ಅರಸು, ಹೆಗಡೆ ಸೇರಿದಂತೆ ಮಾಸ್ ಲೀಡರ್ ಸರಣಿಯ ಕೊನೆಯ ಕೊಂಡಿ:ಜನರ ಮುಖ್ಯ ಮಂತ್ರಿಯ ವಿದಾಯದ ಹೊತ್ತು ಒಂದಷ್ಟು ಮಾತು

✒ಸಾಹುಕಾರ್ ಅಚ್ಚು

ಕರ್ನಾಟಕ ರಾಜಕಾರಣದ ದೈತ್ಯ ಶಕ್ತಿ, ಶೋಷಿತರ ಧ್ವನಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಎಂ ಪಟ್ಟದಿಂದ ಕೆಳಗಿಳಿಯುತ್ತಿರುವ ಈ ಕ್ಷಣ, ಕರುನಾಡ ರಾಜಕೀಯ ಇತಿಹಾಸದ ಒಂದು ಸುವರ್ಣ ಅಧ್ಯಾಯ ಮುಕ್ತಾಯಗೊಂಡಂತೆ ಭಾಸವಾಗುತ್ತಿದೆ. ಇತ್ತೀಚೆಗೆ ಸಿನಿಮಾವೊಂದರ ನೃತ್ಯ ಸಂಯೋಜನೆಯಲ್ಲಿ ನಟರೊಬ್ಬರು ನನಗೆ ಸಿದ್ದರಾಮಯ್ಯನವರು ಹಾಕಿದ ಸ್ಟೆಪ್‌ಗಳೇ ಬೇಕು ಎಂದು ಹಠಹಿಡಿದು ಚಿತ್ರೀಕರಿಸಿದ ಪ್ರಸಂಗ ಕೇವಲ ಒಂದು ಉದಾಹರಣೆಯಷ್ಟೇ. ಇದು ಅವರು ಜನರ ಮನಸ್ಸಿನಲ್ಲಿ ಎಷ್ಟು ಆಳವಾಗಿ ಬೇರೂರಿದ್ದಾರೆ, ಅವರ ಮ್ಯಾನರಿಸಂ ಎಷ್ಟು ಜನಪ್ರಿಯವಾಗಿದೆ ಎಂಬುದಕ್ಕೆ ಸಾಕ್ಷಿ. ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಿರುವ ಈ ಸಂದರ್ಭದಲ್ಲಿ, ಅವರ ಸುದೀರ್ಘ ರಾಜಕೀಯ ಪಯಣದ ಕಡೆ ಒಂದು ಹಿನ್ನೋಟ.

ಇವನೇನು ಕುರಿ ಎಣಿಸುವವನು, ಇವನಿಗೆ ಲೆಕ್ಕಾಚಾರ ಗೊತ್ತೇ ಎಂದು ಆರಂಭದಲ್ಲಿ ವಿರೋಧಿಗಳು ಆಡಿದ ಕುಹಕದ ಮಾತುಗಳು ಇತಿಹಾಸದ ಕಸದ ಬುಟ್ಟಿಗೆ ಸೇರಿವೆ. ಹಳ್ಳಿ ಭಾಷೆ, ಗಡಸು ಧ್ವನಿ, ಮಂಡಿ ಗಂಟಿನ ಪಂಚೆ ಉಟ್ಟು ಹಳ್ಳಿಗಾಡಿನ ಸೊಗಡಿನಲ್ಲೇ ವಿರೋಧಿಗಳ ಮಂಡಿ ಮುರಿಯುತ್ತಿದ್ದ ಸಿದ್ದರಾಮಯ್ಯ, ಪಕ್ಕಾ ಲೆಕ್ಕಾಚಾರದ ಮಾಂತ್ರಿಕ. ರಾಜ್ಯದ ಹಣಕಾಸು ಸ್ಥಿತಿಯನ್ನು ಅರೆದು ಕುಡಿದಿದ್ದ ಈ ಟಗರು, ಬರೋಬ್ಬರಿ ಹದಿನೇಳು ಬಜೆಟ್‌ಗಳನ್ನು ಮಂಡಿಸಿ ಕರುನಾಡ ಇತಿಹಾಸದಲ್ಲಿ ಯಾರೂ ಅಳಿಸಲಾಗದ ದಾಖಲೆ ಬರೆದಿದ್ದಾರೆ. ಸಿದ್ದರಾಮಯ್ಯ ಬಜೆಟ್ ಮಂಡಿಸಲು ನಿಂತರೆಂದರೆ ಅಲ್ಲಿ ಅಂಕಿ ಅಂಶಗಳ ಜಾತ್ರೆ ಇರುತ್ತಿತ್ತು, ಬಡವರ ಬದುಕಿಗೆ ಭರವಸೆಯ ಬೆಳಕಿರುತ್ತಿತ್ತು.

ಸಿದ್ದರಾಮಯ್ಯ ಎಂದರೆ ನೆನಪಾಗುವುದು ಕೇವಲ ಅಧಿಕಾರವಲ್ಲ; ಕಟ್ಟಕಡೆಯ ಬಡವನೂ ಹಸಿದು ಮಲಗಬಾರದು ಎಂಬ ಅವರ ಅಚಲ ಸಂಕಲ್ಪ. ಅನ್ನಭಾಗ್ಯ ಯೋಜನೆಯ ಮೂಲಕ ಕೋಟ್ಯಂತರ ಒಲೆಗಳಲ್ಲಿ ಹಸಿವಿನ ಜ್ವಾಲೆ ನಂದಿಸಿದ ಅವರು, ಜನಮಾನಸದಲ್ಲಿ ಅನ್ನರಾಮಯ್ಯ ಎಂದೇ ಶಾಶ್ವತ ಸ್ಥಾನ ಪಡೆದರು. ಇಂದಿರಾ ಕ್ಯಾಂಟೀನ್, ಕ್ಷೀರಭಾಗ್ಯದಂತಹ ಯೋಜನೆಗಳು ಕೇವಲ ರಾಜಕೀಯ ಗಿಮಿಕ್‌ಗಳಾಗಿರಲಿಲ್ಲ, ಬದಲಿಗೆ ತಳಸಮುದಾಯದ ಮೇಲಿದ್ದ ಅವರ ಅಪಾರ ಕಾಳಜಿಯ ಪ್ರತೀಕವಾಗಿದ್ದವು.

ಇದರ ನಡುವೆಯೇ ಕೋಮುವಾದದ ವಿರುದ್ಧ ನನ್ನ ಹೋರಾಟ ನಿರಂತರ ಎನ್ನುತ್ತಿದ್ದ ಸಿದ್ಧರಾಮಯ್ಯ ತಮ್ಮ ಸಿದ್ಧಾಂತದ ಅಪ್ರತಿಮ ಪ್ರತಿಪಾದಕಿ ಗೌರಿ ಲಂಕೇಶ್ ತೀರಿಕೊಂಡಾಗ ಮನುಷ್ಯತ್ವ ಮರೆತು ಪ್ರತಿಕ್ರಿಯಿಸಿದ  ಕೋಮುವಾದಿಗಳ ಪಾಲಿನ ಐಕಾನ್ ವಿಶ್ವೇಶ್ವರ ಭಟ್ಟರು ಭುಜಕ್ಕೆ ಕೈ ಹಾಕುವಷ್ಟು ಸಲುಗೆ ಕೊಟ್ಟ  ದ್ವಂದ್ವ ,ತಮ್ಮ ಎರಡನೇ ಅವಧಿಯಲ್ಲಿ ಕೋಮು ಪ್ರಚೋದಕರನ್ನು ತಕ್ಕ ಮಟ್ಟಿಗೆ ಕಟ್ಟಿಹಾಕಲಾಗದ ಕೊರತೆ , ಅಧಿಕಾರಕ್ಕೇರುವ ಹೊತ್ತಿಗೆ ಕೊಟ್ಟ ಕೆಲವೊಂದು ಮಾತುಗಳನ್ನು ನೆರವೇರಿಸಲಾಗದೇ ಪಟ್ಟದಿಂದ ಇಳಿಯುತ್ತಿರುವ ಸಂದರ್ಭ ಇವೆಲ್ಲವನ್ನು ಸ್ಮರಿಸಲೇಬೇಕಾಗುತ್ತದೆ.

ಹಾಗೆಯೇ, ಅಧಿಕಾರಕ್ಕಾಗಿ ಹಪಾಹಪಿಸುವ ಇಂದಿನ ರಾಜಕಾರಣದಲ್ಲಿ, ತನಗೆ ಅಧಿಕಾರ ಕೊಟ್ಟ ಪಾರ್ಟಿಗೆ ಯಾವುದೇ ರೀತಿಯ ಡ್ಯಾಮೇಜ್ ಆಗಬಾರದು, ಸರ್ಕಾರದ ಸ್ಥಿರತೆಗೆ ಧಕ್ಕೆಯಾಗಬಾರದು ಎಂಬ ಒಂದೇ ಕಾರಣಕ್ಕೆ ತಾವೇ ಖುದ್ದಾಗಿ ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡುವ ಮೂಲಕ ಸಿದ್ದರಾಮಯ್ಯನವರು ತಮ್ಮ ಉದಾತ್ತತೆಯನ್ನು ಮೆರೆದಿದ್ದಾರೆ. ಹಠಕ್ಕೆ ಬಿದ್ದರೆ ಟಗರಿನಂತೆ ನುಗ್ಗುವ ಅವರ ವ್ಯಕ್ತಿತ್ವದಲ್ಲಿ, ಪಕ್ಷದ ಹಿತದೃಷ್ಟಿ ಬಂದಾಗ ಒಬ್ಬ ಮುತ್ಸದ್ದಿ ನಾಯಕನಾಗಿ ಅವರು ತೋರಿದ ಈ ತ್ಯಾಗ, ಅವರನ್ನು ತ್ಯಾಗರಾಮಯ್ಯನನ್ನಾಗಿ ಮಾಡಿದೆ.

ದೇವರಾಜ್ ಅರಸು ಅವರ ಸಾಮಾಜಿಕ ನ್ಯಾಯ, ಬಂಗಾರಪ್ಪನವರ ಧೀಮಂತಿಕೆ, ರಾಮಕೃಷ್ಣ ಹೆಗಡೆಯವರ ರಾಜತಾಂತ್ರಿಕತೆ, ದೇವೇಗೌಡರ ಕೃಷಿ ಕಾಯಕದ ಹೋರಾಟ… ಇವೆಲ್ಲದರ ಸಮ್ಮಿಲನದಂತಿದ್ದ ಕೊನೆಯ ಮಾಸ್ ಲೀಡರ್ ಸಿದ್ದರಾಮಯ್ಯ. ಜನಸಾಮಾನ್ಯರೊಂದಿಗೆ ನೇರ ಸಂಪರ್ಕ ಹೊಂದಿದ್ದ, ಜನಸಮೂಹವನ್ನು ತನ್ನ ಮಾತಿನ ಧಾಟಿಯಿಂದಲೇ ಮಂತ್ರಮುಗ್ಧರನ್ನಾಗಿಸುತ್ತಿದ್ದ, ಅಹಿಂದ ವರ್ಗಗಳ ಆಶಾಕಿರಣವಾಗಿದ್ದ ಮುಖ್ಯವಾಹಿನಿ ರಾಜಕಾರಣದ ಈ ಕೊನೆಯ ಕೊಂಡಿ ಈಗ ಅಧಿಕಾರದ ಪೀಠದಿಂದ ಕಳಚಿಕೊಳ್ಳುತ್ತಿರುವುದು ಕರ್ನಾಟಕ ರಾಜಕಾರಣದಲ್ಲಿ ಎಂದೂ ತುಂಬಲಾರದ ಶೂನ್ಯವನ್ನು ಸೃಷ್ಟಿಸಿದೆ.

ಸಿದ್ದರಾಮಯ್ಯ ಕೇವಲ ಐದು ವರ್ಷಗಳ ಅಥವಾ ಹತ್ತು ವರ್ಷಗಳ ಆಡಳಿತದ ಹೆಸರಲ್ಲ; ಅದೊಂದು ಸಿದ್ಧಾಂತ. ಅತಿ ದೀರ್ಘ ಅವಧಿಗೆ ಕರ್ನಾಟಕವನ್ನು ಯಶಸ್ವಿಯಾಗಿ ಮುನ್ನಡೆಸಿದ, ಜನಸಾಮಾನ್ಯರ ನಾಯಕ, ಗಟ್ಟಿ ನಿಲುವಿನ ಟಗರು ರಾಮಯ್ಯನಿಗೆ ಕರುನಾಡಿನ ವಿದಾಯದ ಸಲಾಮುಗಳು. ಅಧಿಕಾರ ಇರಲಿ, ಇಲ್ಲದಿರಲಿ… ಇತಿಹಾಸ ನಿಮ್ಮನ್ನು ಜನರ ಮುಖ್ಯಮಂತ್ರಿ ಎಂದೇ ನೆನಪಿಡುತ್ತದೆ.

Leave a Reply

Discover more from

Subscribe now to keep reading and get access to the full archive.

Continue reading