
ಮುಂಬಯಿನ ಪ್ರತಿಷ್ಠಿತ ಸಂಸ್ಥೆಯಾದ ಕನ್ನಡ ಕಲಾ ಕೇಂದ್ರ ಮುಂಬಯಿ ಇವರು
ರಂಗ ಚಟುವಟಿಕೆಗಳಿಗೆ ಪ್ರೋತ್ಸಾಹ ಮತ್ತು ರಂಗಭೂಮಿಯಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಬಯಸುವ ಆಸಕ್ತ ಕಲಾವಿದರು ಮತ್ತು ರಂಗಾಸಕ್ತರಿಗಾಗಿ ವೃತ್ತಿಪರ ರಂಗ ತಜ್ಞರಿಂದ ರಂಗ ತರಬೇತಿ ನೀಡಿ ಪ್ರೋತ್ಸಾಹಿಸುವ ಸದುದ್ಧೇಶದಿಂದ ಮಹಾನಗರದ ವಿವಿಧೆಡೆ ಸ್ಥಳೀಯ ಸಂಘ ಸಂಸ್ಥೆಗಳ ಜೊತೆ ಕೈಜೋಡಿಸಿ ರಂಗ ತರಬೇತಿ ಶಿಬಿರವನ್ನು ಆಯೋಜಿಸಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಬಾರಿ, ಕನ್ನಡ ಸಂಘ ಅಣುಶಕ್ತಿ ಕೇಂದ್ರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ, ಎ.ಎಸ್. ಎಮ್.ಸಿ. (ಏಸಿ ಡಬಲ್ ಹಾಲ್), ಇಂದ್ರಧನುಷ್, ಅಣುಶಕ್ತಿ ನಗರ , ಮುಂಬಯಿ ಇಲ್ಲಿ ತಾ.10.10.26 ಮತ್ತು 11.10.26 ದಂದು ರಂಗ ತರಬೇತಿ ಶಿಬಿರವನ್ನು ಆಯೋಜಿಸಿರುವರು.
ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನಿಂದ ನುರಿತ, ಪ್ರತಿಭಾವಂತ ರಂಗ ನಟಿ, ಸಿನೆಮಾ ನಿರ್ದೇಶಕಿ ನಿರ್ಮಲಾ ನಾದನ್ ಆಗಮಿಸಲಿದ್ದಾರೆ ಉಚಿತವಾಗಿರುವ ಈ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ರಂಗ ನಟನೆ, ಸಂಭಾಷಣೆ, ರಂಗ ಗೀತೆ ಇತ್ಯಾದಿ ವಿಷಯಗಳ ಕುರಿತು ತರಬೇತಿ ನೀಡಲಾಗುವುದು. ಶಿಬಿರದ ಸಂಯೋಜಕರಾಗಿ ಕವಿ, ರಂಗಕರ್ಮಿ ಗೋಪಾಲ ತ್ರಾಸಿ ಮತ್ತು ಸಹಾಯಕರಾಗಿ ಕೆ. ಪಂಕಜ ಮರಿಯಮ್ಮನ ಹಳ್ಳಿ ಸಹಕರಿಸಲಿದ್ದಾರೆ.
ಶನಿವಾರ ಮಧ್ಯಾಹ್ನ 3 ರಿಂದ 6 ಗಂಟೆ ತನಕ ಮತ್ತು ಮರುದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ತನಕ ನಡೆಯಲಿರುವ ಈ ಶಿಬಿರದ ಪ್ರಯೋಜನವನ್ನು ಹೆಚ್ಚಿನ ರಂಗ ಕಲಾವಿದರು, ರಂಗಾಸಕ್ತರು ಪಡೆದುಕೊಳ್ಳಬೇಕು, ಎರಡೂ ದಿನ ಭಾಗವಹಿಸುವ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದೆಂದು ಕನ್ನಡ ಕಲಾ ಕೇಂದ್ರದ ಅಧ್ಯಕ್ಷರಾದ ಮಧುಸೂದನ ಟಿ.ಆರ್ ಮತ್ತು ಕನ್ನಡ ಸಂಘ ಅಣುಶಕ್ತಿ ಕೇಂದ್ರದ ಕಾರ್ಯಾಧ್ಯಕ್ಷರಾದ ಮಂಜುನಾಥ್ ಬಿ.ಎಸ್. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

