ದೆಹಲಿಯಲ್ಲಿ ಕಳೆದ 26 ದಿನಗಳಿಂದ ನಿರಾಹಾರ ಸಮರದಲ್ಲಿದ್ದ ಸೋನಮ್ ವಾಂಗ್ಚುಕ್ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ. ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಡಾ. ಜಿತೇಂದ್ರ ಸಿಂಗ್ ಹಾಗೂ ಲೆಹ್ ಲಡಾಖ್‌ನ ಅಪೆಕ್ಸ್ ಬಾಡಿಯ ಹಿರಿಯ ನಾಯಕರ ಸಮ್ಮುಖದಲ್ಲಿ ಅವರು ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ. ವಿವಿಧ ಷರತ್ತುಗಳ ಕುರಿತು ಕೇಂದ್ರ ಸರ್ಕಾರದೊಂದಿಗೆ ನಡೆದ ದೀರ್ಘ ಸಂಸದೀಯ ಹಾಗೂ ರಾಜಕೀಯ ಮಾತುಕತೆಗಳ ನಂತರ ಮತ್ತು ದೇಶದಲ್ಲಿ ಯಾವುದೇ ರೀತಿಯ ಹಿಂಸಾಚಾರ ನಡೆಯಬಾರದು ಎಂಬ ಮುನ್ನೆಚ್ಚರಿಕೆಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಾಂಗ್ಚುಕ್ ತಿಳಿಸಿದ್ದಾರೆ.ವಿವಿಧ ರಾಜಕೀಯ ಪಕ್ಷಗಳ ಸುಮಾರು 65 ಸಂಸದರು ವಾಂಗ್ಚುಕ್ ಅವರನ್ನು ಭೇಟಿ ಮಾಡಿ ಅಥವಾ ಪತ್ರದ ಮೂಲಕ ಉಪವಾಸ ಅಂತ್ಯಗೊಳಿಸುವಂತೆ ಮನವಿ ಮಾಡಿದ್ದರು. ಉಪವಾಸ ಹಿಂಪಡೆದ ನಂತರ ವಾಂಗ್ಚುಕ್ ಅವರು ಸಾಮಾಜಿಕ ಜಾಲತಾಣ ‘X’ ನಲ್ಲಿ ಹಂಚಿಕೊಂಡಿದ್ದು, ಸಾರ್ವಜನಿಕರು ಮತ್ತು ಬೆಂಬಲಿಗರು ಶಾಂತಿ ಕಾಪಾಡಿಕೊಳ್ಳಬೇಕು, ಯಾವುದೇ ಕಾರಣಕ್ಕೂ ಹಿಂಸಾಚಾರಕ್ಕೆ ಆಸ್ಪದ ನೀಡಬಾರದು ಎಂದು ವಿನಂತಿಸಿದ್ದಾರೆ.ಕೇಂದ್ರ ಸರ್ಕಾರದ ಭರವಸೆ ಹಾಗೂ ಮಾತುಕತೆಯ ನಂತರ ಅವರು ಸತ್ಯಾಗ್ರಹವನ್ನು ಮುಕ್ತಾಯಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಸಂಧಾನದ ಷರತ್ತುಗಳ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.







