಥರು ಡೆತ್‌ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ವರುಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading