ಪುತ್ತೂರು: ಪಿಕಪ್ ಮತ್ತು ಸ್ಕೂಟಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕಬಕ ನಿವಾಸಿ ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ಸೋಫಾ ಸಲೀಂ ಎಂದು ಗುರುತಿಸಲಾಗಿದೆ.



ಸಲೀಂ ಅವರು ಮಿತ್ತೂರಿನ ಶಿಕ್ಷಣ ಸಂಸ್ಥೆಯಲ್ಲಿ ತನ್ನ ಕೆಲಸ ಮುಗಿಸಿ ಸ್ಕೂಟರ್‌ನಲ್ಲಿ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪುತ್ತೂರಿನಿಂದ ಮಂಗಳೂರು ದಾರಿಯಲಿ ಸಾಗುತ್ತಿದ್ದ ಪಿಕಪ್ ವಾಹನ ಮತ್ತು ಮಾಣಿ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಆಕ್ಟಿವಾ ಸ್ಕೂಟರ್ ನಡುವೆ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಸಲೀಂ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ನಡುವೆಯೇ ಅವರು ಕೊನೆಯುಸಿರೆಳೆದಿದ್ದಾರೆ.

ಅಪಘಾತ ನಡೆದ ತಕ್ಷಣವೇ ಸಾರ್ವಜನಿಕರ ಕಣ್ಣು ತಪ್ಪಿಸಲು ಪಿಕಪ್ ವಾಹನದ ನಂಬರ್ ಪ್ಲೇಟ್‌ಗೆ ಕಪ್ಪು ಬಣ್ಣ ಬಳಿಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕಾನೂನು ಪ್ರಕ್ರಿಯೆಯಿಂದ ಮತ್ತು ವಾಹನದ ಗುರುತು ಪತ್ತೆಯಾಗದಂತೆ ತಡೆಯಲು ಈ ರೀತಿ ಮಾಡಲಾಗಿದೆಯೇ ಎಂಬ ಸಂಶಯ ದಟ್ಟವಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತ ಹಾಗೂ ನಂಬರ್ ಪ್ಲೇಟ್‌ಗೆ ಬಣ್ಣ ಬಳಿದಿರುವ ಮರ್ಮದ ಕುರಿತು ತಿಳಿದುಬರಬೇಕಿದೆ.
ಒಂದು ತಿಂಗಳ ಹಿಂದೆಯಷ್ಟೇ ಸಲೀಂ ಅವರ ಮಗಳ ಮದುವೆ ನೆರವೇರಿತ್ತು ಎನ್ನಲಾಗಿದೆ.

