ಕೋರ್ಟ್‌ನಲ್ಲೇ ವಿಚ್ಛೇದನ ಪತ್ರ ಹರಿದು ಮತ್ತೆ ಒಂದಾದ ದಂಪತಿ

ನವದೆಹಲಿ: ದ್ವೇಷ ಸಾಧಿಸಲು ನೂರು ಕಾರಣಗಳಿದ್ದರೂ, ಪ್ರೀತಿ ಮತ್ತು ಕರುಣೆಯ ಒಂದು ಸಣ್ಣ ಕೃತ್ಯ ಹೇಗೆ ಮುರಿದುಬಿದ್ದ ಸಂಸಾರವನ್ನು ಮತ್ತೆ ಒಂದು ಮಾಡಬಲ್ಲದು ಎಂಬುದಕ್ಕೆ ದೆಹಲಿ ನ್ಯಾಯಾಲಯದಲ್ಲಿ ನಡೆದ ಈ ಘಟನೆಯೇ ಸಾಕ್ಷಿಯಾಗಿದೆ. ವರದಕ್ಷಿಣೆ ಕಿರುಕುಳ ಹಾಗೂ ಕೋರ್ಟ್ ಕಟುತನದೊಂದಿಗೆ ವಿಚ್ಛೇದನದ ಹಂತ ತಲುಪಿದ್ದ ಶಿಖಾ ಸಿಂಗ್ ಮತ್ತು ಸೌರಭ್ ಅವರ ದಾಂಪತ್ಯ ಜೀವನದಲ್ಲಿ ಈಗ ಸಿನಿಮಾ ಶೈಲಿಯ ಅದ್ಭುತ ಸುಖಾಂತ್ಯ ಕಂಡಿದೆ.

ಇವರ ವಿವಾಹವು ಎರಡು ವರ್ಷಗಳ ಹಿಂದೆ ಅತ್ಯಂತ ಅದ್ಧೂರಿಯಾಗಿ ನಡೆದಿತ್ತು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಸಣ್ಣಪುಟ್ಟ ಕಾರಣಗಳಿಗೆ ಇಬ್ಬರ ನಡುವೆ ಬಿರುಕು ಮೂಡಿತು. ಈ ಕೌಟುಂಬಿಕ ಕಲಹ ಎಷ್ಟು ದೊಡ್ಡದಾಯಿತೆಂದರೆ, ಶಿಖಾ ತನ್ನ ಪತಿ ಸೌರಭ್ ಮತ್ತು ಆತನ ಇಡೀ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳದ ಗಂಭೀರ ಕೇಸ್ ದಾಖಲಿಸಿದರು. ಅಷ್ಟೇ ಅಲ್ಲದೆ, ಇಬ್ಬರೂ ಕಾನೂನಾತ್ಮಕವಾಗಿ ಬೇರೆಯಾಗಲು ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದರು.

ಮಗಳ ಪರವಾಗಿ ಕೋರ್ಟ್‌ನಲ್ಲಿ ಕೇಸ್ ಹೋರಾಡಲು ಶಿಖಾ ಅವರ ತಂದೆ ತಮ್ಮ ಜೀವಮಾನದ ಸಂಪಾದನೆಯನ್ನೆಲ್ಲಾ ನೀರು ತರ ಖರ್ಚು ಮಾಡಿದ್ದರು. ಕಾನೂನು ಹೋರಾಟದ ದೆಸೆಯಿಂದ ಆರ್ಥಿಕವಾಗಿ ಸಂಪೂರ್ಣವಾಗಿ ಕುಸಿದುಹೋಗಿದ್ದ ಅವರ ಆರೋಗ್ಯವೂ ಕ್ಷೀಣಿಸತೊಡಗಿತ್ತು. ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತೆಂದರೆ, ಕೊನೆಗೆ ಸರಿಯಾದ ಚಿಕಿತ್ಸೆ ಕೊಡಿಸಿಕೊಳ್ಳಲು ಕೂಡ ಅವರ ಬಳಿ ಹಣವಿರಲಿಲ್ಲ. ತೀವ್ರ ಮಾನಸಿಕ ಒತ್ತಡ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದಾಗಿ ಅವರಿಗೆ ಹಠಾತ್ ಹೃದಯಾಘಾತ ಸಂಭವಿಸಿತು. ತಕ್ಷಣವೇ ಅವರನ್ನು ಗಂಭೀರ ಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.

ತನ್ನ ಇಡೀ ಕುಟುಂಬವನ್ನು ಜೈಲಿಗಟ್ಟಲು ಯತ್ನಿಸಿ, ಕೋರ್ಟ್ ಮೆಟ್ಟಿಲೇರಿಸಿದ್ದ ಹೆಂಡತಿಯ ತಂದೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂಬ ವಿಷಯ ಸೌರಭ್ ಅವರಿಗೆ ತಿಳಿಯಿತು. ಸಾಮಾನ್ಯವಾಗಿದ್ದರೆ ಇಂತಹ ಪರಿಸ್ಥಿತಿಯಲ್ಲಿ ಯಾರಾದರೂ ದೂರ ಉಳಿಯುತ್ತಿದ್ದರು. ಆದರೆ ಸೌರಭ್ ಹಳೆಯ ಎಲ್ಲಾ ಕಹಿ ನೆನಪುಗಳನ್ನು ಮರೆತು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಧಾವಿಸಿದರು. ಮಾವನ ಪರಿಸ್ಥಿತಿ ಕಂಡು ಕರಗಿದ ಅವರು, ತಕ್ಷಣವೇ ಅಲ್ಲಿಂದ ಬಿಡುಗಡೆಗೊಳಿಸಿ ಗುರ್ಗಾಂವ್‌ನ ಅತ್ಯಂತ ಪ್ರತಿಷ್ಠಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾದ ಮೇದಾಂತಕ್ಕೆ ದಾಖಲಿಸಿದರು. ಚಿಕಿತ್ಸೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು, ಲಕ್ಷಾಂತರ ರೂಪಾಯಿಗಳನ್ನು ನೀಡಿ ಮಾವನ ಜೀವ ಉಳಿಸಿದರು. ಸೌರಭ್ ಅವರ ಈ ನಿಸ್ವಾರ್ಥ ಕೃತ್ಯದಿಂದಾಗಿ ಶಿಖಾ ತಂದೆ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ.

ಈ ಘಟನೆಯ ನಂತರ ದೆಹಲಿ ನ್ಯಾಯಾಲಯದಲ್ಲಿ ಇಬ್ಬರ ವಿಚ್ಛೇದನದ ಪ್ರಕರಣದ ಮುಂದಿನ ವಿಚಾರಣೆ ನಿಗದಿಯಾಗಿತ್ತು. ತನ್ನ ಇಡೀ ಕುಟುಂಬವನ್ನು ನಡುರಸ್ತೆಗೆ ತಂದವರ ವಿರುದ್ಧ ಸೌರಭ್ ತೋರಿಸಿದ ಈ ಮಹತ್ತರ ಮಾನವೀಯತೆ ಶಿಖಾ ಅವರ ಕಣ್ಣು ತೆರೆಸಿತ್ತು. ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಶಿಖಾ ಎಲ್ಲರ ಸಮ್ಮುಖದಲ್ಲೇ ತನಗಾಗಿಯೇ ಸಿದ್ಧವಾಗಿದ್ದ ಎಲ್ಲಾ ವಿಚ್ಛೇದನದ ಪತ್ರಗಳನ್ನು ತಕ್ಷಣವೇ ಹರಿದು ಹಾಕಿದರು. ಅಲ್ಲದೆ ಕೋರ್ಟ್ ರೂಮ್‌ನಲ್ಲೇ ಪತಿ ಸೌರಭ್‌ನನ್ನು ಗಟ್ಟಿಯಾಗಿ ಅಪ್ಪಿಕೊಂಡು ಕಣ್ಣೀರು ಹಾಕುತ್ತಾ ತನ್ನ ತಪ್ಪಿನ ಕ್ಷಮೆಯಾಚಿಸಿದರು.

ಈ ಅಪರೂಪದ ದೃಶ್ಯವನ್ನು ಕಂಡು ನ್ಯಾಯಾಧೀಶರು ಹಾಗೂ ಅಲ್ಲಿದ್ದ ವಕೀಲರು ಕೂಡ ಭಾವುಕರಾದರು. ದ್ವೇಷವನ್ನು ಕೇವಲ ಪ್ರೀತಿ ಮತ್ತು ಕರುಣೆಯಿಂದ ಮಾತ್ರ ಗೆಲ್ಲಲು ಸಾಧ್ಯ ಎಂಬುದನ್ನು ಸೌರಭ್ ನಿರೂಪಿಸಿದ್ದು, ಈಗ ಈ ದಂಪತಿಗಳು ಹಳೆಯ ಕಹಿ ನೆನಪುಗಳನ್ನು ಮರೆತು ಮತ್ತೆ ಹೊಸ ಜೀವನವನ್ನು ಆರಂಭಿಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading