ಮಲಪ್ಪುರಂ ಕೇರಳ: ವಾಲ್ಪಾರೈ ಮತ್ತು ಪೊಳ್ಳಾಚಿ ನಡುವಿನ ಘಾಟ್ ರಸ್ತೆಯ 13ನೇ ಹೇರ್‌ಪಿನ್ ತಿರುವಿನಲ್ಲಿ ಪ್ರವಾಸಿ ವ್ಯಾನ್ ನಿಯಂತ್ರಣ ತಪ್ಪಿ 800 ಅಡಿ ಆಳದ ಪ್ರಪಾತಕ್ಕೆ ಬಿದ್ದ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ಹೊತ್ತಿಗೆ ನಡೆದಿದೆ.







ಮೃತರ ಪೈಕಿ ಮಲಪ್ಪುರಂ ವಲಾಶೇರಿ ಪಾಂಗ್ ಪಳ್ಳಿಪ್ಪರಂಬ್ ಸರ್ಕಾರಿ ಎಲ್.ಪಿ ಶಾಲೆಯ ಶಿಕ್ಷಕರು, ಸಿಬ್ಬಂದಿ ಮತ್ತು ಮಗುವೊಂದು ಸೇರಿದ್ದಾರೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಮೃತಪಟ್ಟವರ ವಿವರಗಳು ಇಲ್ಲಿವೆ:
ಅಜಿತ (54) ಮಲಪ್ಪುರಂ ಪುಲಾಮಂತೋಳ್ ನಿವಾಸಿ ಮತ್ತು ಪಾಂಗ್ ಜಿ.ಎಲ್.ಪಿ ಶಾಲೆಯ ಮುಖ್ಯ ಶಿಕ್ಷಕಿ.
ರಂಲ (52) ಪಾಂಗ್ ನಿವಾಸಿ, ಶಿಕ್ಷಕಿ.
ಸುಹರಾ (43) ಪಾಂಗ್ ನಿವಾಸಿ, ಶಿಕ್ಷಕಿ.
ಆಶಾ (41) ಪಾಂಗ್ ನಿವಾಸಿ, ಶಿಕ್ಷಕಿ.
ಅಬ್ದುಲ್ ಮಜೀದ್ (43) ಶಿಕ್ಷಕ.
ರುಖಿಯಾ (39) ಅಬ್ದುಲ್ ಮಜೀದ್ ಅವರ ಪತ್ನಿ.
ಸಾಜಿತಾ (45) ಶಾಲೆಯ ಅಡುಗೆ ಕೆಲಸಗಾರ್ತಿ.
ಶಕೀನಾ (37) ಇತ್ತೀಚೆಗಷ್ಟೇ ಪಾಂಗ್ ಸರ್ಕಾರಿ ಎಲ್.ಪಿ ಶಾಲೆಯಿಂದ ಹತ್ತಿರದ ಪಾಂಗ್ ಜಿ.ಯು.ಪಿ ಶಾಲೆಗೆ ವರ್ಗಾವಣೆಗೊಂಡಿದ್ದ ಶಿಕ್ಷಕಿ.
ಹಿಶಾಮ್ (12) ಶಿಕ್ಷಕಿ ಸುಹರಾ ಅವರ ಪುತ್ರ. ಇವನು ಚೆರುಕುಳಂಬ್ ಐ.ಕೆ.ಟಿ.ಎಚ್.ಎಸ್.ಎಸ್ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ. ಇವನು ಪೊಳ್ಳಾಚಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.





ಅಪಘಾತದಲ್ಲಿ ಮರಣ ಹೊಂದಿದ ಪಾಂಗ್ ಜಿ.ಯು.ಪಿ ಶಾಲೆಯ ಶಿಕ್ಷಕಿ ಶಕೀನಾ ಅವರ ಮಗಳು ಮಸ್ನೀನ್ (10), ಜಿ.ಎಲ್.ಪಿ ಶಾಲೆಯ ಅಡುಗೆ ಕೆಲಸಗಾರ್ತಿ ಮತ್ತು ಅಪಘಾತದಲ್ಲಿ ಮೃತಪಟ್ಟ ಸಾಜಿತಾ ಅವರ ಮಗ ಶಹದಿನ್, ಶಾಲಾ ಬಸ್ ಚಾಲಕ ನೌಷಾದ್ (39) ಮತ್ತು ಟೂರಿಸ್ಟ್ ವ್ಯಾನ್ ಚಾಲಕ ಮುಹಮ್ಮದ್ ಫಾಹಿಸ್ (21) ಇವರುಗಳು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದರಲ್ಲಿ ಮಸ್ನೀನ್ ಹೊರತುಪಡಿಸಿ ಉಳಿದ ಮೂವರ ಸ್ಥಿತಿ ಗಂಭೀರವಾಗಿದೆ. ಇವರನ್ನು ಪೊಳ್ಳಾಚಿ ಸರ್ಕಾರಿ ಆಸ್ಪತ್ರೆಯಿಂದ ಕೊಯಮತ್ತೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಮಸ್ನೀನ್ ಅವರನ್ನು ಪೊಳ್ಳಾಚಿ ಆಸ್ಪತ್ರೆಯಲ್ಲಿ ನಿಗಾದಲ್ಲಿರಿಸಿದ ನಂತರ ರಾತ್ರಿಯ ವೇಳೆಗೆ ಅವರ ಊರಿಗೆ ಕರೆದುಕೊಂಡು ಹೋಗಲಾಗಿದೆ.
ಅಪಘಾತದಲ್ಲಿ ಮೃತಪಟ್ಟ ಒಂಬತ್ತು ಜನರ ಮೃತದೇಹಗಳನ್ನು ಕೊಯಮತ್ತೂರು ಜಿಲ್ಲಾ ಆಸ್ಪತ್ರೆಗೆ ತಲುಪಿಸಲಾಗಿದೆ. ಅಪಘಾತ ನಡೆದ ದಿನ ರಾತ್ರಿಯ ವೇಳೆಗೆ ಮರಣೋತ್ತರ ಪರೀಕ್ಷೆ ನಡೆಸಿ ಮಲಪ್ಪುರಂನ ಪಾಂಗ್‌ಗೆ ಮೃತದೇಹಗಳನ್ನು ಕೊಂಡೊಯ್ದು ಮರುದಿನ ಮಧ್ಯಾಹ್ನ ಶಾಲೆಯ ಸಮೀಪ ಸಿದ್ಧಪಡಿಸಿದ ಸ್ಥಳದಲ್ಲಿ ಸಾರ್ವಜನಿಕ ದರ್ಶನದ ನಂತರ ಅಂತ್ಯಕ್ರಿಯೆ ನಡೆದಿದೆ
300 ಅಡಿ ಪ್ರಪಾತಕ್ಕೆ ಬಿದ್ದು ಅಪಘಾತ
ಪೊಳ್ಳಾಚಿಯಿಂದ 30 ಕಿಲೋಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದ ಹೇರ್‌ಪಿನ್ ರಸ್ತೆ ಇದೆ. ಶುಕ್ರವಾರ ಸಂಜೆ 5.20 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ರಜಾ ಕಾಲವಾದ್ದರಿಂದ ಶಾಲೆಯಿಂದ ಶುಕ್ರವಾರ ಬೆಳಗಿನ ಜಾವ ಮೂರು ಗಂಟೆಯ ಸುಮಾರಿಗೆ ಪ್ರವಾಸಕ್ಕೆ ತೆರಳಿದ್ದ ಶಿಕ್ಷಕರು ಮತ್ತು ಸಿಬ್ಬಂದಿಗಳ ತಂಡಕ್ಕೆ ಈ ಭೀಕರ ಅಪಘಾತ ಸಂಭವಿಸಿದೆ. ಪೆರಿಂತಲ್ಮಣ್ಣದಿಂದ ಬಾಡಿಗೆಗೆ ಪಡೆದಿದ್ದ ಟೂರಿಸ್ಟ್ ವ್ಯಾನ್‌ನಲ್ಲಿ ಚಾಲಕ ಮತ್ತು ಮೂವರು ಮಕ್ಕಳು ಸೇರಿದಂತೆ ಒಟ್ಟು 13 ಜನರು ಪ್ರಯಾಣಿಸುತ್ತಿದ್ದರು.
ಚಾಲಕುಡಿಗೆ ತಲುಪಿದ ನಂತರ ಅತಿರಪ್ಪಿಳ್ಳಿ ಮಾರ್ಗವಾಗಿ ಮಲಕಪ್ಪಾರೈ ಮೂಲಕ ವಾಲ್ಪಾರೈಗೆ ಇವರು ಪ್ರವಾಸ ಹೋಗಿದ್ದರು. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಡ್ರೈವರ್ ಕೋಟಕ್ಕಲ್ ಚುನ್ನೂರ್ ನಿವಾಸಿ ಮುಹಮ್ಮದ್ ಫಾಹಿಸ್ ಅವರ ಹೇಳಿಕೆಯನ್ನು ಪೊಳ್ಳಾಚಿ ಪೊಲೀಸರು ದಾಖಲಿಸಿಕೊಂಡಿದ್ದಾರೆ. ನಿಯಂತ್ರಣ ತಪ್ಪಿದ ವಾಹನ ರಸ್ತೆ ಬದಿಗೆ ಡಿಕ್ಕಿ ಹೊಡೆದು ಉರುಳಿತು ಎಂದು ಡ್ರೈವರ್ ಹೇಳಿಕೆ ನೀಡಿದ್ದಾರೆ.
ಪ್ರವಾಸಕ್ಕೆ ಹೋಗಿದ್ದ ತಂಡವು ವಾಲ್ಪಾರೈ ತಲುಪಿದ ನಂತರ ಪೊಳ್ಳಾಚಿ ಮಾರ್ಗವಾಗಿ ಕೇರಳಕ್ಕೆ ಮಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. 40 ಹೇರ್‌ಪಿನ್ ತಿರುವುಗಳಿರುವ ರಸ್ತೆಯಲ್ಲಿ ಮರಳುವಾಗ 13ನೇ ತಿರುವಿನಲ್ಲಿ ಈ ಘಟನೆ ನಡೆದಿದೆ.
ನಿಯಂತ್ರಣ ತಪ್ಪಿದ ವ್ಯಾನ್ ರಕ್ಷಣಾ ಗೋಡೆಗೆ ಡಿಕ್ಕಿ ಹೊಡೆದು ಹಲವು ಬಾರಿ ಪಲ್ಟಿಯಾಗಿ ಒಂಬತ್ತನೇ ಹೇರ್‌ಪಿನ್ ತಿರುವಿಗೆ ಬಿದ್ದಿದೆ. ಗಾಯಗೊಂಡವರನ್ನು ವಾಲ್ಪಾರೈ ಮತ್ತು ವಾಳೆಯಾರ್‌ನಿಂದ ಬಂದ ರಕ್ಷಣಾ ಕಾರ್ಯಕರ್ತರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಇತರ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದವರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತಕ್ಕೀಡಾದ ಟೂರಿಸ್ಟ್ ವ್ಯಾನ್‌ನ ಹಿಂದೆ ಬರುತ್ತಿದ್ದ ಕಾರಿನಲ್ಲಿದ್ದವರು ನೀಡಿದ ಮಾಹಿತಿಯಿಂದ ರಕ್ಷಣಾ ಕಾರ್ಯಾಚರಣೆ ವೇಗವಾಗಿ ನಡೆಯಲು ಸಾಧ್ಯವಾಯಿತು ಎನ್ನಲಾಗಿದೆ.


