ಬೆಳ್ಳಾರೆ: ಕೆಲ ದಿನಗಳ ಹಿಂದೆ ಕುಣಿಗಲ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬೆಳ್ಳಾರೆ ನಿವಾಸಿ ಸೂರಜ್ ರೈ (ಸಾಫ್ಟ್‌ವೇರ್ ಇಂಜಿನಿಯರ್) ಅವರು ಮೇ 21ರಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೃತ ಸೂರಜ್ ರೈ ಅವರು ಪ್ರಸಿದ್ಧ ಯಕ್ಷಗಾನ ಕಲಾವಿದರಾದ ವಾಸುದೇವ ರೈ ಅವರ ಪುತ್ರರಾಗಿದ್ದಾರೆ.

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಉದ್ಯೋಗದಲ್ಲಿದ್ದ ಸೂರಜ್ ರೈ ಅವರು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಎದುರಿನಿಂದ ಬಂದ ಕೋಳಿ ಸಾಗಾಟದ ಲಾರಿಯೊಂದು ಇವರ ಬೈಕ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡಿದ್ದ ಸೂರಜ್ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮೇ 21ರ ರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮೃತ ಸೂರಜ್ ರೈ ಅವರಿಗೆ ಇತ್ತೀಚೆಗಷ್ಟೇ ವಿವಾಹವಾಗಿತ್ತು ಎಂದು ತಿಳಿದುಬಂದಿದ್ದು, ಯುವಕನ ಅಕಾಲಿಕ ಮರಣಕ್ಕೆ ಸ್ಥಳೀಯರು ಹಾಗೂ ಯಕ್ಷಗಾನ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.


