ಎರಡು ದಿನಗಳ ಹಿಂದೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಇಬ್ಬರು ಮುಸ್ಲಿಂ ಬುರ್ಖಾಧಾರಿ ಮಹಿಳೆಯರು ಭೇಟಿಯಾಗಿದ್ದರು. ಅವರು ತಮ್ಮ ವೈಯಕ್ತಿಕ ಸಮಸ್ಯೆಗೆ ಬದಲಾಗಿ, ಗಿರಿಜಾ ಶೆಟ್ಟಿಗಾರ್ ಎಂಬ ಹಿಂದೂ ವೃದ್ಧೆಯೊಬ್ಬರ ಜಾಗದ ವಿವಾದಕ್ಕೆ ಸಂಬಂಧಿಸಿದ ಅನ್ಯಾಯವನ್ನು ಸಚಿವರ ಗಮನಕ್ಕೆ ತಂದು, ನ್ಯಾಯ ಕೊಡಿಸುವಂತೆ ವಿನಂತಿಸಿದ್ದರು.

ಈ ಸಂದರ್ಭವನ್ನು ಸಚಿವರು ಕೇವಲ ಒಂದು ಮನವಿಯನ್ನು ಮಾತ್ರ ನೋಡದೆ, ಸಮಾಜಕ್ಕೆ ಒಂದು ಸಂದೇಶ ನೀಡಲು ಬಳಸಿಕೊಂಡರು. ಧರ್ಮ, ಜಾತಿಗಿಂತ ಮನುಷ್ಯತ್ವ ದೊಡ್ಡದು ಎಂದು ಸಾರಿದ ಸಚಿವರು, ಉಡುಪಿಯ ಬಿಜೆಪಿ ನಾಯಕರು ಕೇವಲ ಕೋಮುವಾದದ ರಾಜಕಾರಣ ಮಾಡುವುದನ್ನು ಬಿಟ್ಟು, ಈ ಮಹಿಳೆಯರನ್ನು ನೋಡಿ ಕಲಿಯಬೇಕು ಎಂದು ನೇರವಾಗಿ ಟೀಕಿಸಿದ್ದರು. ಅಲ್ಲದೆ, ವೃದ್ಧೆಯ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಈ ನಡೆ ಸಾರ್ವಜನಿಕ ವಲಯದಲ್ಲಿ ಸೌಹಾರ್ದತೆಯ ಸಂಕೇತವಾಗಿ ಬಿಂಬಿತವಾಯಿತು.

ಆದರೆ, ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ, ಪ್ರಮುಖವಾಗಿ ಬಿಜೆಪಿ ಐಟಿ ಸೆಲ್ ವತಿಯಿಂದ ಒಂದು ಭಿನ್ನವಾದ ವಾದ ಮುನ್ನೆಲೆಗೆ ಬಂತು. ಗಿರಿಜಾ ಶೆಟ್ಟಿಗಾರ್ ಎಂಬುವವರು ವಾಸ್ತವವಾಗಿ ಆ ಮುಸ್ಲಿಂ ಮಹಿಳೆಯರ ತಾಯಿ ಎಂದೂ, ಕೇವಲ ರಾಜಕೀಯ ಲಾಭಕ್ಕಾಗಿ ಅಥವಾ ಪ್ರಚಾರಕ್ಕಾಗಿ ಬುರ್ಖಾ ಧರಿಸಿ ಬಂದು ನಾಟಕ ಆಡಿದ್ದಾರೆ ಎಂದೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹರಿಬಿಡಲಾಯಿತು. ಸಚಿವರು ಮತ್ತು ಕಾಂಗ್ರೆಸ್ ಪಕ್ಷ ಸೃಷ್ಟಿಸಲು ಹೊರಟಿದ್ದ ಕೋಮು ಸೌಹಾರ್ದತೆಯ ಬಿಂಬವನ್ನು ಸುಳ್ಳು ಮಾಡುವುದು ಮತ್ತು ಇಡೀ ಘಟನೆಯನ್ನು ಒಂದು ಪ್ರಹಸನ ಎಂದು ಬಿಂಬಿಸುವುದು ಈ ಕೌಂಟರ್-ನರೇಟಿವ್‌ನ ಮುಖ್ಯ ಉದ್ದೇಶವಾಗಿತ್ತು.

ಆದರೆ ಗಿರಿಜಾ ಶೆಟ್ಟಿಗಾರ್ ಮತ್ತು ಆ ಇಬ್ಬರು ಮುಸ್ಲಿಮ್ ಮಹಿಳೆಯರ ಅಕ್ಕಪಕ್ಕದ ಮನೆಯವರಾಗಿದ್ದರು. ಒಂಟಿಯಾಗಿ ಬಹಳ ಕಾಲಗಳಿಂದ ತನ್ನ ಸಮಸ್ಯೆ ಹೇಳಿಕೊಂಡು ಅಲೆಯುವುದನ್ನು ಕಂಡ ಆ ಇಬ್ಬರು ಮಹಿಳೆಯರು ಸಾರ್ವಜನಿಕ ಅಹವಾಲು ಆಲಿಸುತ್ತಿದ್ದ ಸಚಿವರ ಬಳಿ ಕರತಂದಿದ್ದರು. ಮತ್ತು ಅದಕ್ಕೆ ಸೂಕ್ತ ಸ್ಪಂದನೆ ದೊರೆತಿತ್ತು ಕೂಡಾ. ಇದನ್ನು ಸಹಿಸದ ಬಿಜೆಪಿ ಸೌಹಾರ್ದತೆ ಈ ರೀತಿ ಉಳಿಯಬಾರದು ಎಂಬ ಏಕೈಕ ಉದ್ದೇಶದಿಂದ ಬುರ್ಖಾವೇ ನಾಟಕ ಎಂಬಂತೆ ಈಗ ಐಟಿ ಸೆಲ್ ಮೂಲಕ ಹರಡುತ್ತಿದೆ. ಮತ್ತು ಅದನ್ನು ಬಹುಸಂಖ್ಯೆಯ ಜನ ನಂಬುತ್ತಿದ್ದಾರೆ ಕೂಡಾ.
ಈ ಇಡೀ ಪ್ರಕ್ರಿಯೆಯಲ್ಲಿ ಅತ್ಯಂತ ಕಳವಳಕಾರಿ ಮತ್ತು ಗಮನಿಸಬೇಕಾದ ಅಂಶವೆಂದರೆ ಸಾರ್ವಜನಿಕರು ಮಾಹಿತಿಯನ್ನು ಸ್ವೀಕರಿಸುವ ವಿಧಾನ. ಇಂದಿನ ಡಿಜಿಟಲ್ ಜಗತ್ತಿನಲ್ಲಿ ಬಹುಪಾಲು ಜನರು ತಮಗೆ ವಾಟ್ಸಾಪ್ ಅಥವಾ ಫೇಸ್‌ಬುಕ್‌ನಲ್ಲಿ ಬರುವ ಸಂದೇಶಗಳನ್ನು ಯಾವುದೇ ಪೂರ್ವಾಪರ ಪರಿಶೀಲನೆ ಇಲ್ಲದೆ ಸತ್ಯ ಎಂದು ನಂಬುತ್ತಾರೆ. ಇದನ್ನು ದೃಢೀಕರಣದ ಪೂರ್ವಾಗ್ರಹ ಎನ್ನಲಾಗುತ್ತದೆ. ಜನರು ತಾವು ಈಗಾಗಲೇ ನಂಬಿರುವ ರಾಜಕೀಯ ಸದ್ಧಾಂತಕ್ಕೆ ಪೂರಕವಾಗಿರುವ ಸುಳ್ಳುಗಳನ್ನು ಸುಲಭವಾಗಿ ಒಪ್ಪಿಕೊಳ್ಳುತ್ತಾರೆ. ಇಲ್ಲಿ ಸತ್ಯಕ್ಕಿಂತ ನರೇಟಿವ್ ಮುಖ್ಯವಾಗುತ್ತದೆ.
ಯಾವುದೇ ಒಂದು ಪೋಸ್ಟ್ ಬಂದಾಗ ಆ ಮಹಿಳೆಯರು ನಿಜಕ್ಕೂ ಯಾರು, ಗಿರಿಜಾ ಶೆಟ್ಟಿಗಾರ್ ಅವರಿಗೂ ಆ ಮಹಿಳೆಯರಿಗೂ ಇರುವ ಸಂಬಂಧವೇನು, ನೆರೆಹೊರೆಯವರಾಗಿ ಅವರು ಸಹಾಯ ಮಾಡಲು ಬಂದಿದ್ದರೇ ಎಂಬ ಕನಿಷ್ಠ ಸತ್ಯಾಸತ್ಯತೆಯನ್ನು ಪರಿಶೀಲಿಸುವ ತಾಳ್ಮೆ ಸಾರ್ವಜನಿಕರಿಗಾಗಲಿ ಅಥವಾ ಸಾಮಾಜಿಕ ಜಾಲತಾಣದ ಬಳಕೆದಾರರಿಗಾಗಲಿ ಇರುವುದಿಲ್ಲ. ತಮಗೆ ತಲುಪಿದ ಮಾಹಿತಿಯನ್ನು ಕಾಯಾ ವಾಚಾ ಮನಸಾ ನಂಬಿ, ಅದನ್ನು ಮತ್ತಷ್ಟು ಜನರಿಗೆ ಫಾರ್ವರ್ಡ್ ಮಾಡುವುದಷ್ಟೇ ಇಂದಿನ ಸೋಷಿಯಲ್ ಮೀಡಿಯಾ ಸಂಸ್ಕೃತಿಯಾಗಿದೆ.
ಈ ಘಟನೆಯು ಉಡುಪಿಯಂತಹ ಸೂಕ್ಷ್ಮ ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳು ಹೇಗೆ ಸಣ್ಣ ವಿಷಯಗಳನ್ನೂ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತವೆ ಎಂಬುದನ್ನು ತೋರಿಸುತ್ತದೆ. ಆಡಳಿತ ಪಕ್ಷವು ಇದನ್ನು ಮಾನವೀಯತೆಯ ನಡೆ ಮತ್ತು ಸಚಿವರ ಭರವಸೆಯ ಮೂಲಕ ನಾವು ಸೌಹಾರ್ದತೆಯನ್ನು ಬಯಸುತ್ತೇವೆ, ವಿರೋಧ ಪಕ್ಷದವರು ಕೇವಲ ಕೋಮುವಾದಿಗಳು ಎಂದು ಬಿಂಬಿಸಲು ಬಳಸಿಕೊಂಡರೆ, ವಿರೋಧ ಪಕ್ಷದ ಐಟಿ ಸೆಲ್ ಇದನ್ನು ಬುರ್ಖಾ ನಾಟಕದ ಆರೋಪ ಮತ್ತು ಟ್ರೋಲ್ ಮೂಲಕ ಇದೆಲ್ಲಾ ರಾಜಕೀಯ ಪ್ರೇರಿತ ಸ್ಟಂಟ್, ಮುಸ್ಲಿಂ ತುಷ್ಟೀಕರಣದ ಭಾಗ ಎಂದು ಬಿಂಬಿಸಲು ಪ್ರಯತ್ನಿಸಿತು.
ಉಡುಪಿಯ ಈ ಘಟನೆ ಕೇವಲ ಒಬ್ಬ ವೃದ್ಧೆಯ ಜಾಗದ ಸಮಸ್ಯೆಯಾಗಿ ಉಳಿಯದೆ, ಧರ್ಮ, ರಾಜಕೀಯ ಮತ್ತು ಡಿಜಿಟಲ್ ಅಪಪ್ರಚಾರದ ಕಣವಾಗಿ ಮಾರ್ಪಟ್ಟಿದೆ. ಸಚಿವರು ನೀಡಿದ ಆಶ್ವಾಸನೆಯಂತೆ ಆ ವೃದ್ಧೆಗೆ ನ್ಯಾಯ ಸಿಗುತ್ತದೆಯೇ ಎಂಬುದು ಮುಖ್ಯ ಪ್ರಶ್ನೆಯಾಗಬೇಕಿತ್ತೇ ವಿನಃ, ಬಂದವರು ಯಾರು ಎಂಬ ಟ್ರೋಲ್ ರಾಜಕಾರಣವಲ್ಲ. ಸಾಮಾಜಿಕ ಜಾಲತಾಣಗಳು ನೀಡುವ ಮಾಹಿತಿಯನ್ನು ಕಣ್ಣು ಮುಚ್ಚಿ ನಂಬುವ ಸಾರ್ವಜನಿಕರು ಇರುವವರೆಗೂ, ಇಂತಹ ನರೇಟಿವ್ ಯುದ್ಧಗಳು ನಡೆಯುತ್ತಲೇ ಇರುತ್ತವೆ. ಸತ್ಯವನ್ನು ಸುಳ್ಳಾಗಿಸುವ ಮತ್ತು ಸುಳ್ಳನ್ನು ಸತ್ಯವಾಗಿಸುವ ಡಿಜಿಟಲ್ ಮಾಯಾಜಾಲಕ್ಕೆ ಈ ಘಟನೆ ಒಂದು ಪ್ರತ್ಯಕ್ಷ ಸಾಕ್ಷಿ.

