ಅರಂತೋಡು ಭಾಗದಲ್ಲಿ ರಾತ್ರಿ ಹೊತ್ತು ನಿರಂತರ ವಿದ್ಯುತ್ ಅಡಚಣೆ: ಪರಿಹಾರಕ್ಕೆ ಕೆ.ಡಿ.ಪಿ ಸದಸ್ಯ ಅಶ್ರಫ್ ಗುಂಡಿ ಆಗ್ರಹ

ಅರಂತೋಡು: ಮಳೆಗಾಲ ಪ್ರಾರಂಭವಾದಾಗಿನಿಂದ ತೊಡಿಕಾನ ಫೀಡರ್‌ನಿಂದ ಸರಬರಾಜು ಆಗುವ ವಿದ್ಯುತ್ ಅರಂತೋಡು, ತೊಡಿಕಾನ ಮತ್ತು ಪೆರಾಜೆ ಗ್ರಾಮಗಳಲ್ಲಿ ರಾತ್ರಿ ಹೊತ್ತು ನಿರಂತರವಾಗಿ ಅಡಚಣೆಯಾಗುತ್ತಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬಗ್ಗೆ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಪರಿಹರಿಸಲು ಅವರು ವಿಫಲರಾಗಿದ್ದಾರೆ ಎಂದು ಕೆ.ಡಿ.ಪಿ ಸದಸ್ಯ ಅಶ್ರಫ್ ಗುಂಡಿ ಆರೋಪಿಸಿದ್ದಾರೆ.

ರಾತ್ರಿ ಮತ್ತು ಬೆಳಗಿನ ಜಾವದ ಸಮಯದಲ್ಲಿ ನಿರಂತರ ವಿದ್ಯುತ್ ಕೈಕೊಡುತ್ತಿರುವುದರಿಂದ, ಬೆಳಿಗ್ಗೆ ಕೆಲಸಕ್ಕೆ ತೆರಳುವ ಉದ್ಯೋಗಸ್ಥರಿಗೆ ಹಾಗೂ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಅಷ್ಟೇ ಅಲ್ಲದೆ, ವಿದ್ಯುತ್ ವ್ಯತ್ಯಯದಿಂದಾಗಿ ಗ್ರಾಮ ಪಂಚಾಯತ್‌ನಿಂದ ಸರಬರಾಜು ಆಗುವ ಸಾರ್ವಜನಿಕ ಕುಡಿಯುವ ನೀರಿಗೂ ಭಾರೀ ತೊಂದರೆ ಉಂಟಾಗಿದೆ ಎಂದು ಅವರು ವಿವರಿಸಿದ್ದಾರೆ

ಸುಳ್ಯ ಫೀಡರ್‌ನಿಂದ ಸರಬರಾಜು ಆಗುವ ವಿದ್ಯುತ್ ಅರಂಬೂರುವರೆಗೆ, ಚೆಸ್ಕಾಂ-ಮಡಿಕೇರಿಯಿಂದ ಸರಬರಾಜು ಆಗುವ ವಿದ್ಯುತ್ ಕಲ್ಲುಗುಂಡಿವರೆಗೆ ಹಾಗೂ ಗುತ್ತಿಗಾರು ಫೀಡರ್‌ನಿಂದ ಮರ್ಕಂಜದವರೆಗೆ ಸುಲಲಿತವಾಗಿ ವಿದ್ಯುತ್ ಸರಬರಾಜು ಆಗುತ್ತಿದೆ. ಆದರೆ, ಇವುಗಳ ಮಧ್ಯದಲ್ಲಿ ಬರುವ ಪೆರಾಜೆ, ಅರಂತೋಡು ಮತ್ತು ತೊಡಿಕಾನ ಗ್ರಾಮಗಳಿಗೆ ಮಾತ್ರ ನಿರಂತರ ವಿದ್ಯುತ್ ಅಡಚಣೆಯಾಗುತ್ತಿದ್ದು, ಸಾರ್ವಜನಿಕರು ಇಲಾಖೆಯ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಹೀಗಾಗಿ, ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳು, ಕ್ಷೇತ್ರದ ಶಾಸಕರು ಹಾಗೂ ಲೋಕಸಭಾ ಸದಸ್ಯರು ಈ ಕೂಡಲೇ ಮಧ್ಯಪ್ರವೇಶಿಸಿ, ಈ ಭಾಗದ ವಿದ್ಯುತ್ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೆ.ಡಿ.ಪಿ ಸದಸ್ಯ ಅಶ್ರಫ್ ಗುಂಡಿ ಅವರು ಪ್ರಕಟಣೆಯ ಮೂಲಕ ತೀವ್ರವಾಗಿ ಆಗ್ರಹಿಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading