ಸಣ್ಣ ನೋವಿಗೆ ಆಸ್ಪತ್ರೆಗೆ ದಾಖಲಾದ ಯುವಕ ಮೃತ್ಯು: ಉಪ್ಪಿನಂಗಡಿ ಆಸ್ಪತ್ರೆಯವರ ವಿರುದ್ಧ ಮೃತರ ಕುಟುಂಬದ ಆರೋಪಗಳೇನು?

ಉಪ್ಪಿನಂಗಡಿ ಸಮೀಪದ ಗೇರುಕಟ್ಟೆಯ ನಿವಾಸಿ ಮೊಹಮ್ಮದ್ ಶರೀಫ್ ಎಂಬ ಯುವಕನ ಅಕಾಲಿಕ ಮರಣವು ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಉಪ್ಪಿನಂಗಡಿಯ  ಆಸ್ಪತ್ರೆಯೊಂದರ ವೈದ್ಯರ ಬೇಜವಾಬ್ದಾರಿ ಹಾಗೂ ತಪ್ಪು ಚಿಕಿತ್ಸೆಯೇ ಶರೀಫ್ ಅವರ ಸಾವಿಗೆ ನೇರ ಕಾರಣ ಎಂದು ಮೃತರ ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ.

ಆಸ್ಪತ್ರೆಯು ತನ್ನ ತಪ್ಪನ್ನು ಮುಚ್ಚಿಹಾಕಲು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದು, ಘಟನೆಯ ಸತ್ಯಾಸತ್ಯತೆಯನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.
ಕಳೆದ ಗುರುವಾರ ಶರೀಫ್ ಅವರಿಗೆ ಸಾಕು ಕರು ಗುದ್ದಿದ ಪರಿಣಾಮ ಅವರು ಕೆಳಗೆ ಬಿದ್ದಿದ್ದರು. ನಂತರ ತೀವ್ರ ದೇಹದ ನೋವು ಕಾಣಿಸಿಕೊಂಡಾಗ ತಕ್ಷಣ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ನಡೆಸಿದ ಎಕ್ಸ್ ರೇ ಮತ್ತು ಸ್ಕ್ಯಾನಿಂಗ್ ವರದಿಗಳಲ್ಲಿ ಹೊಟ್ಟೆಯೊಳಗೆ ಯಾವುದೇ ರೀತಿಯ ಆಂತರಿಕ ಗಾಯಗಳು ಪತ್ತೆಯಾಗಿರಲಿಲ್ಲ. ಮೂತ್ರಪಿಂಡದಲ್ಲಿ ಸಣ್ಣ ಕಲ್ಲಿನ ಸಮಸ್ಯೆ ಬಿಟ್ಟರೆ ಬೇರೇನೂ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದರು. ಬಿದ್ದ ಕಾರಣಕ್ಕೆ ಎರಡು ಮೂರು ದಿನ ನೋವಿರುತ್ತದೆ ಎಂದು ಹೇಳಿ ಮನೆಗೆ ಕಳುಹಿಸಿದ್ದರು. ಆದರಂತೆ ಅಂದು ರಾತ್ರಿ ಶರೀಫ್ ಅವರು ಮನೆಗೆ ಮರಳಿದ್ದರು.

ಶುಕ್ರವಾರ ಮಧ್ಯಾಹ್ನ ಶರೀಫ್ ಅವರಿಗೆ ಮತ್ತೆ ಹೊಟ್ಟೆನೋವು ಮತ್ತು ಹೊಟ್ಟೆ ಉಬ್ಬರ ಕಾಣಿಸಿಕೊಂಡಾಗ, ತಕ್ಷಣ ಹತ್ತಿರದ ಉಪ್ಪಿನಂಗಡಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಮಂಗಳೂರಿನ ಸ್ಕ್ಯಾನಿಂಗ್ ವರದಿಯನ್ನು ನೋಡಿ, ಮೋಷನ್ ಸರಿಯಾಗಿ ಆಗದ ಕಾರಣ ಹೊಟ್ಟೆ ಉಬ್ಬರಿಸಿದೆ ಎಂದು ಹೇಳಿ ಎನಿಮಾ ಚಿಕಿತ್ಸೆ ನೀಡಲು ಮುಂದಾದರು. ಎನಿಮಾ ನೀಡುವ ಸಂದರ್ಭದಲ್ಲಿ ಶರೀಫ್ ಅವರು ನೋವಿನಿಂದ ಕಿರುಚಾಡಿದ್ದನ್ನು ಇಡೀ ಆಸ್ಪತ್ರೆ ನೋಡಿದೆ. ಗಾಬರಿಗೊಂಡ ಅವರ ಪತ್ನಿ ಕೋಣೆಯ ಬಾಗಿಲು ತೆರೆಯಲು ಹೋದಾಗ ಅಲ್ಲಿದ್ದ ನರ್ಸ್‌ಗಳು ಗದರಿದ್ದಾರೆ. ಚಿಕಿತ್ಸೆಯ ನಂತರವೂ ಶರೀಫ್ ಅವರು ಪೈಪ್ ಹಾಕಿ ನನ್ನನ್ನು ಕೊಂದರು, ಉರಿ ತಡೆಯಲು ಆಗುತ್ತಿಲ್ಲ ಎಂದು ಗೋಳಾಡುತ್ತಿದ್ದರು ಎಂದು ಮೃತರ ಸಹೋದರ ಕಣ್ಣೀರು ಹಾಕಿದ್ದಾರೆ.

ಶನಿವಾರ ಬೆಳಿಗ್ಗೆ ರೋಗಿಯ ಸ್ಥಿತಿ ಗಂಭೀರವಾದಾಗ, ಆಸ್ಪತ್ರೆಯ ಬಿಲ್ ಪಡೆದುಕೊಳ್ಳದೆ, ಅಧಿಕೃತ ಡಿಸ್ಚಾರ್ಜ್ ಸಮ್ಮರಿ ನೀಡದೆ, ತಮ್ಮದೇ ಆಂಬ್ಯುಲೆನ್ಸ್‌ನಲ್ಲಿ ಇಬ್ಬರು ಮಹಿಳೆಯರ ಜೊತೆ ತುರ್ತಾಗಿ ಮಂಗಳೂರಿಗೆ ಸಾಗಿಸಿದ್ದು ಏಕೆ ಎಂದು ಕೇಳಿದ್ದಾರೆ. ಕೆಎಂಸಿ ಆಸ್ಪತ್ರೆಯವರು ನಿಯಮದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಆದರೆ ಸೂರ್ಯ ಆಸ್ಪತ್ರೆಯಲ್ಲೇ ಒಂದು ದಿನ ರೋಗಿ ಇದ್ದರೂ ಪೊಲೀಸರಿಗೆ ಮಾಹಿತಿ ನೀಡದೆ ಮುಚ್ಚಿಟ್ಟಿದ್ದು ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಿತಿ ಹದಗೆಟ್ಟ ನಂತರ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಮತ್ತೆ ದಾಖಲಿಸಿ ಸಿಟಿ ಸ್ಕ್ಯಾನ್ ಮಾಡಿದಾಗ ಧೃತಿಗೆಡಿಸುವ ಸತ್ಯ ಹೊರಬಿದ್ದಿದೆ. ಶರೀಫ್ ಅವರ ದೊಡ್ಡ ಕರುಳಿನ ಒಂದು ಭಾಗ ತೂತಾಗಿ, ಮಲವೆಲ್ಲ ಹೊಟ್ಟೆಯೊಳಗೆ ಸೇರಿ ಶ್ವಾಸಕೋಶ ಹಾಗೂ ಕಿಡ್ನಿಗಳಿಗೆ ಹಾನಿ ಮಾಡಿತ್ತು. ವೈದ್ಯರ ಪ್ರಕಾರ, ಗುರುವಾರ ರಾತ್ರಿಯ ಸ್ಕ್ಯಾನಿಂಗ್‌ನಲ್ಲಿ ಎಲ್ಲವೂ ಸರಿಯಾಗಿತ್ತು. ಹೊರಗಿನಿಂದ ಬಲವಾದ ವಸ್ತು ಒಳಗೆ ಹೋದಾಗ ಮಾತ್ರ ಇಂತಹ ಗಾಯ ಸಾಧ್ಯ. ಸೂರ್ಯ ಆಸ್ಪತ್ರೆಯಲ್ಲಿ ನೀಡಲಾದ ಎನಿಮಾ ಪ್ರಕ್ರಿಯೆಯ ಎಡವಟ್ಟಿನಿಂದಲೇ ಕರುಳು ತೂತಾಗಿದೆ ಎಂಬುದು ಕುಟುಂಬಸ್ಥರ ಬಲವಾದ ಶಂಕೆಯಾಗಿದೆ.
ಕೇವಲ ಆರು ರಿಂದ ಏಳು ಸಾವಿರ ರೂಪಾಯಿಗಳ ಪ್ಯಾಕೇಜ್ ಆಸೆಗೆ ಬಿದ್ದು ಉಪ್ಪಿನಂಗಡಿ ಆಸ್ಪತ್ರೆಯವರು ಶರೀಫ್ ಅವರ ಬಲಿ ಪಡೆದಿದ್ದಾರೆ. ಎರಡು ವರ್ಷದ ಹೆಣ್ಣು ಮಗು ಅಪ್ಪ ಅಪ್ಪ ಎಂದು ಚೀರಾಡುತ್ತಿರುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ. ಮೂರು ಪುಟ್ಟ ಮಕ್ಕಳನ್ನು ಇವತ್ತು ಅನಾಥರನ್ನಾಗಿ ಮಾಡಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಡ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ. ಸುಳ್ಳು ಸುದ್ದಿ ಹಬ್ಬಿಸಿ ಜನರ ಹಾದಿ ತಪ್ಪಿಸುತ್ತಿರುವ ಆಸ್ಪತ್ರೆಯ ವಿರುದ್ಧ ಮತ್ತು ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ನೊಂದ ಕುಟುಂಬದವರು ಮಾಧ್ಯಮಗಳ ಮೂಲಕ ಒತ್ತಾಯಿಸಿದ್ದಾರೆ.

(ವರದಿ: ಗೇರುಕಟ್ಟೆ ಮೊಹಮ್ಮದ್ ಶರೀಫ್ ಅವರ ಕುಟುಂಬಸ್ಥರ ಹೇಳಿಕೆಗಳ ಆಧಾರದ ಮೇಲೆ)

Leave a Reply

Discover more from

Subscribe now to keep reading and get access to the full archive.

Continue reading