ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಧರ್ಮಪತ್ನಿ ಚನ್ನಮ್ಮ ನಿಧನ: ಎಂ ಬಿ ಸದಾಶಿವ ಸಂತಾಪ

ನಮ್ಮ ಹೆಮ್ಮೆಯ ಮಾಜಿ ಪ್ರಧಾನಿಗಳು, ಸದಾ ನಮಗೆ ಮಾರ್ಗದರ್ಶಕರೂ ಆದ ಸನ್ಮಾನ್ಯ ಶ್ರೀ ಎಚ್. ಡಿ. ದೇವೇಗೌಡರ ಧರ್ಮಪತ್ನಿ, ಮಾತೃಸ್ವರೂಪಿ ಶ್ರೀಮತಿ ಚನ್ನಮ್ಮನವರು ಇಹಲೋಕ ತ್ಯಜಿಸಿದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಕಳೆದ ನಾಲ್ಕು ದಶಕಗಳಿಂದ ಅವರ ಅಕ್ಕರೆ, ಆದರ ಹಾಗೂ ಅಪಾರ ಪ್ರೀತಿಯ ನೆರಳಿನಲ್ಲಿ ಬೆಳೆದ ನನ್ನ ಹಾಗೂ ನನ್ನ ಕುಟುಂಬಕ್ಕೆ ಈ ಅಗಲಿಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ನಮ್ಮ ಇಡೀ ಕುಟುಂಬ ಇಂದು ತೀವ್ರ ದುಃಖದಲ್ಲಿ ಮುಳುಗಿದೆ.
ದೇವೇಗೌಡರು ರಾಜಕೀಯವಾಗಿ ದೇಶದ ಉತ್ತುಂಗ ಶಿಖರವನ್ನು ಏರುವಲ್ಲಿ, ಅವರ ಹೋರಾಟದ ಹಾದಿಗೆ ಶಕ್ತಿಯಾಗಿ ನಿಂತವರು ಅಮ್ಮ ಚನ್ನಮ್ಮನವರು. ಅವರ ಅಪಾರ ಸಹನೆ, ಸಹಕಾರ ಮತ್ತು ನಿಸ್ವಾರ್ಥ ಸೇವಾ ಮನೋಭಾವವೇ ಗೌಡರ ಯಶಸ್ಸಿನ ಹಿಂದಿನ ಮಹಾಶಕ್ತಿಯಾಗಿದ್ದರು.
ಅವರ ಮನೆಗೆ ಹೋದಾಗಲೆಲ್ಲ ಸಿಗುತ್ತಿದ್ದ ಆ ಪ್ರೀತಿಯ ಆತಿಥ್ಯವನ್ನು ಮರೆಯಲು ಸಾಧ್ಯವೇ ಇಲ್ಲ. ಹಸಿದು ಬಂದವರಿಗೆ ತಾಯಿಯಂತೆ ಉಪಹಾರ, ಉಪಚಾರ ನೀಡಿ ಸತ್ಕರಿಸುತ್ತಿದ್ದರು. ಊಟ ಮಾಡದೆ ಹೋಗಬೇಡ”ಎಂದು ಅವರು ಪ್ರೀತಿಯಿಂದ ಒತ್ತಾಯಿಸುತ್ತಿದ್ದ ಆ ಕಳಕಳಿಯ ನುಡಿಗಳು ಇಂದಿಗೂ ನನ್ನ ಕಿವಿಯಲ್ಲಿ ಅನುರಣಿಸುತ್ತಿವೆಅವರ ಆತಿಥ್ಯದಲ್ಲಿದ್ದದ್ದು ಬರೀ ಔಪಚಾರಿಕತೆಯಲ್ಲ, ಬದಲಿಗೆ ಪರಿಶುದ್ಧವಾದ ತಾಯಿಯ ಮಮತೆ.
ಅವರು ಅಪಾರ ದೈವಭಕ್ತರಾಗಿದ್ದರು. ಇತ್ತೀಚೆಗಷ್ಟೇ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡುವ ತಮ್ಮ ಆಸೆಯನ್ನು ನನ್ನ ಬಳಿ ಹಂಚಿಕೊಂಡಿದ್ದರು. ಅವರು ಕಳಕಳಿಯಿಂದ ಹೇಳಿದ ಮಾತುಗಳು ನನ್ನ ಹೃದಯದಲ್ಲಿ ಸದಾ ಹಸಿರಾಗಿರುತ್ತವೆ.
ಅವರಲ್ಲಿದ್ದ ನೆನಪಿನ ಶಕ್ತಿ ನಿಜಕ್ಕೂ ವಿಸ್ಮಯಕಾರಿಯಾಗಿತ್ತು. ದೇವಸ್ಥಾನದಲ್ಲಿ ಸಂಕಲ್ಪ ಮಾಡುವಾಗ ಯಾವುದೇ ಚೀಟಿ ಅಥವಾ ಟಿಪ್ಪಣಿಯನ್ನು ನೋಡದೆ, ಪೂಜ್ಯ ದೇವೇಗೌಡರಿಂದ ಹಿಡಿದು, ತಮ್ಮ ಎಲ್ಲ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಮರಿಮಕ್ಕಳ ಹೆಸರು ಮತ್ತು ನಕ್ಷತ್ರಗಳನ್ನು ಕಂಠಪಾಠವಾಗಿ ಪಟಪಟನೆ ಹೇಳುತ್ತಿದ್ದ ಆ ದೃಶ್ಯ ಅವರ ಕೌಟುಂಬಿಕ ಪ್ರೀತಿ ಮತ್ತು ಜಾಗೃತಿಗೆ ಸಾಕ್ಷಿಯಾಗಿತ್ತು
ಈ ಮಹಾನ್ ತಾಯಿಯ ಅಗಲಿಕೆಯಿಂದ ಪೂಜ್ಯ ದೇವೇಗೌಡರು ಮಾನಸಿಕವಾಗಿ ಕುಗ್ಗದಂತೆ ಆ ಭಗವಂತನು ಅವರಿಗೆ ಧೈರ್ಯವನ್ನು ನೀಡಲಿ. ಕರ್ನಾಟಕದ ನೆಲ, ಜಲ, ಭಾಷೆಯ ರಕ್ಷಣೆಯಲ್ಲಿ ಮತ್ತು ರೈತರ ಏಳಿಗೆಗಾಗಿ ಅವರು ಮುನ್ನಡೆಯಲು ದೇವರು ಅವರಿಗೆ ಇನ್ನಷ್ಟು ಆಯುರಾರೋಗ್ಯ, ಶಕ್ತಿಯನ್ನು ಕರುಣಿಸಲಿ.
ಮಾತೃಸ್ವರೂಪಿ ಶ್ರೀಮತಿ ಚನ್ನಮ್ಮನವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ನನ್ನ ಹಾಗೂ ನನ್ನ ಕುಟುಂಬದ ಪರವಾಗಿ ಭಗವಂತನಲ್ಲಿ ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸುವ ಮೂಲಕ ರಾಜ್ಯ ಜನತಾದಳದ ಮುಖಂಡ ಎಂ ಬಿ ಸದಾಶಿವ ಸಂತಾಪ ವ್ಯಕ್ತಪಡಿಸಿದ್ದಾರೆ

Leave a Reply

Discover more from

Subscribe now to keep reading and get access to the full archive.

Continue reading