ಬಿ.ಸಿ.ರೋಡ್: ಕಳೆದ ಕೆಲದಿನಗಳ ಹಿಂದೆ ನಾಪತ್ತೆಯಾಗಿದ್ದ ಬಿ.ಸಿ.ರೋಡ್ ಪರಿಸರದ ರಿಕ್ಷಾ ಚಾಲಕ ಹಾಗೂ ಸಾಮಾಜಿಕ ಕಾರ್ಯಕರ್ತ ಇರ್ಫಾನ್ ಗೂಡಿನಬಳಿ ಅವರ ಮೃತದೇಹವು ನೇತ್ರಾವತಿ ನದಿ ತೀರದಲ್ಲಿ ವಿರೂಪಗೊಂಡ ಸ್ಥಿತಿಯಲ್ಲಿ ಮೊನ್ನೆ ಪತ್ತೆಯಾಗಿದೆ. ಉತ್ತಮ ಈಜುಗಾರ ನದಿಯಲ್ಲಿ ಶವವಾಗಿ ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ತೀವ್ರ ನಿಗೂಢತೆ ಮತ್ತು ಸಂಶಯವನ್ನು ಮೂಡಿಸಿದೆ.

ಇರ್ಫಾನ್ ಅವರು ಕಳೆದ ಎರಡು ದಿನಗಳ ಹಿಂದೆ ಹಠಾತ್ತಾಗಿ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಮತ್ತು ಸ್ನೇಹಿತರು ಅವರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. ಇಂದು ಬಿ.ಸಿ.ರೋಡ್ ಆಸುಪಾಸಿನ ನೇತ್ರಾವತಿ ನದಿ ತೀರದಲ್ಲಿ ಅವರ ಕಳೇಬರ ಪತ್ತೆಯಾಗಿದ್ದು, ಮೃತದೇಹವು ವಿರೂಪಗೊಂಡ ಸ್ಥಿತಿಯಲ್ಲಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇರ್ಫಾನ್ ಅವರು ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದರೂ, ನೇತ್ರಾವತಿ ನದಿಯಲ್ಲಿ ಯಾರಾದರೂ ಮುಳುಗಿದಾಗ ಅಥವಾ ಆತ್ಮಹತ್ಯೆಗೆ ಯತ್ನಿಸಿದಾಗ ತಕ್ಷಣ ಸ್ಪಂದಿಸಿ ಜೀವ ಉಳಿಸುತ್ತಿದ್ದರೆನ್ನಲಾಗಿದೆ. ನದಿಯ ಆಳ ಮತ್ತು ಅಗಲಗಳನ್ನು ಚೆನ್ನಾಗಿ ಬಲ್ಲ, ಅತ್ಯುತ್ತಮ ಈಜುಗಾರನಾಗಿದ್ದ ಇರ್ಫಾನ್ ಆಕಸ್ಮಿಕವಾಗಿ ನದಿಗೆ ಬಿದ್ದು ಮುಳುಗಲು ಸಾಧ್ಯವೇ ಇಲ್ಲ ಎಂಬುದು ಸ್ಥಳೀಯರ ಬಲವಾದ ವಾದವಾಗಿದೆ. ಸದಾ ಹಸನ್ಮುಖಿ ಹಾಗೂ ಸಾಮಾಜಿಕ ಕೆಲಸಗಳಲ್ಲಿ ಮುಂಚೂಣಿಯಲ್ಲಿದ್ದ ಇರ್ಫಾನ್ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ದುರ್ಬಲ ಮನಸ್ಕರಲ್ಲ ಎಂದು ಅವರ ಆಪ್ತ ವಲಯ ಸ್ಪಷ್ಟಪಡಿಸಿದೆ.

ಹೀಗಾಗಿ, ಈ ಸಾವಿನ ಹಿಂದೆ ಯಾವುದೋ ನಿಗೂಢ ಕಾರಣ ಅಡಗಿದೆ ಹಾಗೂ ಇದು ವ್ಯವಸ್ಥಿತ ಕೊಲೆಯಾಗಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಮೃತದೇಹ ವಿರೂಪಗೊಂಡಿರುವುದು ಈ ಸಂಶಯಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಇರ್ಫಾನ್ ಅವರ ನಿಗೂಢ ಸಾವು ಬಿ.ಸಿ.ರೋಡ್ ಮತ್ತು ಗೂಡಿನಬಳಿ ಪರಿಸರದಲ್ಲಿ ತೀವ್ರ ಆಕ್ರೋಶ ಮತ್ತು ಕಳವಳಕ್ಕೆ ಕಾರಣವಾಗಿದೆ. ಪೊಲೀಸರು ಈ ಪ್ರಕರಣವನ್ನು ಕೇವಲ ಅಸಹಜ ಸಾವು ಎಂದು ಪರಿಗಣಿಸದೆ, ಉನ್ನತ ಮಟ್ಟದ ಸೂಕ್ತ ತನಿಖೆ ನಡೆಸಬೇಕು. ಒಂದು ವೇಳೆ ಇದು ವ್ಯವಸ್ಥಿತ ಕೊಲೆಯಾಗಿದ್ದರೆ, ಇದರ ಹಿಂದೆ ಇರುವ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಿ ತಕ್ಕ ಶಿಕ್ಷೆ ವಿಧಿಸಬೇಕು. ಆ ಮೂಲಕ ಇರ್ಫಾನ್ ಸಾವಿನ ಹಿಂದಿನ ಸಂಪೂರ್ಣ ಸತ್ಯಾಸತ್ಯತೆ ಶೀಘ್ರದಲ್ಲೇ ಹೊರಬರಬೇಕೆಂದು ಸಾರ್ವಜನಿಕರು ಹಾಗೂ ಅವರ ಕುಟುಂಬಸ್ಥರು ತೀವ್ರವಾಗಿ ಆಗ್ರಹಿಸಿದ್ದಾರೆ.


