ನೆರಳಿಲ್ಲದ ಹಾದಿಯಲ್ಲಿ… ಅಪ್ಪಂದಿರ ದಿನದ ಒಂದು ಭಾವನಾತ್ಮಕ ಕಥನ

‘ಅಪ್ಪಂದಿರ ದಿನ’ ಮುಗಿದುಹೋಗಿರಬಹುದು, ಆದರೆ ಅಪ್ಪನೆಂಬ ಆಲದ ಮರದ ನೆನಪುಗಳಿಗೆ ದಿನಗಳ ಹಂಗೇಕೆ? ನಿನ್ನೆ ಮೊಬೈಲ್ ಗ್ಯಾಲರಿಯಲ್ಲಿ ಸುಮ್ಮನೆ ಬೆರಳು ಆಡಿಸುತ್ತಿರುವಾಗ ಕಣ್ಣಿಗೆ ಬಿದ್ದ ಆ ಹಳೆಯ ಚಿತ್ರಗಳು ಮನಸ್ಸನ್ನು ಒಮ್ಮೆಲೇ ಭಾರವಾಗಿಸಿದವು. ಅಲ್ಲೊಂದು ಭಾವನಾತ್ಮಕ ಬರಹ ಕಣ್ಣು ನೆನೆಸಿತು. ಅಪ್ಪ ಎಂದರೆ ಹಾಗೆಯೇ. ಇದ್ದವರಿಗೆ ಹೊರೆ ಅನಿಸಿದರೂ ಇಲ್ಲದವರ ಪಾಲಿಗೆ ಅನಾಥ ಸ್ಥಿತಿ. ಅಪ್ಪ ಎನ್ನುವ ಆ ನೆರಳೊಂದು ಇಲ್ಲದ ಮೇಲೆ ಎಷ್ಟೇ  ಆಡಂಬರಗಳ ನಡುವೆಯೂ ನಮ್ಮ ಬದುಕು, ನಮ್ಮ ವ್ಯಾಪ್ತಿ ಎಷ್ಟು ಅತ್ಯಲ್ಪ ಅನಿಸತೊಡಗಿತು. ಅದರಲ್ಲೂ ಅಪ್ಪನನ್ನು ಕಳೆದುಕೊಂಡ mainstream ನಲ್ಲಿ ಇರುವ  ಆ ಇಬ್ಬರು ಮಕ್ಕಳ ಯಾತನೆ, ಅವರು ಎದುರಿಸಿದ ಅವಮಾನ ಮತ್ತು ಆಘಾತಗಳ ದೃಶ್ಯಗಳು ಒಂದೊಂದೇ ಹಾದು ಹೋದವು.

ಒಂದು ಸುಂದರ, ಪ್ರೀತಿಯಲ್ಲರಳಿದ ಕುಟುಂಬದ ಬೆಚ್ಚನೆಯ ಭಾವಗಳನ್ನೆಲ್ಲಾ ಒಂದು ಹೆಣ್ಣು ರೂಪದ ಮಾನವ ಬಾಂಬ್ ಕಸಿದುಕೊಂಡುಬಿಟ್ಟಿತು. ತಂದೆಯ ಛಿದ್ರಗೊಂಡ ದೇಹದ ಮುಂದೆ ನಿಂತ ಆ ಮಕ್ಕಳ ಬಾಲ್ಯ, ಯೌವನ ಅಲ್ಲಿಗೇ ಕಮರಿಹೋಗಿತ್ತು. ಅಮ್ಮನಾದವಳಿಗೆ ಸಮಾಜದಲ್ಲಿ ಸಿಗಬೇಕಾದ ಪ್ರಾಮುಖ್ಯತೆ ಇದ್ದಾಗಲೂ, ಇಲ್ಲದಿದ್ದಾಗಲೂ ಸಿಗುತ್ತದೆ. ಆದರೆ ‘ಅಪ್ಪ’ ಕೊಡುವ ಬೆಂಬಲವಿದೆಯಲ್ಲ… ಅದು ತೆರೆಮರೆಯಲ್ಲಿದ್ದು ಕಾಯುವ ದೈವಿಕ ಶಕ್ತಿಯಂತೆ, ಕಣ್ಣಿಗೆ ಕಾಣದ ಅಷ್ಟೇ ಅಗಾಧವಾದ ಬೆನ್ನೆಲುಬು.

ಆ ಬೆನ್ನೆಲುಬೇ ಮುರಿದುಬಿದ್ದಾಗ ಆ ಇಬ್ಬರು ಮಕ್ಕಳು ದೇಶಾದ್ಯಂತ ದ್ವೇಷ ಬಿತ್ತಿ ಹಂಗಿಸುವ ಪಾತಕಿಗಳ ಮಧ್ಯೆ ಛಲದಿಂದ ಬದುಕಬೇಕಾಗಿ ಬಂತು. ಇಂದು ಆ ಇಬ್ಬರು ಮಕ್ಕಳ ಬದುಕಿನ ಹಾದಿಯನ್ನು ಗಮನಿಸಿದರೆ, ಅವರು ಕಂಡುಂಡ ಅವಮಾನಗಳನ್ನು ನೋಡಿದಾಗ ಎದೆಯೊಳಗೆ ಎಲ್ಲೋ ಒಂದು ಕಡೆ ಸಣ್ಣದಾಗಿ ನೋವು ನುಸುಳುತ್ತದೆ.

“ಒಂದು ವೇಳೆ ಅಂದು ಇಂದಿರಾಗಾಂಧಿಯವರು ತಮ್ಮ ಮಗನನ್ನು ಒಲ್ಲದ ರಾಜಕೀಯಕ್ಕೆ ಎಳೆತರದಿದ್ದರೆ…?”

ಈ ಒಂದು ಪ್ರಶ್ನೆ ಕಾಡದೇ ಇರದು. ಹಾಗಾಗಿದ್ದರೆ, ಈ ಕುಟುಂಬ ತನ್ನ ಪಾಡಿಗೆ ತಾನು ಬಂಗಾರದಂತೆ, ಪ್ರೀತಿಯ ಗೂಡಿನಲ್ಲಿ ನೆಮ್ಮದಿಯಾಗಿ ಬದುಕಿಬಿಡಬಹುದಿತ್ತು. ಆದರೆ ರಾಜಕಾರಣದ ಸುಳಿಗೆ ಸಿಕ್ಕ ನಂತರ ಅದರಿಂದ ಬಿಡಿಸಿಕೊಳ್ಳುವುದು ಸುಲಭದ ಮಾತಲ್ಲ.
ಇವತ್ತಿನ ರಾಜಕೀಯವನ್ನೇ ನೋಡಿ; ನಮ್ಮ ಮುದಿ ರಾಜಕಾರಣಿಗಳು ರಾಜ್ಯಸಭೆಗಾದರೂ ಆಯ್ಕೆಯಾಗಬೇಕು ಎಂದು ಹಠ ಹಿಡಿದು ಕುಳಿತು ಬಿಡುತ್ತಾರೆ. ದೇವೇಗೌಡರ ವಯಸ್ಸನ್ನು ಗಮನಿಸಿ, ಡಿ ವಿ ಸದಾನಂದ ಗೌಡರ ಕಡೆ ನೋಡಿ ಅಥವಾ 75 ವರ್ಷಕ್ಕೆ ರಾಜಕೀಯದಿಂದ ನಿವೃತ್ತಿ ಹೊಂದಬೇಕು ಎಂದು ಹಿರಿಯರನ್ನು ಪಕ್ಕಕ್ಕಿಟ್ಟ ಹಾಲಿ ಪ್ರಧಾನಿಗಳನ್ನೇ ಗಮನಿಸಿ. ಇವರಿಗೇ ಅಧಿಕಾರದ, ರಾಜಕೀಯದ ಬದುಕಿನಿಂದ ಕೆಳಗಿಳಿಯಲು ಸಾಧ್ಯವಾಗುತ್ತಿಲ್ಲ ಎಂದ ಮೇಲೆ, ಸ್ವಾತಂತ್ರ್ಯ ಸಂಗ್ರಾಮದ ಕಾಲದಿಂದ ದೇಶದ ಆಗುಹೋಗುಗಳಲ್ಲಿ ತನು-ಮನ-ಧನ ಅರ್ಪಿಸಿದ, ಐದು ತಲೆಮಾರಿನ ಇತಿಹಾಸವಿರುವ ಈ ಕುಟುಂಬ ರಾಜಕೀಯದಿಂದ ಸಂಪೂರ್ಣವಾಗಿ ಮರೆಯಾಗುವುದು ಅಷ್ಟು ಸುಲಭವೇ? ಖಂಡಿತ ಇಲ್ಲ.
ಅಧಿಕಾರ, ರಾಜಕೀಯ ಎಲ್ಲವನ್ನೂ ಪಕ್ಕಕ್ಕಿಟ್ಟು ಒಬ್ಬ ಸಾಮಾನ್ಯ ಮನುಷ್ಯನಾಗಿ ಯೋಚಿಸಿದರೆ ಒಂದು ಸತ್ಯ ನಿಚ್ಚಳವಾಗಿ ಕಾಣುತ್ತದೆ.

ಇಂತಹಾ ಅಪ್ಪ ಇಂದು ಬದುಕಿದ್ದಿದ್ದರೆ ಆ ಇಬ್ಬರು ಮಕ್ಕಳ ಬದುಕಿನ ಹಾದಿ ಇಷ್ಟು ದುರ್ಗಮವಾಗುತ್ತಿರಲಿಲ್ಲ. ಪ್ರತಿ ಹೆಜ್ಜೆಯಲ್ಲೂ ಅನುಭವಿಸಿದ ಹಂಗಿಸುವಿಕೆ, ಅವಮಾನಗಳ ವಿರುದ್ಧ ಹೋರಾಡಲು ಅಪ್ಪನೆಂಬ ಮಹಾ ಗೋಡೆ ಅವರ ಬೆನ್ನಿಗಿರುತ್ತಿತ್ತು.

ಅಪ್ಪ ಅಂದರೆ ಕೇವಲ ಹೆಸರಲ್ಲ, ಅದೊಂದು ಸುರಕ್ಷಾ ಕವಚ. ಆ ಕವಚವಿಲ್ಲದೆಯೂ ಜಗತ್ತಿನ ಕ್ರೌರ್ಯವನ್ನು ಎದುರಿಸಿ ನಿಂತ ಆ ಇಬ್ಬರು ಮಕ್ಕಳ ಛಲಕ್ಕೆ, ಇತಿಹಾಸದ ಪುಟಗಳು ಎಂದಾದರೂ ನ್ಯಾಯ ಒದಗಿಸಬಹುದೇನೋ?

Leave a Reply

Discover more from

Subscribe now to keep reading and get access to the full archive.

Continue reading