

ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಸಂಪಾಜೆ, ಲಯನ್ಸ್ ಕ್ಲಬ್ ಸಂಪಾಜೆ, ಪಯಶ್ವಿನಿ ಯುವಕ ಸಂಘ, ನೇತಾಜಿ ಗೆಳೆಯರ ಬಳಗ, ಆದರ್ಶ ಫ್ರೆಂಡ್ಸ್ ಕ್ಲಬ್, ಶಿರಾಡಿ ಫ್ರೆಂಡ್ಸ್ ಮತ್ತು ಪ್ರಜಾದ್ವನಿ ಕರ್ನಾಟಕ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಸಂಪಾಜೆ ಗೇಟ್ ಬಳಿ ನಡೆಯಿತು.
ಪಂಚಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿ ಸಂಪಾಜೆ ಇದರ ಅಧ್ಯಕ್ಷರಾದ ಶ್ರೀ ವೀರಪ್ಪ ಕಲಾಯಿ ಅವರು ಕನ್ನಡ ಧ್ವಜಾರೋಹಣಗೈದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಸಂಪಾಜೆ ಅಧ್ಯಕ್ಷರಾದ ಶ್ರೀ ಗಿರೀಶ್ ಕುಯ್ಯಮುಡಿ ಮತ್ತು ಚೆಸ್ಕಾಂ ಸಲಹಾ ಸಮಿತಿ ಗ್ರಾಮ ಪಂಚಾಯತಿ ಸಂಪಾಜೆ ಇದರ ಸದಸ್ಯರಾದ ಶ್ರೀ ರಿತಿನ್ ಡೆಮ್ಮಲೆ ಉಪಸ್ಥಿತರಿದ್ದರು.
ಆರಂಭದಲ್ಲಿ ಸಂಪಾಜೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಧ್ವಜಾರೋಹಣಗೈದ ಶ್ರೀ ವೀರಪ್ಪ ಕಲಾಯಿ ಅವರು ಮಾತನಾಡಿ, “ಕನ್ನಡ ಭಾಷೆಯನ್ನು ನಾವೆಲ್ಲರೂ ಬೆಳೆಸುವ ಮುಖಾಂತರ ಕನ್ನಡ ಭಾಷೆ ಇನ್ನಷ್ಟು ಅಭಿವೃದ್ಧಿಗೊಳ್ಳಲು ಪ್ರಯತ್ನಿಸೋಣ” ಎಂದರು. ಶ್ರೀ ಗಿರೀಶ್ ಕುಯ್ಯಮುಡಿ ಎಲ್ಲರನ್ನು ಉದ್ದೇಶಿಸಿ ಮಾತನಾಡಿ, “ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದ್ದು, ಈ ನೆಲೆಯಲ್ಲಿ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ನಡೆಸುವ ಮುಖಾಂತರ ಕನ್ನಡ ಅಭಿಮಾನವನ್ನು ಬೆಳೆಸಿಕೊಳ್ಳೋಣ” ಎಂದರು. ಶ್ರೀ ರಿತಿನ್ ಡೆಮ್ಮಲೆ ಮಾತನಾಡಿ, “ಪರಿಷತ್ ವತಿಯಿಂದ ಪ್ರತಿವರ್ಷವೂ ಇಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಜೃಂಭಣೆಯಿಂದ ಆಚರಣೆ ನಡೆಸುವ ಮುಖಾಂತರ ಕನ್ನಡವನ್ನು ಬೆಳೆಸೋಣ” ಎಂದರು.
ಕಾರ್ಯಕ್ರಮ ಸಂಘಟನೆಯ ನೆಲೆಯಲ್ಲಿ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷರಾದ ಶ್ರೀ ಗೋಪಾಲ ಪೆರಾಜೆ ಮಾತನಾಡಿ, “ಕನ್ನಡ ಭಾಷೆ ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾಷೆಯನ್ನು ಉಳಿಸಿ ಇನ್ನಷ್ಟು ಬೆಳೆಸುವ ನೆಲೆಯಲ್ಲಿ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಬೇಕು. ಪೋಷಕರು ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಬೇಕು. ಅಷ್ಟೇ ಅಲ್ಲದೆ, ಸರಕಾರ ಕೂಡ ಕನ್ನಡ ಶಾಲೆಗಳು ಮುಚ್ಚುವುದನ್ನು ತಡೆಯಲು ಗಂಭೀರ ಪ್ರಯತ್ನಗಳನ್ನು ನಡೆಸಬೇಕು. ಕನ್ನಡ ಶಾಲೆಗಳ ಹಿಂದಿನ ದುಸ್ಥಿತಿಗೆ ನಾವೆಲ್ಲರೂ ಹೊಣೆಗಾರರು” ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಲಾಯಿತು ಮತ್ತು ಕೊನೆಯಲ್ಲಿ ಶ್ರೀಮತಿ ಕಾಂತಿ ಬಿ.ಎಸ್. ಅವರು ಧನ್ಯವಾದಗೈದರು.
ಸಮಾರಂಭದಲ್ಲಿ ಶ್ರೀ ಕಿಶೋರ್ ಕುಮಾರ್ ಬಿ.ಬಿ., ಶ್ರೀ ವೆಂಕಪ್ಪ ಮಾಸ್ಟರ್ ಕರಂಬಡ್ಕ, ಶ್ರೀ ಪ್ರಶಾಂತ್ ಇ.ವಿ., ಶ್ರೀಮತಿ ನಳಿನಿ ಕಿಶೋರ್, ಶ್ರೀಮತಿ ಟೀನಾ ಎಚ್.ಎಸ್., ಶ್ರೀಮತಿ ಲಿಸ್ಸಿ ಮೊನೋಲಿಸಾ, ಶ್ರೀ ವಾಸುದೇವ ಕಟ್ಟೆಮನೆ, ಶ್ರೀ ಸುರೇಶ್ ಸಂಪಾಜೆ, ಶ್ರೀಮತಿ ಗೀತಾ ಗಾಯತ್ರಿ ಕೊಳಂಗಾಯ, ಶ್ರೀ ಸೀತಾರಾಮ್, ಶ್ರೀ ಮಲ್ಲಿಕಾರ್ಜುನ ಹಾಗೂ ರಿಕ್ಷಾ ಚಾಲಕ-ಮಾಲಕ ಸಂಘದ ಸದಸ್ಯರು ಮತ್ತು ವಿವಿಧ ಇಲಾಖೆಯ ಅಧಿಕಾರಿ ವರ್ಗದವರು ಹಾಜರಿದ್ದರು.

