ತನ್ನದೇ ಮದುವೆಗೆ ಸ್ವಂತ ತಾಯಿಯನ್ನು ಆಹ್ವಾನಿಸದ ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಿದ ಚೀನಾದ ಕಂಪನಿ ಮಾಲೀಕರೊಬ್ಬರು ಈ ನಿರ್ಧಾರಕ್ಕೆ ಕಾರಣವನ್ನು ಹಂಚಿಕೊಂಡಿದ್ದಾರೆ. ತಾಯಿ ಬಂದರೆ ತನಗೆ ಅವಮಾನವಾಗುತ್ತದೆ ಎಂದು ಭಾವಿಸಿದ್ದರಿಂದಲೇ ಆಕೆಯನ್ನು ಸಮಾರಂಭದಿಂದ ದೂರವಿರಿಸಲಾಗಿತ್ತು ಎಂದು ಆ ಉದ್ಯೋಗಿ ತಿಳಿಸಿದ್ದಾಗಿ ವರದಿಯಾಗಿದೆ.
ಹೆನಾನ್ ಮೈನಿಂಗ್ ಕ್ರೇನ್ ಕಂಪನಿ ಲಿಮಿಟೆಡ್‌ನ ಸಂಸ್ಥಾಪಕರಾದ ಕುಯಿ ಪೈಜುನ್ ತಮ್ಮ ಕಂಪನಿಯ ಉದ್ಯೋಗಿಯೊಬ್ಬನನ್ನು ವಜಾಗೊಳಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಚೀನಾದ ಮಾಧ್ಯಮಗಳು ಈ ಸುದ್ದಿಯನ್ನು ವರದಿ ಮಾಡಿವೆ. ಕುಯಿ ಪೈಜುನ್ ಅವರು ತಮ್ಮ ಕಂಪನಿಯ ಉದ್ಯೋಗಿಗಳ ಮಕ್ಕಳಿಗಾಗಿ ಆಯೋಜಿಸಿದ್ದ ಬೇಸಿಗೆಯ ಇಂಟರ್ನ್‌ಶಿಪ್ ಕಾರ್ಯಕ್ರಮದ ವೇಳೆ ಈ ಘಟನೆಯನ್ನು ಹಂಚಿಕೊಂಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಿನ್ ಝೌ ಡೈಲಿ ವರದಿಯ ಪ್ರಕಾರ, ಹೆನಾನ್ ಮೈನಿಂಗ್ ಕ್ರೇನ್ ಕಂಪನಿ ಲಿಮಿಟೆಡ್ ಉದ್ಯೋಗಿಗಳ ಮಕ್ಕಳಿಗಾಗಿ ಜುಲೈ 21 ರಂದು ವಿಶೇಷ ಬೇಸಿಗೆ ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಈ ಕಾರ್ಯಕ್ರಮಕ್ಕಾಗಿ ಕಂಪನಿಯು 331 ವಿದ್ಯಾರ್ಥಿಗಳನ್ನು ನೇಮಿಸಿಕೊಂಡಿತು. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕುಯಿ, ಪೋಷಕರನ್ನು ಗೌರವಿಸುವುದು ಮತ್ತು ನೋಡಿಕೊಳ್ಳುವುದು ಒಬ್ಬ ವ್ಯಕ್ತಿಯಲ್ಲಿರಬೇಕಾದ ಅತ್ಯಂತ ಪ್ರಮುಖ ಗುಣಗಳಲ್ಲಿ ಒಂದಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಉದ್ಯೋಗಿಯೊಬ್ಬರ ಮದುಡೆಯಲ್ಲಿ ಭಾಗವಹಿಸಿದ್ದನ್ನು ಕುಯಿ ನೆನಪಿಸಿಕೊಂಡರು. ಉದ್ಯೋಗಿಯ ತಾಯಿ ಮದುವೆ ಸಮಾರಂಭದಲ್ಲಿ ಭಾಗವಹಿಸುವ ಬದಲು ಕಾರ್ಖಾನೆಯ ಸಮೀಪದ ಸ್ಥಳವೊಂದರಲ್ಲಿ ಏಕಾಂಗಿಯಾಗಿ ಕುಳಿತಿರುವುದನ್ನು ಅವರು ಗಮನಿಸಿದರು. ತಾಯಿ ಮದುವೆಗೆ ಬಾರದಿರಲು ಕಾರಣವೇನು ಎಂದು ಅವರು ಆ ಉದ್ಯೋಗಿಯನ್ನು ಪ್ರಶ್ನಿಸಿದರು. ಅದಕ್ಕೆ ಆ ಉದ್ಯೋಗಿ, ‘ನನ್ನ ತಾಯಿಯ ಮುಖವು ಸುಂದರವಾಗಿಲ್ಲ ಮತ್ತು ಅವರು ನನ್ನನ್ನು ಅವಮಾನಕ್ಕೀಡು ಮಾಡುತ್ತಾರೆ ಎಂದು ನಾನು ಭಯಪಡುತ್ತೇನೆ’ ಎಂದು ಉತ್ತರಿಸಿದ್ದಾಗಿ ಅವರು ತಿಳಿಸಿದರು.
ನಂತರ ಆ ಉದ್ಯೋಗಿಯನ್ನು ತಾನು ಕೆಲಸದಿಂದ ವಜಾಗೊಳಿಸಿದೆ ಎಂದು ಕುಯಿ ಹೇಳಿದರು. ಉದ್ಯೋಗಿಯು ನಂತರ ತನ್ನನ್ನು ಮತ್ತೆ ಕೆಲಸಕ್ಕೆ ಮರುನೇಮಕ ಮಾಡಿಕೊಳ್ಳುವಂತೆ ಕೋರಿ ಕುಯಿ ಅವರ ಕಚೇರಿಗೆ ಬಂದಿದ್ದರೂ, ಕುಯಿ ತಮ್ಮ ನಿರ್ಧಾರವನ್ನು ಬದಲಿಸಲು ಸಿದ್ಧರಾಗಲಿಲ್ಲ ಎಂದು ವರದಿಗಳು ತಿಳಿಸಿವೆ.
ನಂತರ ಕಂಪನಿಯ ಲಾಜಿಸ್ಟಿಕ್ಸ್ ವಿಭಾಗದಲ್ಲಿ ಆ ಉದ್ಯೋಗಿಯ ತಾಯಿಗೆ ಕುಯಿ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ ಎಂದೂ ವರದಿಯಾಗಿದೆ.










