​ಕುಪ್ಪಳ್ಳಿಯಲ್ಲಿ ಗಾಂಧಿ-ಅಂಬೇಡ್ಕರ್-ಲೋಹಿಯಾ ಅಧ್ಯಯನ ಶಿಬಿರಕ್ಕೆ ಚಾಲನೆ

ಕುಪ್ಪಳಿ: ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನ (ರಿ) ಶಿವಮೊಗ್ಗ ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ‘ಗಾಂಧಿ-ಅಂಬೇಡ್ಕರ್-ಲೋಹಿಯಾ: ಆಯ್ದ ಪಠ್ಯಗಳ ನಿಕಟ ಓದು’ ಅಧ್ಯಯನ ಶಿಬಿರವು ಅಕ್ಟೋಬರ್ 24 ರಂದು ಅದ್ಧೂರಿಯಾಗಿ ಪ್ರಾರಂಭವಾಯಿತು.
​ಬೆಳಿಗ್ಗೆ 9.30ಕ್ಕೆ ದು. ಸರಸ್ವತಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜರಾಮ್ ತೋಳ್ಪಾಡಿ ವಹಿಸಿದ್ದರೆ, ಮುಖ್ಯ ಅತಿಥಿಗಳಾಗಿ ಕಡಿದಾಳ್ ಪ್ರಕಾಶ್ ಆಗಮಿಸಿದ್ದರು. ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನದ ಸವಿತಾ ನಾಗಭೂಷಣ್ ಹಾಗೂ ಶ್ರೀದೇವಿ ರೇಕಾಂಬ ಶಿವಮೊಗ್ಗ ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದ ಬಳಿಕ ದರ್ಶನ್ ಅವರು ಕುವೆಂಪುರವರ “ಮುಚ್ಚುಮರೆ ಇಲ್ಲದೆಯೇ ನಿನ್ನ ಮುಂದೆಲ್ಲವನು ಬಿಚ್ಚಿಡುವೆ ಓ ಗುರುವೆ ಅಂತರಾತ್ಮ” ಎಂಬ ಸುಂದರ ಪ್ರಾರ್ಥನಾ ಗೀತೆಯನ್ನು ಭಕ್ತಿಪೂರ್ವಕವಾಗಿ ಹಾಡಿದರು.
​ಬೆಳಿಗ್ಗೆ 11.45ಕ್ಕೆ ಮೊದಲ ಗೋಷ್ಠಿ ಆರಂಭವಾಯಿತು. ಮೈಸೂರಿನ ಕೆ. ಜಿ. ಸಚ್ಚಿದಾನಂದ ಅವರು ‘ಗಾಂಧೀಜಿ-ಟ್ಯಾಗೋರ್ ಮತ್ತು ಚರಕ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಮಧ್ಯಾಹ್ನದ ಎರಡನೇ ಗೋಷ್ಠಿಯಲ್ಲಿ ಎ. ನಾರಾಯಣ ಅವರು ಅಂಬೇಡ್ಕರ್ ಅವರ ‘ಜಾತಿ ವಿನಾಶ’ ಪುಸ್ತಕದ ಕುರಿತು ಮತ್ತು ಎನ್. ಎ. ಎಮ್. ಇಸ್ಮಾಯಿಲ್ ಅವರು ‘ಸಂವಿಧಾನ ಸಮರ್ಪಣೆಯ ದಿನದಂದು ಬಾಬಾಸಾಹೇಬರು ಮಾಡಿದ ಭಾಷಣ’ದ ಕುರಿತು ವಿಚಾರ ಮಂಡಿಸಿದರು.
​ರಾತ್ರಿ ದು. ಸರಸ್ವತಿ ಅವರು ‘ಪಕ್ಷಿ ಪುರಾಣ’ ಎಂಬ ಏಕವ್ಯಕ್ತಿ ರಂಗಪ್ರಸ್ತುತಿ ನಡೆಸಿಕೊಟ್ಟರು. ತದನಂತರ ಶ್ರೀಕಾಂತ್ ಅವರ ನಿರ್ದೇಶನದ ‘ಆನೆ ಡಾಕ್ಟರ್’ ರಂಗಪ್ರಸ್ತುತಿಯನ್ನು ಪ್ರದರ್ಶಿಸಲಾಯಿತು. ಇದರೊಂದಿಗೆ ಕಮ್ಮಟದ ಮೊದಲ ದಿನದ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪೂರ್ಣಗೊಂಡವು

ನಿಮ್ಮದೊಂದು ಉತ್ತರ