90ರ ದಶಕದ ಯುವಕರ ಯುವತಿಯರ ಕ್ರೇಜಿ ಶೋಮ್ಯಾನ್!
ಕನ್ನಡ ಸಿನಿಮಾಗಳನ್ನು ಕೇವಲ ಕಥೆಯಷ್ಟೇ ಅಲ್ಲ, ದೃಶ್ಯ ವೈಭವದ ಮೂಲಕವೂ ನೋಡಬಹುದು ಎಂದು ಪ್ರೇಕ್ಷಕರಿಗೆ ತೋರಿಸಿಕೊಟ್ಟವರು ರವಿಚಂದ್ರನ್. ಸಿನೆಮಾದ ಪ್ರತಿ ಫ್ರೇಮ್ ಕೂಡ ಶ್ರೀಮಂತವಾಗಿರಬೇಕು ಎಂದು ಹಠ ಹಿಡಿದು ಗೆದ್ದವರು. 90ರ ದಶಕದ ಯುವಜನತೆಯ ಪಾಲಿಗೆ ಇವರೊಬ್ಬ ಸ್ಟೈಲ್ ಐಕಾನ್. ಅವರ ಹೇರ್‌ಸ್ಟೈಲ್, ಉಡುಗೆ, ಅವರು ಬಳಸುತ್ತಿದ್ದ ಬೈಕ್, ಕಾರುಗಳು ಅಂದಿನ ಕಾಲಕ್ಕೆ ಹೊಸ ಟ್ರೆಂಡ್ ಸೃಷ್ಟಿಸುತ್ತಿದ್ದವು.

ರವಿಚಂದ್ರನ್ ಅವರನ್ನು ಕೇವಲ ನಟ ಎಂದು ಕರೆದರೆ ಅದು ಅವರ ಪ್ರತಿಭೆಗೆ ಕೊಡುವ ಸಣ್ಣ ಗೌರವವಾದೀತು. ಅವರು ನಿಜವಾದ ಅರ್ಥದಲ್ಲಿ ಸಕಲಕಲಾವಲ್ಲಭ. ಅವರು ನಿರ್ದೇಶಕರಾಗಿ ಕ್ಯಾಮೆರಾ ಕೋನಗಳಲ್ಲಿ ಜಾದೂ ಮಾಡುವುದು ಅವರಿಗೆ ಕರಗತವಾಗಿತ್ತು. ನಿರ್ಮಾಪಕರಾಗಿ ಈಶ್ವರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕನ್ನಡಕ್ಕೆ ಭವ್ಯವಾದ ಸಿನಿಮಾಗಳನ್ನು ನೀಡಿದ ಸಾಹಸಿ ಇವರು. ಸಂಗೀತ ನಿರ್ದೇಶಕ ಮತ್ತು ಗೀತರಚನೆಕಾರರಾಗಿ ಅವರ ಸಿನಿಮಾದ ಹಾಡುಗಳು ಇಂದಿಗೂ ಪ್ರತಿಯೊಬ್ಬ ಕನ್ನಡಿಗನ ಪ್ಲೇಲಿಸ್ಟ್‌ನಲ್ಲಿರುತ್ತವೆ. ಚಿತ್ರದ ಸಂಕಲನಕಾರರಾಗಿಯೂ ಸಿನೆಮಾದ ವೇಗ ಮತ್ತು ಲಯವನ್ನು ಕತ್ತರಿಯ ಅಂಚಿನಲ್ಲಿ ನಿರ್ಧರಿಸುವ ಅದ್ಭುತ ಚತುರತೆ ಇವರಿಗಿತ್ತು.

1987ರಲ್ಲಿ ಬಿಡುಗಡೆಯಾದ ಪ್ರೇಮಲೋಕ ಚಿತ್ರ ಕನ್ನಡ ಚಿತ್ರರಂಗದ ಮೈಲಿಗಲ್ಲು. ಈ ಚಿತ್ರ ಬಿಡುಗಡೆಯಾದ ನಂತರ ಕನ್ನಡ ಸಿನೆಮಾದ ಮಾರುಕಟ್ಟೆ ಮತ್ತು ಮೇಕಿಂಗ್ ಶೈಲಿಯೇ ಬದಲಾಯಿತು. ಹಂಸಲೇಖ ಮತ್ತು ರವಿಚಂದ್ರನ್ ಜೋಡಿಯು ಕನ್ನಡ ನಾಡಿಗೆ ಮರೆಯಲಾಗದ ರೊಮ್ಯಾಂಟಿಕ್ ಗೀತೆಗಳನ್ನು ಕೊಡುಗೆಯಾಗಿ ನೀಡಿತು. ಬಣ್ಣದ ಲೋಕದ ಬಣ್ಣದ ಕನಸನ್ನು ಬೆಳ್ಳಿತೆರೆಯ ಮೇಲೆ ಅಚ್ಚೊತ್ತಿದ ಮಾಂತ್ರಿಕ ರವಿಚಂದ್ರನ್.

ರಣಧೀರ, ಅಂಜದ ಗಂಡು, ಯುದ್ಧಕಾಂಡ, ರಾಮಾಚಾರಿ, ಹಳ್ಳಿ ಮೇಷ್ಟ್ರು ವಿನಂಥಾ ಸೂಪರ್ ಹಿಟ್ ಚಿತ್ರಗಳ ಮೂಲಕ 90ರ ದಶಕವನ್ನು ತಮ್ಮ ಸಾಮ್ರಾಜ್ಯವನ್ನಾಗಿ ಮಾಡಿಕೊಂಡಿದ್ದರು.

ಸಿನಿಮಾವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ರವಿಚಂದ್ರನ್, ಕಲೆಯ ಹಣದ ಹಿಂದೆ ಬಿದ್ದವರಲ್ಲ. ಸಿನಿಮಾ ಶ್ರೀಮಂತವಾಗಿ ಮೂಡಿಬರಲು ತಮ್ಮ ಇಡೀ ಆಸ್ತಿಯನ್ನೇ ಪಣಕ್ಕಿಟ್ಟ ಉದಾಹರಣೆಗಳಿವೆ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಸೋತಾಗಲೂ ಸಿನೆಮಾದ ಮೇಲಿನ ಪ್ರೀತಿಯನ್ನು ಕಳೆದುಕೊಳ್ಳದ ಅವರ ವಿಶಾಲ ಮನೋಭಾವವೇ ಅವರನ್ನು ಇಂದಿಗೂ ಚಿತ್ರರಂಗದ ಯಜಮಾನನ ಸ್ಥಾನದಲ್ಲಿ ಕೂರಿಸಿದೆ.

ಕಾಲ ಬದಲಾದಂತೆ ತಮ್ಮ ನಟನೆಯ ಶೈಲಿಯನ್ನು ಬದಲಿಸಿಕೊಂಡ ರವಿಚಂದ್ರನ್, ಮಲ್ಲ, ಅಹಂ ಪ್ರೇಮಾಸ್ಮಿ ಚಿತ್ರಗಳ ಮೂಲಕ ಮತ್ತೆ ನಿರ್ದೇಶನದಲ್ಲಿ ಚಮತ್ಕಾರ ತೋರಿದರು. ಇತ್ತೀಚಿನ ದೃಶ್ಯ ದೃಶ್ಯ 2 ಚಿತ್ರಗಳಲ್ಲಿ ಮಿಂಚಿದ ರವಿಚಂದ್ರನ್ ಕುರುಕ್ಷೇತ್ರ ಕೆಡಿ ಸೇರಿದಂತೆ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳ ಮೂಲಕವೂ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಕಿರುತೆರೆಯ ರಿಯಾಲಿಟಿ ಶೋಗಳ ಮೂಲಕ ಇಂದಿನ ತಲೆಮಾರಿನ ಮಕ್ಕಳಿಗೂ ಕ್ರೇಜಿ ತಾತ ಅಥವಾ ಕ್ರೇಜಿ ಸ್ಟಾರ್ ಆಗಿ ಅಚ್ಚುಮೆಚ್ಚಿನವರಾಗಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಗ್ಲಾಮರ್, ರಿಚ್‌ನೆಸ್ ಹಾಗೂ ಮೆಲೋಡಿಯಸ್ ಸಂಗೀತದ ಹೊಸ ಭಾಷ್ಯ ಬರೆದ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರಿಗೆ ಆರೋಗ್ಯ, ಆಯುಷ್ಯ ಮತ್ತು ಇನ್ನಷ್ಟು ಅದ್ಭುತ ಸಿನಿಮಾಗಳನ್ನು ನೀಡುವ ಶಕ್ತಿ ಸಿಗಲಿ ಎಂದು ಹಾರೈಸೋಣ.
ಹುಟ್ಟುಹಬ್ಬದ ಶುಭಾಶಯಗಳು ರವಿ ಸರ್!

