ಸಮಾಜವನ್ನು ಕಲುಕುವ ಘಟನೆಗಳು: ನಮ್ಮ ಸಮಾಜ ಎತ್ತ ಸಾಗುತ್ತಿದೆ?

ಇತ್ತೀಚಿನ ದಿನಗಳಲ್ಲಿ “ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ”, “ಮಗ ತನ್ನನ್ನು ಹೋಲುವುದಿಲ್ಲ ಎಂದು ನೆಂಟರ ಮಾತಿಗೆ ಕಿವಿಗೊಟ್ಟು ತಂದೆಯಿಂದ ಮಗುವಿನ ಕೊಲೆ” ಇಂತಹ ಸುದ್ದಿಗಳು ಸಮಾಜವನ್ನು ಬೆಚ್ಚಿಬೀಳಿಸುತ್ತಿವೆ. ಇವು ಒಂದೇ ಒಂದು ಕುಟುಂಬದ ದುರ್ಘಟನೆಗಳಲ್ಲ; ನಮ್ಮ ಸಮಾಜದ ಜನರ ಮಾನಸಿಕ ಒತ್ತಡಗಳು, ಅಸುರಕ್ಷಿತ ಭಾವನೆಗಳು ಮತ್ತು ಅಜ್ಞಾನದ ಪ್ರತಿಬಿಂಬ.

ಈ ಘಟನೆಗಳ ಹಿಂದೆ ಇರುವ ಮೂಲ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ಮೊದಲನೆಯದಾಗಿ, ತೀವ್ರ ಮಾನಸಿಕ ಒತ್ತಡ ಮತ್ತು ಡಿಪ್ರೆಷನ್ ಪ್ರಮುಖ ಕಾರಣಗಳಲ್ಲಿ ಒಂದು.
ಕೆಲವರು ಪೋಷಕರು ಜೀವನದ ಕಷ್ಟಗಳು, ಸಾಲ, ಸಂಬಂಧಗಳ ಸಮಸ್ಯೆಗಳು ಅಥವಾ ಒಂಟಿತನದಿಂದಾಗಿ ಒಳಗೊಳಗೆ ಕುಗ್ಗುತ್ತಿರುತ್ತಾರೆ. ಈ ಸ್ಥಿತಿಯಲ್ಲಿ ಅವರ ಚಿಂತನೆ ಸ್ಪಷ್ಟವಾಗಿರುವುದಿಲ್ಲ. ಕೆಲವರಿಗೆ “ನಾನು ಇಲ್ಲದೆ ನನ್ನ ಮಕ್ಕಳು ಹೇಗೆ ಬದುಕುತ್ತಾರೆ?” ಎಂಬ ತಪ್ಪು ಭಾವನೆ ಮೂಡಿ, ಮಕ್ಕಳನ್ನೇ ತಮ್ಮೊಂದಿಗೆ ತೆಗೆದುಕೊಂಡು ಹೋಗುವ ದುರಂತ ನಿರ್ಧಾರ ಕೈಗೊಳ್ಳುತ್ತಾರೆ.

ಸಮಾಜದ ಒತ್ತಡ ಮತ್ತು ಹೋಲಿಕೆ ಮನೋಭಾವ. “ಮಗ ತಂದೆಯಂತಿಲ್ಲ”, “ಯಾರಂತೆ ಕಾಣುತ್ತಾನೆ?” ಎಂಬ ನೆಂಟರ ಮಾತುಗಳು ಕೆಲವೊಮ್ಮೆ ಹಾಸ್ಯವಾಗಿರಬಹುದು, ಆದರೆ ಕೆಲವರ ಮನಸ್ಸಿಗೆ ಅದು ವಿಷವಾಗುತ್ತದೆ. ಆತ್ಮಗೌರವಕ್ಕೆ ಧಕ್ಕೆ ಉಂಟಾದಾಗ, ಕೋಪ ಮತ್ತು ಅನುಮಾನಗಳು ಹೆಚ್ಚುತ್ತವೆ. ಈ ಅಸಹನೆ ಯುಕ್ತಿಯಿಲ್ಲದ ನಿರ್ಧಾರಗಳಿಗೆ ದಾರಿ ಮಾಡಿಕೊಡುತ್ತದೆ.

ಸಂಶಯ ಮತ್ತು ಅತಿಯಾದ ಸ್ವಾಮ್ಯಭಾವ. ಕೆಲವರು ಸಂಬಂಧಗಳಲ್ಲಿ ನಂಬಿಕೆ ಕಳೆದುಕೊಂಡಾಗ, ತಮ್ಮದೇ ಕುಟುಂಬದ ಮೇಲೆ ಅನುಮಾನ ಪಡುವ ಮಟ್ಟಕ್ಕೆ ಹೋಗುತ್ತಾರೆ. ಈ ಮನಸ್ಥಿತಿ ಅತ್ಯಂತ ಅಪಾಯಕಾರಿ. ಇಲ್ಲಿ ಪ್ರೀತಿ ಅಲ್ಲ, ನಿಯಂತ್ರಣ ಮತ್ತು ಕೋಪವೇ ಮುಖ್ಯವಾಗುತ್ತದೆ.

ಮಾನಸಿಕ ಆರೋಗ್ಯದ ಅರಿವಿನ ಕೊರತೆ. ನಮ್ಮ ಸಮಾಜದಲ್ಲಿ ಇನ್ನೂ “ಮಾನಸಿಕ ಸಮಸ್ಯೆ” ಎನ್ನುವುದನ್ನು ಸರಿಯಾಗಿ ಸ್ವೀಕರಿಸುವ ಮನೋಭಾವ ಕಡಿಮೆ. ಮನಸ್ಸು ಕಂಗೆಟ್ಟಾಗ ವೈದ್ಯರನ್ನು ಸಂಪರ್ಕಿಸುವ ಬದಲು, ಮೌನವಾಗಿ ನೋವನ್ನು ಸಹಿಸುತ್ತಾರೆ. ಇದು ಒಳಗೊಳಗೆ ಸ್ಫೋಟವಾಗುವ ಪರಿಸ್ಥಿತಿ ತರುತ್ತದೆ. ಮನೋವೈದ್ಯರ ಭೇಟಿ ಮಾಡಿ ಪರಿಹಾರ ಕೇಳುವಷ್ಟು ವಿಶಾಲವಾಗಿ ಜನರಿನ್ನು ಯೋಚಿಸುತ್ತಿಲ್ಲ.

ತಕ್ಷಣದ ಕೋಪ ಮತ್ತು ನಿಯಂತ್ರಣದ ಕೊರತೆ. ಒಂದು ಕ್ಷಣದ ಆಕ್ರೋಶ, ಒಂದು ತಪ್ಪಾದ ನಿರ್ಧಾರ ಜೀವವನ್ನೇ ಕಳೆದುಕೊಳ್ಳುವ ಮಟ್ಟಕ್ಕೆ ಹೋಗುತ್ತದೆ. ಆ ಕ್ಷಣದಲ್ಲಿ ಅವರು ಪರಿಣಾಮಗಳನ್ನು ಯೋಚಿಸುವುದೇ ಇಲ್ಲ.

ಇಂತಹ ಘಟನೆಗಳು ನಮಗೆ ಏನು ಹೇಳುತ್ತವೆ?

ಕೆಲವರು ಆಡುವ ಮಾತುಗಳು ಕೇವಲ ಮಾತುಗಳಲ್ಲ ಎಂಬುದನ್ನು ನೆನಪಿಸಬೇಕು. ಯಾರನ್ನಾದರೂ ಹೋಲಿಸುವುದು, ಅನುಮಾನದ ಬೀಜ ಬಿತ್ತುವುದು ಇವು ಜೀವಘಾತಕ ಪರಿಣಾಮ ನೀಡಬಹುದು. ಎಲ್ಲರೂ ಒಂದೆ ತರನಾಗಿ ಯೋಚಿಸುವುದಿಲ್ಲ. ಕೆಲವರು ಮಾನಸಿಕವಾಗಿ ದುರ್ಬಲರಾಗಿರುತ್ತಾರೆ.

ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ದೇಹಕ್ಕೆ ನೋವಾದರೆ ವೈದ್ಯರನ್ನು ನೋಡುತ್ತೇವೆ, ಹಾಗೆಯೇ ಮನಸ್ಸಿಗೂ ಚಿಕಿತ್ಸೆ ಬೇಕಾಗುತ್ತದೆ. ಕೌನ್ಸೆಲಿಂಗ್, ಮಾತುಕತೆ, ಸಹಾಯ ಕೇಳುವುದು ಇವು ದುರ್ಬಲತೆ ಅಲ್ಲ, ಧೈರ್ಯದ ನಡೆ ಎಂದು ಭಾವಿಸಿ ಮುನ್ನಡೆಯಬೇಕು.

ಕುಟುಂಬದಲ್ಲಿ ಸಂಭಾಷಣೆ ಹೆಚ್ಚಬೇಕು. ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುವುದು, ಒಬ್ಬರನ್ನೊಬ್ಬರು ಕೇಳಿಕೊಳ್ಳುವುದು ಇವು ಅನೇಕ ಸಮಸ್ಯೆಗಳನ್ನು ಆರಂಭದಲ್ಲೇ ತಡೆಯಬಹುದು. ಸಮಾಜವಾಗಿ ನಾವು ಜವಾಬ್ದಾರರಾಗಬೇಕು. ಯಾರಾದರೂ ಒತ್ತಡದಲ್ಲಿ ಇದ್ದರೆ ಗಮನಿಸಿ, ಸಹಾಯ ಮಾಡಲು ಮುಂದಾಗಬೇಕು. ಕೇವಲ ಟೀಕೆ ಮಾಡುವುದಲ್ಲ, ಬೆಂಬಲ ನೀಡುವುದು ಮುಖ್ಯ.

ಒಂದಂತು ಸತ್ಯ  “ಮಕ್ಕಳು ನಮ್ಮ ಆಸ್ತಿ ಅಲ್ಲ, ನಮ್ಮ ಜವಾಬ್ದಾರಿ.” ಅವರ ಜೀವವನ್ನು ಕಾಪಾಡುವುದು ನಮ್ಮ ಕರ್ತವ್ಯ, ಕೋಪ ಅಥವಾ ನೋವಿನ ಕ್ಷಣದಲ್ಲಿ ಅದನ್ನು ಕಳೆದುಕೊಳ್ಳುವುದು ದುರಂತ.

ಈ ಘಟನೆಗಳು ನಮ್ಮೆಲ್ಲರಿಗೂ ಎಚ್ಚರಿಕೆ, ಮನಸ್ಸನ್ನು ಕಾಪಾಡಿಕೊಳ್ಳಿ, ಮಾತುಗಳನ್ನು ಎಚ್ಚರಿಕೆಯಿಂದ ಬಳಸಿ, ಮತ್ತು ಅಗತ್ಯವಿದ್ದಾಗ ಸಹಾಯ ಕೇಳಲು ಹೆದರಬೇಡಿ. ಒಂಟಿಯಾಗಿರಬೇಡಿ. ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ. ಯೋಗ ದ್ಯಾನ ಪ್ರಾಣಾಯಾಮವು ನಮ್ಮ ಮನಸ್ಸು ಮತ್ತು ದೇಹದ ಆರೋಗ್ಯವನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿದೆ.

– ಸಿಂಧು ಭಾರ್ಗವ,

Leave a Reply

Discover more from

Subscribe now to keep reading and get access to the full archive.

Continue reading