ಸಮಾಜ ಸೇವೆ, ಶಿಕ್ಷಣ, ಮಾನವ ಹಕ್ಕುಗಳ ರಕ್ಷಣೆ, ಪರಿಸರ ಜಾಗೃತಿ ಮತ್ತು ವಿವಿಧ ಕ್ಷೇತ್ರಗಳಲ್ಲಿಅಸಾಧಾರಣ ಸಾಧನೆಗಾಗಿ ಪುತ್ತೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಜನಸೇವಕಿ ಚಂದ್ರಪ್ರಭಾ ಗೌಡರವರು ಎ.ಎಸ್.ಜಿ.ಎಸ್ ಫೌಂಡೇಶನ್ ಇಂಟರ್ನ್ಯಾಷನಲ್ ಹ್ಯೂಮನ್ ಡೆವಲಪ್‌ಮೆಂಟ್ ಕೌನ್ಸಿಲ್ (ಅಂತರರಾಷ್ಟ್ರೀಯ ಮಾನವ ಅಭಿವೃದ್ಧಿ ಮಂಡಳಿ) ಕೊಡಮಾಡುವ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಗಳನ್ನು ಮುಖ್ಯವಾಗಿ ‘ಗ್ಲೋಬಲ್ ಐಕಾನಿಕ್ ಅಚೀವರ್ಸ್ ಅವಾರ್ಡ್’ ಎಂಬ ಹೆಸರಿನಲ್ಲಿ ನೀಡಲಾಗುತ್ತಿದ್ದು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಿಸ್ವಾರ್ಥ ಸೇವಕರನ್ನು, ಮಾನವ ಹಕ್ಕುಗಳು, ಶಾಂತಿ ಮತ್ತು ಸುಸ್ಥಿರ ಅಭಿವೃದ್ಧಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡುತ್ತಿರುವವರನ್ನು ಗುರುತಿಸಿ ಗೌರವಿಸುವುದು ಈ ಪ್ರಶಸ್ತಿಯ ಮುಖ್ಯ ಉದ್ದೇಶವಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಜೂ.18ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಮೂಲತಃ ಸುಳ್ಯದವರಾದ ಮದುವೆಯಾಗಿ ಈಗ ಸಾಲ್ಮರದಲ್ಲಿ ನೆಲೆಸಿರುವ ಚಂದ್ರಪ್ರಭಾ ಗೌಡರವರು ಕೆಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಓರ್ವ ಜನ ಸೇವಕಿಯಾಗಿದ್ದಾರೆ.ಇವರು ಆರಂಭದಲ್ಲಿ ಶಿಕ್ಷಕಿಯಾಗಿ ಬಹಳಷ್ಟು ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕಾಗಿದ್ದಾರೆ. ತುಳುನಾಡಿನ ಜಾನಪದ ಸಾಂಸ್ಕೃತಿಕ ಕ್ರೀಡೆಯಾಗಿರುವ ಕಂಬಳ ಕೂಟದ ಆಯೋಜನೆಯಲ್ಲೂ ಗುರುತಿಸಿಕೊಂಡಿರುವ ಇವರು ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಕೂಟ ಹಾಗೇ ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ ಕೂಟದಲ್ಲೂ ಸಂಪೂರ್ಣ ಜವಬ್ದಾರಿ ವಹಿಸಿಕೊಂಡು ತುಳುನಾಡಿನ ಕಂಬಳ ಕ್ರೀಡೆಗೆ ತನ್ನದೇ ಆದ ಕೊಡುಗೆಯನ್ನುನೀಡಿದ್ದಾರೆ.
ಕ್ರೀಡಾ ಪ್ರತಿಭೆಗಳಿಗೂ ಪ್ರೋತ್ಸಾಹ ನೀಡುತ್ತಿರುವ ಚಂದ್ರಪ್ರಭಾ ಗೌಡರವರು ನಮ್ಮ ನೆಲದ ಹೆಮ್ಮೆಯ ಕ್ರೀಡೆಯಾಗಿರುವ ಕಬಡ್ಡಿ ಪಂದ್ಯಾಟಗಳನ್ನು ತಾಲೂಕಿನಾದ್ಯಂತ ವಿವಿಧ ಸಂಘ ಸಂಸ್ಥೆಗಳು ನಡೆಸಿದಾಗ ಪ್ರಾಯೋಜಕರಾಗಿ, ಸಂಘಟಕರಾಗಿ, ಮಾರ್ಗದರ್ಶಕರಾಗಿ ಸೇವೆ ಸಲಿಸುವ ಮೂಲಕ ಕ್ರೀಡಾ ಕ್ಷೇತ್ರದಲ್ಲೂ ಶ್ಲಾಘನೀಯ ಕೆಲಸ ಮಾಡಿದ್ದಾರೆ.ಧಾರ್ಮಿಕವಾಗಿಯೂ ಬಹಳಷ್ಟು ಸೇವೆ ಸಲ್ಲಿಸಿದ ಇವರು ಮುಖ್ಯವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸೇರಿದಂತೆ ತಾಲೂಕಿನ ವಿವಿಧ ದೇವಸ್ಥಾನ, ಭಜನಾ ಮಂದಿರ, ವಿವಿಧ ಸಾರ್ವಜನಿಕ ಪೂಜಾ ಕಾರ್ಯಕ್ರಮಗಳು, ಹಬ್ಬಗಳು, ಜಾತ್ರೋತ್ಸವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ನಿಂತು ಅವುಗಳ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ.
ಚಂದ್ರಪ್ರಭಾ ಗೌಡರವರು ಶಿಕ್ಷಕಿಯಾಗಿ ಜನರ ನಾಡಿಮಿಡಿತವನ್ನು ಅರಿತುಕೊಂಡು ಅಲ್ಲಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಬದುಕಿನಿಂದ ಪ್ರೇರಣೆ ಪಡೆದುಕೊಂಡು ರಾಜಕೀಯಕ್ಕೆ ಎಂಟ್ರಿ ಕೊಡುವ ಮೂಲಕ ರಾಜಕೀಯವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕಿಯಾಗಿ ಬಹಳಷ್ಟು ಕಾರ್ಯಗಳನ್ನು ಮಾಡಿದ್ದಾರೆ. ಪುತ್ತೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ, ಬ್ಲಾಕ್ ಕಾಂಗ್ರೆಸ್ ವಕ್ತಾರೆಯಾಗಿ ಒಬ್ಬರು ದಣಿವರಿಯದ ಜನಸೇವಕಿಯಾಗಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ.










