ತುಮರಿಯಲ್ಲಿ ‘ಸೌಹಾರ್ದ ನೆಲೆಗಳು’ ಸಾಹಿತ್ಯಿಕ ಸಂವಾದ: ಸೌಹಾರ್ದತೆಯ ಪರಿಕಲ್ಪನೆಯನ್ನು ವಿಸ್ತರಿಸುವ ಅಗತ್ಯವಿದೆ

ಸಾಗರ ತುಮರು (ಶಿವಮೊಗ್ಗ), ಅಕ್ಟೋಬರ್ 05, 2026:
ಸಮಾಜದಲ್ಲಿ ಶಾಂತಿ, ಸಾಮರಸ್ಯ ಮತ್ತು ವೈಚಾರಿಕ ಚಿಂತನೆಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಇವರ ಸಹಯೋಗದಲ್ಲಿ, ತುಮರಿಯ ಹೋಟೆಲ್ ಹಾಲ್ಕೆರೆ ಸಂಸ್ಥೆಯ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ‘ಸೌಹಾರ್ದ ನೆಲೆಗಳು’ (ಉಪನ್ಯಾಸ ಮತ್ತು ಸಂವಾದ–4) ಕಾರ್ಯಕ್ರಮವು ಸಾಗರ ತಾಲ್ಲೂಕಿನ ತುಮರಿಯ ಶ್ರೀ ಗೋಪಾಲಗೌಡ ರಂಗಮಂದಿರದಲ್ಲಿ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಅಭಿವ್ಯಕ್ತಿ ಬಳಗ, ತುಮರಿಯ ಕಾರ್ಯದರ್ಶಿ ರಘು ಹಾಲ್ಕೆರೆ ಅವರು ಎಲ್ಲರನ್ನೂ ಸ್ವಾಗತಿಸಿದರು.
ಸಂಸ್ಕೃತಿಯಿಂದ ಸೌಹಾರ್ದತೆ ಸಾಧ್ಯ – ಉದ್ಘಾಟಕರ ನುಡಿ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್. ಎನ್. ಮುಕುಂದರಾಜ್ ಅವರು, ಸಾಹಿತ್ಯ ಮತ್ತು ಕಲೆಗಳು ಸಮಾಜದಲ್ಲಿ ಸೌಹಾರ್ದತೆಯನ್ನು ಬಿತ್ತುವ ಪ್ರಬಲ ಮಾಧ್ಯಮಗಳಾಗಿವೆ ಎಂದು ತಿಳಿಸಿದರು.
ಪ್ರಸಿದ್ಧ ಲೇಖಕ ಹಾಗೂ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ. ಜಯಪ್ರಕಾಶ್ ಮಾವಿನಕುಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಕಾ. ವೆಂ. ಶ್ರೀನಿವಾಸಮೂರ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಉದ್ದೇಶ ಹಾಗೂ ಆಶಯಗಳನ್ನು ಸಭೆಯ ಮುಂದಿಟ್ಟರು.
ಪ್ರಮುಖ ಉಪನ್ಯಾಸಗಳು
ಕಾರ್ಯಕ್ರಮದಲ್ಲಿ ಸಾಹಿತ್ಯ ಮತ್ತು ತತ್ವಶಾಸ್ತ್ರದ ವಿವಿಧ ಆಯಾಮಗಳ ಕುರಿತು ಗಂಭೀರ ಚಿಂತನ–ಮಂಥನ ನಡೆಯಿತು.
ಕಾರಂತರ ಸಾಹಿತ್ಯ ಮತ್ತು ಸೌಹಾರ್ದತೆ: ಮುಂಬೈನ ಸಾಹಿತಿ ಹಾಗೂ ರಂಗಕರ್ಮಿ ಗೋಪಾಲ ತ್ರಾಸಿ ಅವರು ಶಿವರಾಮ ಕಾರಂತರ ಸಾಹಿತ್ಯದಲ್ಲಿರುವ ಸೌಹಾರ್ದತೆ ಮತ್ತು ಸಾಮಾಜಿಕ ಕಾಳಜಿಗಳ ಕುರಿತು ವಿಷಯ ಮಂಡಿಸಿದರು.
ಝೆನ್ ಮತ್ತು ಸಹಜ ಸಾಮರಸ್ಯ: ದಕ್ಷಿಣ ಕನ್ನಡದ ಪ್ರಸಿದ್ಧ ಚಿಂತಕ ಡಾ. ಲಕ್ಷ್ಮೀಶ ತೋಳ್ಪಾಡಿ ಅವರು ‘ಪೂರ್ವದ ಅಪೂರ್ವ ತತ್ವ ತಾವೂ–ಝೆನ್ ಮತ್ತು ಸಹಜ ಸಾಮರಸ್ಯ’ ಎಂಬ ವಿಷಯದ ಕುರಿತು ಆಳವಾದ ಉಪನ್ಯಾಸ ನೀಡಿದರು.
ಜೈನ ಕವಿಗಳ ಕೊಡುಗೆ: ಉಡುಪಿಯ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್. ಅವರು ಪಂಪ ಹಾಗೂ ಇತರ ಜೈನ ಕವಿಗಳ ಕಾವ್ಯದಲ್ಲಿ ವ್ಯಕ್ತವಾಗಿರುವ ಸೌಹಾರ್ದತೆಯ ಸ್ವರೂಪವನ್ನು ಸವಿಸ್ತಾರವಾಗಿ ವಿವರಿಸಿದರು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಹಾಗೂ ತುಮರಿ ಅಭಿವೃದ್ಧಿ ಬಳಗದ ಅಧ್ಯಕ್ಷ ಲೋಕಪಾಲ್ ಜೈನ್ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಕರ್ನಾಟಕದ ಹಲವಾರು ಲೇಖಕರು, ಯುವ ಹಾಗೂ ಹಿರಿಯ ಕವಿಗಳು, ಸಾಹಿತಿಗಳು, ಸಾಹಿತ್ಯಾಸಕ್ತರು ಮತ್ತು ತುಮರಿ ಗ್ರಾಮದ ಜನತೆ ಸಾಕ್ಷಿಯಾದರು.
ಚಕೋರ ವೇದಿಕೆಯ ಸಂಚಾಲಕಿ ರಮ್ಯ ಮೂರ್ನಾಡು ಕಾರ್ಯಕ್ರಮವನ್ನು ಸಮರ್ಥವಾಗಿ ನಿರ್ವಹಣೆ ಮಾಡಿದರು

Leave a Reply

Discover more from

Subscribe now to keep reading and get access to the full archive.

Continue reading