ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವದ ಸಂಭ್ರಮದ ನಡುವೆ ಅನಿರೀಕ್ಷಿತ ದುರಂತವೊಂದು ಸಂಭವಿಸಿದೆ. ಏಪ್ರಿಲ್ 17ರ ರಾತ್ರಿ ನಡೆದ ಪ್ರಸಿದ್ಧ ‘ಬೆಡಿ ಉತ್ಸವ’ದ ಸಂದರ್ಭದಲ್ಲಿ ಪಟಾಕಿ ಸಿಡಿಸುವಾಗ ಸಂಭವಿಸಿದ ಅವಘಡದಲ್ಲಿ ಸುಮಾರು ನಾಲ್ಕು ಜನ ಭಕ್ತರು ಗಾಯಗೊಂಡ ಬಗ್ಗೆ ವರದಿಯಾಗಿದೆ. ಈ ಘಟನೆಯು ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದ್ದು, ಸದ್ಯ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಜಾತ್ರೆಯ ಪ್ರಮುಖ ಆಕರ್ಷಣೆಯಾದ ಪಟಾಕಿ ಪ್ರದರ್ಶನವನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಾತ್ರೆ ಗದ್ದೆಯಲ್ಲಿ ಜಮಾಯಿಸಿದ್ದರು. ಈ ಸಮಯದಲ್ಲಿ ಪಟಾಕಿ ಸಿಡಿಸುವಾಗ ಆಕಸ್ಮಿಕವಾಗಿ ಕಿಡಿಗಳು ಪ್ರೇಕ್ಷಕರತ್ತ ಚಿಮ್ಮಿವೆ. ಇದರಿಂದಾಗಿ ಸ್ಥಳದಲ್ಲಿದ್ದ ಭಕ್ತರ ಮೇಲೆ ಬೆಂಕಿ ಬಿದ್ದು, ಮೈ ಕೈ ಸುಟ್ಟ ಗಾಯಗಳಾಗಿವೆ. ಗಾಯಾಳುಗಳಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಸುಮಂತ್ ಶೆಟ್ಟಿ (20) ಎಂಬ ಯುವಕ ಸೇರಿ ಭರತ್, ಸೌಮ್ಯ, ದೀಪಕ್, ಯಶವಂತ್ ಹಾಗೂ ಲೋಕೇಶ್ ಎಂಬುವವರಿಗೆ ಗಾಯಗಳಾಗಿವೆ ಎಂದು ಗುರುತಿಸಲಾಗಿದೆ.
ಘಟನೆ ಸಂಭವಿಸಿದ ತಕ್ಷಣ ಎಚ್ಚೆತ್ತ ಆಯೋಜಕರು ಮತ್ತು ಸ್ಥಳೀಯರು ಗಾಯಾಳುಗಳನ್ನು ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಗಾಯಾಳು ಸುಮಂತ್ ಶೆಟ್ಟಿ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.










ಪ್ರದರ್ಶನದ ಸಮಯದಲ್ಲಿ ಆಯೋಜಕರು ಮತ್ತು ಪಟಾಕಿ ಸಿಡಿಸುವವರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿರುವುದು ಹಾಗೂ ನಿರ್ಲಕ್ಷ್ಯ ವಹಿಸಿರುವುದೇ ಈ ಅವಘಡಕ್ಕೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರಿನನ್ವಯ ಪುತ್ತೂರು ನಗರ ಪೊಲೀಸರು ಪಟಾಕಿ ಸಿಡಿಸುವವರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಸಂಬಂಧಪಟ್ಟ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪುತ್ತೂರು ನಗರ ಠಾಣೆಯಲ್ಲಿ ಕ್ರೈಂ ಸಂಖ್ಯೆ 45/2026ರ ಅಡಿಯಲ್ಲಿ, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 288 (ಅಪಾಯಕಾರಿ ಸ್ಫೋಟಕ ವಸ್ತುಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ), 125(a) (ಇತರರ ಜೀವಕ್ಕೆ ಅಪಾಯ ತರುವುದು) ಮತ್ತು 3(5) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಜಾತ್ರೆಗಳಂತಹ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಟಾಕಿ ಪ್ರದರ್ಶನದ ವೇಳೆ ಕಟ್ಟುನಿಟ್ಟಾದ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕಾದ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.

