ರಾಜ್ಯದಲ್ಲಿ ಒಂದು ವರ್ಷ ಗುಟ್ಕಾ, ಪಾನ್ ಮಸಾಲ ಮಾರಾಟ  ನಿಷೇಧ: ಸರ್ಕಾರದಿಂದ ಆದೇಶ

ಬೆಂಗಳೂರು: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಗುಟ್ಕಾ ಹಾಗೂ ನಿಕೋಟಿನ್ ಅಂಶವಿರುವ ಪಾನ್ ಮಸಾಲ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿ ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ನಿಷೇಧವು ಅಧಿಸೂಚನೆ ಹೊರಬಿದ್ದ ತಕ್ಷಣದಿಂದಲೇ ರಾಜ್ಯಾದ್ಯಂತ ಜಾರಿಗೆ ಬರಲಿದೆ.

ಕಾನೂನಿನ ಕಣ್ಣಿಗೆ ಮಣ್ಣೆರಚಿ ಗ್ರಾಹಕರಿಗೆ ತಂಬಾಕು ತಲುಪಿಸುವ ತಂತ್ರಗಳಿಗೂ ಸರ್ಕಾರ ಈ ಬಾರಿ ಬ್ರೇಕ್ ಹಾಕಿದೆ. ತಂಬಾಕು ಅಥವಾ ನಿಕೋಟಿನ್ ಮತ್ತು ಅಡಿಕೆಯನ್ನು ಪ್ರತ್ಯೇಕ ಸಣ್ಣ ಪ್ಯಾಕೇಟ್‌ಗಳಲ್ಲಿ ನೀಡಿ, ನಂತರ ಗ್ರಾಹಕರೇ ಅದನ್ನು ಮಿಶ್ರಣ ಮಾಡಿ ಬಳಸುವಂತಹ ಟ್ವಿನ್ ಪ್ಯಾಕ್ ಗುಟ್ಕಾ ಮತ್ತು ಪಾನ್ ಮಸಾಲ ಉತ್ಪನ್ನಗಳಿಗೂ ಈ ನಿಷೇಧ ಅನ್ವಯವಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆಯಡಿ ನೀಡಿರುವ ಅಧಿಕಾರವನ್ನು ಬಳಸಿ ಆರೋಗ್ಯ ಇಲಾಖೆ ಈ ಕಠಿಣ ನಿರ್ಧಾರ ತಳೆದಿದೆ. ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತಿರುವ ತಂಬಾಕು ಉತ್ಪನ್ನಗಳ ಬಳಕೆಯನ್ನು ತಡೆಯುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ.

ಅಧಿಸೂಚನೆ ಜಾರಿಯಲ್ಲಿದ್ದರೂ ಕದ್ದುಮುಚ್ಚಿ ಗುಟ್ಕಾ ಅಥವಾ ಪಾನ್ ಮಸಾಲ ಉತ್ಪಾದಿಸುವುದು, ಸಾಗಣೆ ಮಾಡುವುದು, ದಾಸ್ತಾನು ಮಾಡುವುದು ಅಥವಾ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ವ್ಯವಸ್ಥೆ ಎಚ್ಚರಿಕೆ ನೀಡಿದೆ.

Leave a Reply

Discover more from

Subscribe now to keep reading and get access to the full archive.

Continue reading