


ಸುಳ್ಯ: ಸುಳ್ಯ ತಾಲೂಕಿನ ಇರುವಂಬಳ್ಳ ಪ್ರದೇಶದ ಪ್ರಮುಖ ಸಮಸ್ಯೆಯಾಗಿರುವ ಕಾಂಕ್ರೀಟ್ ರಸ್ತೆ ಮತ್ತು ಕಾಲುಸಂಕ ನಿರ್ಮಾಣದ ಕುರಿತು ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಎಂ. ಬಿ. ಅಬ್ಬಾಸ್ ಅವರು ಮನವಿ ಸಲ್ಲಿಸಿದರು.
ಇರುವಂಬಳ್ಳ ಹಾಗೂ ಮೈತಡ್ಕ ಭಾಗದಲ್ಲಿ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಹಾಗೂ ಮಸೀದಿಗೆ ತೆರಳಲು ಸೂಕ್ತ ಕಾಲುದಾರಿ ಮತ್ತು ವಾಹನ ಸಂಚಾರಕ್ಕೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೆ ವರ್ಷಗಳಿಂದ ಸಂಕಷ್ಟ ಎದುರಿಸುತ್ತಿದ್ದಾರೆ.
ಪ್ರತivarಷ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸುವುದಕ್ಕಷ್ಟೇ ಸೀಮಿತವಾಗಿದ್ದು, ಯಾವುದೇ ಪ್ರತ್ಯಕ್ಷ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂಬ ವಿಷಯವನ್ನು ಸದಸ್ಯರು ಸಚಿವರ ಗಮನಕ್ಕೆ ತಂದರು. ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣವೇ ಕಾಂಕ್ರೀಟ್ ರಸ್ತೆ ಮತ್ತು ಕಾಲುಸಂಕ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಪೂರ್ಣಗೊಳಿಸಬೇಕಾಗಿ ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ರಂಜಿತ್ ರೈ ಮೇನಾಲ ಉಪಸ್ಥಿತರಿದ್ದರು.






