ಭಯದ ನಿಶ್ಯಬ್ದತೆ ಆವರಿಸಿರುವಾಗ, ಅನ್ಯಾಯದ ವಿರುದ್ಧ ಎತ್ತಲ್ಪಡುವ ಪ್ರತಿಯೊಂದು ಏಕಾಂಗಿ ಧ್ವನಿಯೂ ಸಮಾಜದ ಜೀವಂತಿಕೆಗೆ ಅತ್ಯಂತ ಅಮೂಲ್ಯವಾದ ಸಂಕೇತ.ಇಂದಿನ ದೇಶದ ಸಾಮಾಜಿಕ ಮತ್ತು ರಾಜಕೀಯ ವಾತಾವರಣದಲ್ಲಿ ಬಾಲಿವುಡ್‌ನಂತಹ ದೊಡ್ಡ ಗ್ಲಾಮರ್ ಜಗತ್ತು ಮೌನಕ್ಕೆ ಶರಣಾಗಿದೆ. ತಮ್ಮ ಕೆರಿಯರ್, ಕೋಟಿಗಳ ಜಾಹೀರಾತು ಒಪ್ಪಂದಗಳು ಹಾಗೂ ವೃತ್ತಿಜೀವನದ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ಮುಳುಗಿರುವ ಬಹುತೇಕ ಸೆಲೆಬ್ರಿಟಿಗಳು, ದೇಶದಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ತುಟಿಬಿಚ್ಚಲು ಹೆದರುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರ ಮಗಳು, ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಎತ್ತಿರುವ ಧ್ವನಿ ಸಣ್ಣ ವಿಷಯವೇನಲ್ಲ.
ಮೂರು ದಿನಗಳ ಹಿಂದೆ, ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಬಂಧನಕ್ಕೂ ಮುನ್ನ ಅವರಿಗೆ ಬೆಂಬಲ ಸೂಚಿಸಿ ಸೋನಾಕ್ಷಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ಅವರ ವಿರುದ್ಧ ಸೈಬರ್ ದಾಳಿಗಳು, ವ್ಯಂಗ್ಯ ಹಾಗೂ ಕೆಟ್ಟ ನಿಂದನೆಗಳ ಸುರಿಮಳೆಯೇ ಆಯಿತು. “ಇಂತಹ ವಿಷಯಗಳ ವಿರುದ್ಧ ಧ್ವನಿ ಎತ್ತುವುದರಿಂದ ನನಗೆ ಎಂತಹ ಪರಿಣಾಮಗಳು ಎದುರಾಗಬಹುದು ಎಂಬುದು ಸ್ಪಷ್ಟವಾಗಿ ಗೊತ್ತಿದೆ, ಅದನ್ನು ತಿಳಿದುಕೊಂಡೇ ನಾನು ಮಾತನಾಡುತ್ತಿದ್ದೇನೆ” ಎಂದು ತಮ್ಮ ಮೊದಲ ವಿಡಿಯೋದಲ್ಲೇ ಅವರು ಹೇಳಿದ್ದ ಮಾತುಗಳು ಅವರ ಬದ್ಧತೆ ಮತ್ತು ಧೈರ್ಯಕ್ಕೆ ಹಿಡಿದ ಕನ್ನಡಿ.
ಇಷ್ಟೆಲ್ಲಾ ಟ್ರೋಲ್ ಮತ್ತು ದಾಳಿಗಳ ನಡುವೆಯೂ ಸೋನಾಕ್ಷಿ ಹಿಂಜರಿಯಲಿಲ್ಲ. ಈ ತಿಂಗಳ 20ರಂದು ಕರೆ ನೀಡಲಾಗಿರುವ ವಿದ್ಯಾರ್ಥಿಗಳ ‘ಸಂಸತ್ ಮಾರ್ಚ್’ಗೆ ಬೆಂಬಲ ಸೂಚಿಸಿ ನಿನ್ನೆ ಮತ್ತೊಂದು ವಿಡಿಯೋ ಪೋಸ್ಟ್ ಮಾಡುವ ಮೂಲಕ ಆಡಳಿತದ ತಪ್ಪು ನೀತಿಗಳ ವಿರುದ್ಧ ಹೋರಾಡುತ್ತಿರುವ ವಿದ್ಯಾರ್ಥಿಗಳ ಪರವಾಗಿ ನಿಂತಿದ್ದಾರೆ.
ಇನ್ನೊಂದೆಡೆ, ದೇಶದಲ್ಲಿ ಭಯದ ವಾತಾವರಣ ಎಷ್ಟು ಭೀಕರವಾಗಿದೆ ಎಂಬುದಕ್ಕೆ ನಟ ಆಮಿರ್ ಖಾನ್ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬಂದಿರುವ ಹೊಸ ಮರಣ ಬೆದರಿಕೆಯೇ ಸಾಕ್ಷಿ. ಹಳಸಲು ಆರೋಪಗಳನ್ನು ಹೊರಿಸಿ, ಕ್ರಿಮಿನಲ್ ಗುಂಪುಗಳು ಮುಕ್ತವಾಗಿ ಬೆದರಿಕೆ ಹಾಕುತ್ತಿರುವ ಇಂತಹ ವಿಷಪೂರಿತ ವಾತಾವರಣದಲ್ಲೂ ಒಬ್ಬ ಮಹಿಳೆಯಾಗಿ ಸೋನಾಕ್ಷಿ ಸಿನ್ಹಾ ಅವರು ವಿದ್ಯಾರ್ಥಿ ಚಳವಳಿಗೆ ಬೆಂಬಲವಾಗಿ ನಿಂತಿರುವುದು ಸಾಮಾನ್ಯ ಸಾಹಸವಲ್ಲ.
ಸ್ವ ಹಿತಾಸಕ್ತಿಗಾಗಿ ಮೌನವಾಗಿರುವುದೇ ಸುರಕ್ಷಿತ ಎಂಬ ಧೋರಣೆ ಹೆಚ್ಚಾಗಿರುವ ಈ ದಿನಗಳಲ್ಲಿ, ಬೆದರಿಕೆ ಮತ್ತು ನಿಂದನೆಗಳಿಗೆ ಅಂಜದೆ ಸತ್ಯದ ಪರವಾಗಿ ಮಾತನಾಡುವ ಪ್ರತಿಯೊಂದು ಧ್ವನಿಯೂ ನಮಗೆ ಪ್ರಜಾಪ್ರಭುತ್ವದ ಆಶಾದಾಯಕ ಆಸರೆಯಾಗಿ ಕಾಣಿಸುತ್ತದೆ. ಭೀತಿಯ ಮಸುಕಿನಲ್ಲಿ ದೇಶವೇ ಮೌನವಾಗಿ ನಿದ್ರಿಸುತ್ತಿರುವಾಗ, ಸೋನಾಕ್ಷಿ ಸಿನ್ಹಾ ಅವರಂತಹ ಏಕಾಂಗಿ ಧ್ವನಿಗಳು ಪ್ರಜಾಪ್ರಭುತ್ವದ ಜೀವಂತಿಕೆಯನ್ನು ನೆನಪಿಸುತ್ತವೆ.










