
ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಆಲಂಕಾರು ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ದಂಪತಿಯು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪತ್ನಿಯ ಶವ ಪತ್ತೆಯಾಗಿದ್ದು, ಪತಿಯು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಶನಿವಾರ ಅಪರಾಹ್ನ ಬೆಳಕಿಗೆ ಬಂದಿದೆ.

ಮೃತಪಟ್ಟ ದುರ್ದೈವಿಗಳನ್ನು ಮೂಲತಃ ಕಾರ್ಕಳದ ಬಜಗೋಳಿ ನಿವಾಸಿಯಾದ ದಿನೇಶ್ ಹಾಗೂ ಸಿದ್ದಕಟ್ಟೆಯ ಸಂಗೀತ ಎಂದು ಗುರುತಿಸಲಾಗಿದೆ. ಈ ಮೃತ ದಂಪತಿಗೆ ಎರಡು ವರ್ಷದ ಪುಟ್ಟ ಹೆಣ್ಣು ಮಗು ಇದೆ.
ಇವರು ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದು, ಆಲಂಕಾರು ಕಜೆ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಸುಮಾರು ಮೂರು ತಿಂಗಳ ಹಿಂದಷ್ಟೇ ಆಲಂಕಾರಿನಲ್ಲಿ ತಾವು ನಡೆಸುತ್ತಿದ್ದ ಹೋಟೆಲ್ ಉದ್ಯಮವನ್ನು ಬಿಟ್ಟು ಬೇರೆಡೆಗೆ ತೆರಳಿದ್ದ ಈ ದಂಪತಿ, ನಿನ್ನೆಯಷ್ಟೇ ಅಂದರೆ ಶುಕ್ರವಾರ ಆಲಂಕಾರಿನ ಕಜೆಯಲ್ಲಿದ್ದ ಬಾಡಿಗೆ ಮನೆಗೆ ಪುನಃ ವಾಪಸ್ ಬಂದಿದ್ದರು. ಶನಿವಾರ ಘಟನೆ ನಡೆದ ಸಂದರ್ಭದಲ್ಲಿ ಮನೆಯ ಒಳಗಿನಿಂದ ಚಿಲಕ ಹಾಕಲಾಗಿತ್ತು ಎಂದು ತಿಳಿದುಬಂದಿದೆ.
ಪತಿಯಾದ ದಿನೇಶ್ ಎಂಬಾತನೇ ಮೊದಲು ಪ್ನಿ ಸಂಗೀತಳನ್ನು ಕೊಲೆ ಮಾಡಿ, ತದನಂತರ ತಾನು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಕಡಬ ಪೊಲೀಸ್ ಉಪನಿರೀಕ್ಷಕರಾದ ಜಂಬೂರಾಜ್ ಮಹಾಜನ್ ಹಾಗೂ ಸಿಬ್ಬಂದಿಗಳು ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ದಂಪತಿಯ ಸಾವಿಗೆ ನಿಖರವಾದ ಕಾರಣವೇನು ಎಂಬುದರ ಬಗ್ಗೆ ಪೊಲೀಸರು ತನಿಖ್ಯೆಯನ್ನು ತೀವ್ರಗೊಳಿಸಿದ್ದಾರೆ.

