ಕರಾವಳಿ ಪ್ರವಾಸೋದ್ಯಮ ರಾಯಭಾರಿಯಾಗಿ ನಟ ರಿಷಬ್ ಶೆಟ್ಟಿ ನೇಮಕ: ರಾಹುಲ್ ಬಗ್ಗೆ ನೋ ಕಮೆಂಟ್ಸ್ ಎಂದವರಿಗೆ ಮಣೆ ಹಾಕಿತೇ ಕಾಂಗ್ರೆಸ್?


ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕುರಿತು ಕೇಳಲಾದ ಪ್ರಶ್ನೆಯೊಂದಕ್ಕೆ ನೋ ಕಮೆಂಟ್ಸ್ ಎಂದು ಹೇಳಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅದ್ಭುತ ನಾಯಕ ಎಂದು ಶ್ಲಾಘಿಸಿದ್ದ ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಕರ್ನಾಟಕ ಸರ್ಕಾರವು ಕರಾವಳಿ ಪ್ರವಾಸೋದ್ಯಮದ ರಾಯಭಾರಿಯನ್ನಾಗಿ ನೇಮಕ ಮಾಡಿದೆ. ಸರ್ಕಾರದ ಈ ನಿರ್ಧಾರ ಈಗ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಒಳಗೇ ತೀವ್ರ ಆಕ್ರೋಶ ಮತ್ತು ಅಸಮಾಧಾನಕ್ಕೆ ಕಾರಣವಾಗಿದ್ದು, ಕಾರ್ಯಕರ್ತರ ವಲಯದಲ್ಲಿ ಇದು ಡಿ.ಕೆ. ಶಿವಕುಮಾರ್ ಸರ್ಕಾರದ ಮಹಾ ಎಡವಟ್ಟು ಎಂಬ ಮಾತುಗಳು ಕೇಳಿಬರುತ್ತಿವೆ.

ಕೆಲವು ತಿಂಗಳ ಹಿಂದಷ್ಟೇ ಮಾಧ್ಯಮ ಸಂದರ್ಶನವೊಂದರಲ್ಲಿ ರಿಷಬ್ ಶೆಟ್ಟಿ ಅವರಿಗೆ ರಾಜಕೀಯ ನಾಯಕರ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ಪ್ರಧಾನಿ ಮೋದಿಯವರನ್ನು ಅದ್ಭುತ ನಾಯಕ ಎಂದು ಕೊಂಡಾಡಿದ್ದ ರಿಷಬ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಕೇಳಿದಾಗ ಯಾವುದೇ ಪ್ರತಿಕ್ರಿಯೆ ನೀಡದೆ ನೋ ಕಮೆಂಟ್ಸ್ ಎಂದು ಹೇಳಿ ಜಾರಿಕೊಂಡಿದ್ದರು. ಪಕ್ಷದ ಸರ್ವೋಚ್ಚ ನಾಯಕನ ಬಗ್ಗೆ ಇಂತಹ ತಟಸ್ಥ ಧೋರಣೆ ತಳೆದು, ವಿರೋಧ ಪಕ್ಷದ ನಾಯಕನನ್ನು ಮುಕ್ತವಾಗಿ ಶ್ಲಾಘಿಸಿದ ವ್ಯಕ್ತಿಯನ್ನು, ಅದೂ ಕರಾವಳಿ ಭಾಗದಲ್ಲಿ ಪಕ್ಷವನ್ನು ಸಂಘಟಿಸಲು ಹೆಣಗಾಡುತ್ತಿರುವ ಇಂತಹ ಸಮಯದಲ್ಲಿ ಸರ್ಕಾರದ ಅಧಿಕೃತ ರಾಯಭಾರಿಯನ್ನಾಗಿ ಮಾಡಿರುವುದಕ್ಕೆ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.



ಈ ನೇಮಕಾತಿಯು ಕಾಂಗ್ರೆಸ್ ಪಕ್ಷದ ನವ ನಾಯಕರ ಸೈದ್ಧಾಂತಿಕ ಬದ್ಧತೆಯನ್ನು ದೊಡ್ಡ ಮಟ್ಟದಲ್ಲಿ ಪ್ರಶ್ನಿಸುವಂತೆ ಮಾಡಿದೆ. ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾದ ನಿಲುವು ಹೊಂದಿರುವವರಿಗೆ ಮಣೆ ಹಾಕುತ್ತಿರುವುದು ಸರಿ ಎನಿಸುತ್ತಿಲ್ಲ. ತಳಮಟ್ಟದಲ್ಲಿ ಪಕ್ಷಕ್ಕಾಗಿ ಮತ್ತು ಸಿದ್ಧಾಂತಕ್ಕಾಗಿ ಹಗಲಿರುಳು ಶ್ರಮಿಸುವ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ, ಇಂತಹ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ನಾಯಕರ ಸೈದ್ಧಾಂತಿಕ ದಾರಿತಪ್ಪುವಿಕೆಯನ್ನು ತೋರಿಸುತ್ತದೆ ಎಂದು ಸ್ವತಃ ಪಕ್ಷದ ಒಳಗಿನವರೇ ಅಸಮಾಧಾನ ಹೊರಹಾಕುತ್ತಿದ್ದಾರೆ.



ಇನ್ನು ಕರಾವಳಿ ಭಾಗದಲ್ಲೂ ರಿಷಬ್ ಶೆಟ್ಟಿ ನೇಮಕಾತಿಗೆ ಸಂಪೂರ್ಣ ಬೆಂಬಲ ಸಿಗುತ್ತಿಲ್ಲ. ತುಳುನಾಡಿನ ದೈವಾರಾಧನೆ ಮತ್ತು ಕರಾವಳಿಯ ಪವಿತ್ರ ಸಾಂಸ್ಕೃತಿಕ ಆಚರಣೆಗಳನ್ನು ಕೇವಲ ಸಿನಿಮಾ ಮಾಡಿ ದುಡ್ಡು ಗಳಿಸಲು ಮತ್ತು ತಮ್ಮ ಸ್ವಂತ ಲಾಭಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪಗಳು ರಿಷಬ್ ಶೆಟ್ಟಿ ವಿರುದ್ಧ ಮೊದಲಿನಿಂದಲೂ ಇವೆ. ಕರಾವಳಿಯ ಭಾವನಾತ್ಮಕ ಮತ್ತು ಧಾರ್ಮಿಕ ಆಚರಣೆಗಳನ್ನು ವ್ಯಾಪಾರೀಕರಣ ಮಾಡಿದ ವ್ಯಕ್ತಿಯನ್ನು ಅದೇ ಕರಾವಳಿಯ ಪ್ರವಾಸೋದ್ಯಮದ ಮುಖವನ್ನಾಗಿ ಬಿಂಬಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಸ್ಥಳೀಯರ ಒಂದು ವಲಯ ಎತ್ತುತ್ತಿದೆ.



ರಾಹುಲ್ ಗಾಂಧಿ ಅವರ ಹೆಸರನ್ನೇ ಹೇಳಲು ಇಷ್ಟಪಡದ ವ್ಯಕ್ತಿಗೆ ಸರ್ಕಾರಿ ಸವಲತ್ತು ಮತ್ತು ಉನ್ನತ ಸ್ಥಾನ ನೀಡುವುದು ಪಕ್ಷದ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂಬುದು ಕಾರ್ಯಕರ್ತರ ಮುಖ್ಯ ವಾದವಾಗಿದೆ. ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸದಾ ಸವಾಲಿನ ಪರಿಸ್ಥಿತಿಯಲ್ಲಿ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸೈದ್ಧಾಂತಿಕವಾಗಿ ವಿರೋಧ ಬಣದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯನ್ನು ರಾಯಭಾರಿ ಮಾಡಿರುವುದು ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರ ಉತ್ಸಾಹಕ್ಕೆ ತಣ್ಣೀರು ಎರೆಚಿದಂತಾಗಿದೆ. ಈ ನೇಮಕಾತಿಯ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಪ್ರವಾಸೋದ್ಯಮ ಇಲಾಖೆಯ ತಪ್ಪು ನಿರ್ಧಾರವಿದ್ದು, ಇದು ಸರ್ಕಾರದ ದೊಡ್ಡ ಎಡವಟ್ಟು ಎಂದು ಜಾಲತಾಣಗಳಲ್ಲಿ ಕಾಂಗ್ರೆಸ್ ಬೆಂಬಲಿಗರು ಬಹಿರಂಗವಾಗಿಯೇ ಆಕ್ರೋಶ ಹೊರಹಾಕುತ್ತಿದ್ದಾರೆ.



ಇನ್ನೊಂದೆಡೆ, ಸರ್ಕಾರದ ಈ ನಿರ್ಧಾರವನ್ನು ಪ್ರವಾಸೋದ್ಯಮ ಇಲಾಖೆಯು ಕೇವಲ ವಾಣಿಜ್ಯ ಮತ್ತು ಪ್ರವಾಸೋದ್ಯಮದ ದೃಷ್ಟಿಕೋನದಿಂದ ಸಮರ್ಥಿಸಿಕೊಳ್ಳುತ್ತಿದೆ ಎನ್ನಲಾಗಿದೆ. ರಿಷಬ್ ಶೆಟ್ಟಿ ಅವರು ಕಾಂತಾರ ಚಿತ್ರದ ಮೂಲಕ ಕರಾವಳಿಯ ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಪ್ರವಾಸೋದ್ಯಮದ ಅಭಿವೃದ್ಧಿಗೆ ಅವರ ಜನಪ್ರಿಯತೆ ಬಳಕೆಯಾಗಲಿದೆಯೇ ಹೊರತು ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂಬುದು ಸರ್ಕಾರದ ಆಪ್ತ ವಲಯದ ವಾದವಾಗಿದೆ.


ಏನೇ ಆದರೂ, ಸದ್ಯಕ್ಕೆ ಈ ನೇಮಕಾತಿ ಕಾಂಗ್ರೆಸ್ ಪಕ್ಷದ ನಾಯಕರುಗಳು ಅಧಿಕಾರ ಹಿಡಿಯಲು ನಡೆಸುವ ಯಾವುದೇ ಕ್ರಮಗಳನ್ನೂ ಕಾರ್ಯಕರ್ತರು ಒಪ್ಪಿಕೊಳ್ಳಬೇಕು ಎಂಬಂತಾಗಿದೆ. ಕಾರ್ಯಕರ್ತರ ಈ ತೀವ್ರ ಪ್ರತಿರೋಧ ಹಾಗೂ ಸೈದ್ಧಾಂತಿಕ ಬದ್ಧತೆಯ ಪ್ರಶ್ನೆಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಮತ್ತು ಈ ನೇಮಕಾತಿಯನ್ನು ಹಿಂಪಡೆಯುತ್ತಾರಾ ಅಥವಾ ಸಮರ್ಥಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Discover more from

Subscribe now to keep reading and get access to the full archive.

Continue reading