ಸುಳ್ಯ ಪೋಲೀಸ್ ಠಾಣೆಯಲ್ಲಿ ಜೆಸಿಐ ಸುಳ್ಯ ಪಯಸ್ವಿನಿ ವತಿಯಿಂದ ತೆರೆದ ಮನೆ ಕಾರ್ಯಕ್ರಮ

ಸುಳ್ಯ ಪೊಲೀಸ್ ಠಾಣೆಯಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಮಹಾತ್ಮಾ ಗಾಂಧಿ ಮಲ್ನಾಡ್ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜೂನ್ ಹದಿನೆಂಟರಂದು ತೆರೆದ ಮನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣೆಯ ಕಾರ್ಯವೈಖರಿ ಮತ್ತು ವಿವಿಧ ಕಾನೂನುಗಳ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ವಿಸ್ತೃತ ಮಾಹಿತಿ ನೀಡಲಾಯಿತು.


ಠಾಣಾ ಉಪನಿರೀಕ್ಷಕರಾದ ಸಂತೋಷ್ ಕುಮಾರ್ ಬಿ. ಪಿ ರವರು ಪೊಲೀಸ್ ಠಾಣೆಯಲ್ಲಿ ನಡೆಯುವ ದೈನಂದಿನ ಕಾರ್ಯಗಳು, ವಿವಿಧ ವಿಭಾಗಗಳು, ಕರ್ತವ್ಯ ನಿರ್ವಹಿಸುವ ಕೊಠಡಿಗಳು, ಅಲ್ಲಿ ಬಳಸುವ ಉಪಕರಣಗಳು ಹಾಗೂ ಬಂದಿಖಾನೆಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಕೃಷ್ಣ ರವರು ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣೆ ಮತ್ತು ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಿದರೆ, ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಜ್ಯೋತಿಯವರು ಮಕ್ಕಳ ಕಾನೂನು ಹಾಗೂ ಪೋಕ್ಸೋ ಕಾಯಿದೆಯ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷರಾದ ಲತಾಶ್ರೀ ಸುಪ್ರೀತ್ ಮೋಂಟಡ್ಕ, ಎಂ. ಜಿ. ಎಂ ಸಂಸ್ಥೆಯ ಸಂಚಾಲಕರಾದ ದೊಡ್ಡಣ್ಣ ಬರೆಮೇಲು ಮತ್ತು ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಎನ್ ಉಪಸ್ಥಿತರಿದ್ದರು.


ಬಳಿಕ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಕಾನೂನು ಅರಿವಿನ ಪ್ರಶ್ನೆಗಳಿಗೆ ಉಪನಿರೀಕ್ಷಕರು ಸೂಕ್ತ ಉತ್ತರಗಳನ್ನು ನೀಡುವ ಮೂಲಕ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಸಂವಾದದಲ್ಲಿ ಅತಿ ಹೆಚ್ಚು ಪ್ರಶ್ನೆಗಳನ್ನು ಕೇಳಿದ ಮೂರು ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಅತಿಥಿಗಳಿಗೆ ಸ್ಮರಣಿಕೆ ನೀಡಿ ವಂದಿಸಲಾಯಿತು.


ಈ ಸಂದರ್ಭದಲ್ಲಿ ಜೇಸಿಐ ಪದಾಧಿಕಾರಿಗಳಾದ ತಾರಾ ಮಾಧವ ಚೂಂತಾರು, ಸತ್ಯ ಶಾಂತಿ, ತ್ಯಾಗ ಮೂರ್ತಿ, ಪ್ರಶಾಂತ್ ಅಂಬೆಕಲ್ಲು, ಶಾಲಾ ಶಿಕ್ಷಕರುಗಳಾದ ಚಿತ್ರಲೇಖಾ ಮಡಪ್ಪಾಡಿ, ಚೈತ್ರಾ ಬಿ ಡಿ, ಶಿವರಂಜಿನಿ, ದಿವ್ಯ ಎನ್, ದೈಹಿಕ ಶಿಕ್ಷಕ ಜಯಪ್ರಕಾಶ್ ಕೆ, ಮುಖಂಡರಾದ ಸುಪ್ರೀತ್ ಮೋಂಟಡ್ಕ ಹಾಗೂ ಸುಳ್ಯ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಾಜರಿದ್ದರು.

Leave a Reply

Discover more from

Subscribe now to keep reading and get access to the full archive.

Continue reading