ಸುಳ್ಯ:ಪ್ರಜಾಧ್ವನಿ ಕರ್ನಾಟಕ ಸಂಘಟನೆಯ ವತಿಯಿಂದ ಇಂದು ನಗರದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಮತ್ತು ವಿಶೇಷ ಸಂವಾದ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವು ಕುಚುಪುಡಿ ನೃತ್ಯದ ಮೂಲಕ ವಿಶ್ವದಾಖಲೆ ನಿರ್ಮಿಸಿದ ಎನ್ ಎಮ್ ಸಿ ವಿದ್ಯಾರ್ಥಿ ಅಭಿಷೇಕ್ ಎಂ. ಪ್ರಾರ್ಥನಾ ಗೀತೆಯ ಮೂಲಕ ಶುರುವಾಯಿತು. ನಂತರ ಆಗಮಿಸಿದ ಅತಿಥಿ ಗಣ್ಯರನ್ನು ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಚಲನ ಟಿ. ಆತ್ಮೀಯವಾಗಿ ಸ್ವಾಗತಿಸಿದರು.



ಪ್ರಜಾಧ್ವನಿ ಕರ್ನಾಟಕದ ಮಾಧ್ಯಮ ಕಾರ್ಯದರ್ಶಿ ಭರತ್ ಕುಕ್ಕುಜಡ್ಕ ಅವರು ಸಂವಿಧಾನದ ಪೀಠಿಕೆಯನ್ನು ವಾಚಿಸುವುದರ ಮೂಲಕ ಕಾರ್ಯಕ್ರಮಕ್ಕೆ ತಾತ್ವಿಕ ಮೆರುಗು ನೀಡಿದರು. ಜ್ಯೋತಿ ಬೆಳಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಸಾಂಕೇತಿಕವಾಗಿ ಉದ್ಘಾಟಿಸಲಾಯಿತು. ಸಂಘಟನೆಯ ಉಪಾಧ್ಯಕ್ಷರಾದ ಪ್ರವೀಣ್ ಮುಂಡೋಡಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮದ ಉದ್ದೇಶ ಪ್ರಜಾಧ್ವನಿ ಪರಿಚಯ ಮತ್ತು ಅಂಬೇಡ್ಕರ್ ಅವರ ವಿಚಾರಧಾರೆಗಳ ಅಗತ್ಯತೆಯನ್ನು ಸಭೆಯ ಮುಂದಿಟ್ಟರು.
ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಸುಚಿತ್ರಾ ಜನಾರ್ಧನ್ ಅವರು ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ವಿಸ್ತಾರವಾಗಿ ಉಪನ್ಯಾಸ ನೀಡಿದರು. ಅಂಬೇಡ್ಕರ್ ಅವರ ಬಗ್ಗೆ ಸಮಾಜದಲ್ಲಿರುವ ಪೂರ್ವಾಗ್ರಹ ಪೀಡಿತ ಕಲ್ಪನೆಗಳು ಮತ್ತು ವಾಸ್ತವ ಸಂಗತಿಗಳ ಬಗ್ಗೆ ಅವರು ಬೆಳಕು ಚೆಲ್ಲಿದರು. ಸಂವಿಧಾನದ ಆಶಯಗಳು ಮತ್ತು ಮೀಸಲಾತಿಯ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರಲ್ಲಿದ್ದ ಹಲವಾರು ಪ್ರಶ್ನೆಗಳಿಗೆ ಮತ್ತು ಅನುಮಾನಗಳಿಗೆ ಸುಚಿತ್ರಾ ಅವರು ಅರ್ಥಪೂರ್ಣವಾಗಿ ಉತ್ತರಿಸಿದರು. ಈ ಸಂವಾದಕ್ಕೆ ವಿದ್ಯಾರ್ಥಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎನ್.ಎಂ.ಸಿ ಪ್ರಾಂಶುಪಾಲರಾದ ರುದ್ರಕುಮಾರ್ ಅವರು ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಸಂವಿಧಾನದ ಆಶಯಗಳನ್ನು ಅರಿತುಕೊಳ್ಳುವುದು ಮತ್ತು ಅಂಬೇಡ್ಕರ್ ಅವರ ಹೋರಾಟದ ಹಾದಿಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ನಾಯಕಿ ರಚನಾ ಟಿ. ಅವರು ತಮ್ಮ ಅನಿಸಿಕೆ ಹಂಚಿಕೊಂಡು, “ಈ ದಿನದ ಕಾರ್ಯಕ್ರಮವು ನಮ್ಮಲ್ಲಿ ಅಂಬೇಡ್ಕರ್, ಸಂವಿಧಾನ ಮತ್ತು ಮೀಸಲಾತಿ ಬಗ್ಗೆ ಇದ್ದ ಅನೇಕ ತಪ್ಪು ಕಲ್ಪನೆಗಳನ್ನು ನಿವಾರಿಸಿದೆ. ಇಂತಹ ಅರ್ಥಪೂರ್ಣ ಸಂವಾದದಲ್ಲಿ ಭಾಗವಹಿಸಿದ್ದು ನಿಜಕ್ಕೂ ಸಾರ್ಥಕ ಎನಿಸಿದೆ,” ಎಂದು ಹರ್ಷ ವ್ಯಕ್ತಪಡಿಸಿದರು.



ಕಾರ್ಯಕ್ರಮದಲ್ಲಿ ಪ್ರಜಾಧ್ವನಿ ಕರ್ನಾಟಕದ ಪ್ರಮುಖರಾದ ಗೋಪಾಲ್ ಪೆರಾಜೆ, ಕೇಶವ ಪಾಟಾಳಿ, ಮಂಜುನಾಥ ಮಡ್ತಿಲ, ವಸಂತ ಪೆಲ್ತಡ್ಕ, ಅಶ್ರಫ್ ಸಾಹುಕಾರ್, ಮಹೇಶ್ ಬೆಳ್ಳಾರ್ಕರ್ ಮತ್ತು ಎನ್.ಎಂ.ಸಿ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಪ್ರೇಕ್ಷಾ (2nd B. Sc.). ನೆರವೇರಿಸಿದ್ದರು. ಕೊನೆಯಲ್ಲಿ ವಿದ್ಯಾರ್ಥಿನಿ ಅರ್ಪಿತಾ (2nd B.Sc.)ಧನ್ಯವಾದ ಸಮರ್ಪಣೆ ಮಾಡುವುದರೊಂದಿಗೆ ಮತ್ತು ಪ್ರಜಾಧ್ವನಿ ಕರ್ನಾಟಕದ ವತಿಯಿಂದ ಸಿಹಿತಿಂಡಿ ವಿತರಣೆ ಮಾಡುವ ಮೂಲಕ ಕಾರ್ಯಕ್ರಮ ಸುಸಂಪನ್ನಗೊಂಡಿತು.

