ಏಳು ವರ್ಷ ಶಾರ್ಜಾ ಉದ್ಯಾನವನದಲ್ಲೇ ಬದುಕಿದ್ದ ಅನಿವಾಸಿ ಮಲಯಾಳಿ ಮೃತ್ಯು; ಮನಕಲಕುವ ಬದುಕಿನ ಅಂತ್ಯ

ಶಾರ್ಜಾ: ಸುಮಾರು ಎರಡು ದಶಕಗಳ ಕಾಲ ಗಲ್ಫ್ ರಾಷ್ಟ್ರದಲ್ಲಿ ದುಡಿದಿದ್ದ ಅನಿವಾಸಿ ಮಲಯಾಳಿ ವ್ಯಕ್ತಿಯೊಬ್ಬರು, ಕಳೆದ ಏಳು ವರ್ಷಗಳಿಂದ ಶಾರ್ಜಾದ ಉದ್ಯಾನವನವನ್ನೇ ಆಶ್ರಯವಾಗಿಸಿಕೊಂಡು ಬದುಕುತ್ತಿದ್ದರು. ಆಗಸ್ಟ್ 3ರಂದು ಅದೇ ಉದ್ಯಾನವನದಲ್ಲಿ ನಿದ್ದೆಯಲ್ಲೇ ಮೃತಪಟ್ಟಿರುವ ಘಟನೆ ದುಃಖವನ್ನುಂಟು ಮಾಡಿದೆ.

ಮಾಹಿತಿಯ ಪ್ರಕಾರ, ಸುಮಾರು ಏಳು ವರ್ಷಗಳ ಹಿಂದೆ ಅವರು ಕೊನೆಯ ಬಾರಿಗೆ ತಮ್ಮ ಊರಿಗೆ ಭೇಟಿ ನೀಡಿ, ಬಳಿಕ ಮತ್ತೆ ಗಲ್ಫ್‌ಗೆ ಮರಳಿದ್ದರು. ಆ ನಂತರ ಅವರು ಊರಿನತ್ತ ಮುಖ ಮಾಡಿರಲಿಲ್ಲ.

ಇತ್ತೀಚೆಗೆ ಪತ್ರಕರ್ತರೊಬ್ಬರು ಅವರನ್ನು ಶಾರ್ಜಾದ ಉದ್ಯಾನವನದಲ್ಲಿ ಕಂಡು ಮಾತನಾಡಿಸಿದ್ದರು. ಊರಿಗೆ ಮರಳಿ ಕುಟುಂಬದವರೊಂದಿಗೆ ಜೀವನ ಸಾಗಿಸುವಂತೆ ಮನವೊಲಿಸಲು ಪ್ರಯತ್ನಿಸಿದ್ದರೂ, ಅವರು ಊರಿಗೆ ಹೋಗಲು ನಿರಾಕರಿಸಿದ್ದರು ಎಂದು ತಿಳಿದುಬಂದಿದೆ.

ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಅವರು ನಿಯಮಿತವಾಗಿ ಔಷಧಿ ಸೇವಿಸುತ್ತಿರಲಿಲ್ಲ ಎನ್ನಲಾಗಿದೆ. ಆರೋಗ್ಯ ಸಮಸ್ಯೆಗಳ ನಡುವೆಯೂ ಉದ್ಯಾನವನದಲ್ಲೇ ಜೀವನ ನಡೆಸುತ್ತಿದ್ದರು.

ಅವರಿಗೆ ಇಬ್ಬರು ಮಕ್ಕಳಿದ್ದು, ಇಬ್ಬರ ಮದುವೆಯೂ ನಡೆದಿದ್ದರೂ, ತಂದೆಯಾಗಿದ್ದ ಅವರು ಆ ಮದುವೆಗಳಲ್ಲಿ ಭಾಗವಹಿಸಲು ಊರಿಗೆ ತೆರಳಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಕುಟುಂಬದಿಂದ ದೂರವಾಗಿ, ಸಂಕಷ್ಟಗಳ ನಡುವೆ ಏಕಾಂಗಿಯಾಗಿ ಕಳೆದ ಅನಿವಾಸಿ ಬದುಕು ಕೊನೆಗೆ ಉದ್ಯಾನವನದಲ್ಲೇ ಅಂತ್ಯಗೊಂಡಿರುವುದು ಹಲವರ ಮನಸ್ಸನ್ನು ಮಿಡಿಯುವಂತಾಗಿದೆ. ಈ ಘಟನೆ ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಭಾರತೀಯರ ಜೀವನದ ಕಠಿಣ ವಾಸ್ತವವನ್ನು ಮತ್ತೊಮ್ಮೆ ನೆನಪಿಸುವಂತಾಗಿದೆ.

Leave a Reply

Discover more from

Subscribe now to keep reading and get access to the full archive.

Continue reading