ಬೆಂಗಳೂರು: ಬೆಂಗಳೂರು ಸರಣಿ ಸ್ಫೋಟ ಪ್ರಕರಣದಲ್ಲಿ 29ನೇ ಆರೋಪಿಯಾಗಿದ್ದ, ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲದ ಅಬ್ದುಲ್ ಖಾದರ್ (64) ಅವರು ಇಂದು ಮಧ್ಯಾಹ್ನ ಜೈಲಿನಲ್ಲೇ ನಿಧನರಾಗಿದ್ದಾರೆ. ಕಳೆದ ಸುಮಾರು 17 ವರ್ಷಗಳಿಂದ ಅವರು ಬೆಂಗಳೂರಿನ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿ ದಿನದೂಡುತ್ತಿದ್ದರು.
ಮೃತ ಅಬ್ದುಲ್ ಖಾದರ್ ಅವರು ತೀವ್ರ ಮಧುಮೇಹ (ಡಯಾಬಿಟಿಸ್), ಮೂತ್ರಪಿಂಡ (ಕಿಡ್ನಿ) ವೈಫಲ್ಯ ಹಾಗೂ ಎರಡೂ ಕಣ್ಣುಗಳ ದೃಷ್ಟಿ ದೋಷ ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಮಧುಮೇಹ ಉಲ್ಬಣಗೊಂಡ ಹಿನ್ನೆಲೆಯಲ್ಲಿ 2020 ರಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಅವರ ಎಡಗಾಲನ್ನು ಕತ್ತರಿಸಲಾಗಿತ್ತು, ಅಂದಿನಿಂದ ಅವರು ವೀಲ್‌ಚೇರ್‌ನಲ್ಲೇ ಕಾಲ ಕಳೆಯುತ್ತಿದ್ದರು.
ಅವರಿಗೆ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸುವಂತೆ ವಕೀಲರು ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯವು 2026 ಜೂನ್ 22 ರೊಳಗೆ ಅಗತ್ಯ ಚಿಕಿತ್ಸೆ ನೀಡುವಂತೆ ಜೈಲಿನ ಚೀಫ್ ಸೂಪರಿಂಟೆಂಡೆಂಟ್ ಅವರಿಗೆ ಆದೇಶ ಕೂಡ ನೀಡಿತ್ತು. ಆದರೆ, ಕೋರ್ಟ್ ಆದೇಶವಿದ್ದರೂ ಜೈಲು ಅಧಿಕಾರಿಗಳು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊರಗಿನ ಆಸ್ಪತ್ರೆಗಳಿಗೆ ಕರೆದೊಯ್ದಿರಲಿಲ್ಲ ಮತ್ತು ಅವರಿಗೆ ಸೂಕ್ತ ಆರೈಕೆ ಸಿಕ್ಕಿರಲಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಂತಿಮವಾಗಿ ದೇಹದ ವಿವಿಧ ಅಂಗಾಂಗಗಳ ವೈಫಲ್ಯ ಹಾಗೂ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು ಸ್ಫೋಟ ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ಅಬ್ದುಲ್ ಖಾದರ್ ಅವರ ಮೇಲೆ ಅತ್ಯಂತ ಕಡಿಮೆ ಪ್ರಮಾಣದ ಅಪರಾಧವನ್ನು ಹೊರಿಸಲಾಗಿತ್ತು. ಪೊಲೀಸರು ಮಾಡಿದ್ದ ಆರೋಪ ಒಂದು ವೇಳೆ ಸಾಬೀತಾಗಿದ್ದರೂ ಸಹ ಅವರಿಗೆ ಗರಿಷ್ಠ ಮೂರು ವರ್ಷಗಳಷ್ಟೇ ಶಿಕ್ಷೆಯಾಗುತ್ತಿತ್ತು. ಆದರೆ, ಕೇವಲ 3 ವರ್ಷಗಳ ಶಿಕ್ಷೆಯಾಗಬಹುದಾದ ಕೃತ್ಯಕ್ಕಾಗಿ ಅವರು ಬರೋಬ್ಬರಿ 17 ವರ್ಷಗಳ ಕಾಲ (ಅಪರಾಧಕ್ಕೆ ಸಿಗಬಹುದಾದ ಶಿಕ್ಷೆಗಿಂತ 6 ಪಟ್ಟು ಹೆಚ್ಚು ಕಾಲ) ವಿಚಾರಣಾಧೀನ ಕೈದಿಯಾಗಿಯೇ ಜೈಲು ಶಿಕ್ಷೆ ಅನುಭವಿಸುವಂತಾಯಿತು.
ಜೈಲುವಾಸದ ಅವಧಿಯಲ್ಲಿ ವಿಶೇಷ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ಒಟ್ಟು 6 ಬಾರಿ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಗಿದ್ದರೂ, ಪ್ರತಿ ಬಾರಿಯೂ ಅದನ್ನು ತಿರಸ್ಕರಿಸಲಾಗಿತ್ತು. ತೀವ್ರ ಅನಾರೋಗ್ಯದ ಸ್ಥಿತಿಯಲ್ಲಿದ್ದಾಗಲೂ ನ್ಯಾಯಾಲಯದ ಆದೇಶಕ್ಕೆ ಸ್ಪಂದಿಸದ ಜೈಲು ಅಧಿಕಾರಿಗಳ ಕ್ರಮ ಹಾಗೂ ಜಾಮೀನು ನಿರಾಕರಣೆಯು ತೀವ್ರ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ನ್ಯಾಯ ನಿರಾಕರಣೆಗೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಅಬ್ದುಲ್ ಖಾದರ್ ಅವರ ಪಾರ್ಥಿವ ಶರೀರವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.

