ಬೆಚ್ಚಿಬೀಳಿಸುವ ಜೋಡಿ ಕೊಲೆ: ಪ್ರಿಯಕರನ ಜೊತೆ ಸೇರಿ ಗಂಡ, ಮಗನನ್ನೇ ಹತ್ಯೆ ಮಾಡಿದ ಪಾಪಿ ಪತ್ನಿ!

ಬೆಂಗಳೂರು: ರಾಜಧಾನಿಯ ಚಿಕ್ಕಬಾಣಾವರದಲ್ಲಿ ನಡೆದಿದ್ದ ಗಂಡ ಹಾಗೂ ಪುಟ್ಟ ಮಗುವಿನ ರಹಸ್ಯ ಕೊಲೆ ಪ್ರಕರಣದ ಬೆಚ್ಚಿಬೀಳಿಸುವ ಸತ್ಯವನ್ನು ಪೊಲೀಸರು ಭೇದಿಸಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆಂಬ ಕಾರಣಕ್ಕೆ ಹೆಂಡತಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಸ್ವಂತ ಗಂಡ ಹಾಗೂ ಕಣ್ಣೆದುರೇ ಘಟನೆಯನ್ನು ಕಂಡ ಕಂದಮ್ಮನನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಅಭಿನಂದನ್ ಅವರ ಪತ್ನಿ ಹರಿಣಿಯನ್ನು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಪ್ರಿಯಕರ ವಿನಯ್‌ಗಾಗಿ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.

ಘಟನೆ ನಡೆದ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಹರಿಣಿ ತನ್ನ ಪ್ರಿಯಕರ ವಿನಯ್‌ನನ್ನು ಮನೆಗೆ ಕರೆಸಿಕೊಂಡಿದ್ದಳು. ಕೃತ್ಯಕ್ಕೆ ಯಾವುದೇ ಸಾಕ್ಷ್ಯ ಸಿಗದಂತೆ ತಡೆಯಲು ಮೊದಲೇ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿದ್ದಳು. ವಿನಯ್ ಬಂದ ನಂತರ ಇಬ್ಬರೂ ಸೇರಿ ಗಾಢ ನಿದ್ರೆಯಲ್ಲಿದ್ದ ಅಭಿನಂದನ್ ಅವರ ಮೇಲೆ ದಾಳಿ ನಡೆಸಿದ್ದಾರೆ. ಮನೆಯಲ್ಲಿದ್ದ ಲೋಹದ ಸೌಟಿನಿಂದ ಅಭಿನಂದನ್ ಅವರ ತಲೆಗೆ ಬಲವಾಗಿ ಹಲ್ಲೆ ನಡೆಸಿ ನಿರ್ದಯವಾಗಿ ಕೊಲೆ ಮಾಡಿದ್ದಾರೆ.

ಗಂಡನ ಕೊಲೆಯಾಗುತ್ತಿರುವ ಭೀಕರ ದೃಶ್ಯವನ್ನು ದಂಪತಿಯ ಪುಟ್ಟ ಮಗ ಯದುವೀರ್ ಕಣ್ಣಾರೆ ಕಂಡಿದ್ದಾನೆ. ಮಗ ಮುಂದೆ ಪೊಲೀಸರಿಗೆ ಅಥವಾ ಸಂಬಂಧಿಕರಿಗೆ ವಿಚಾರ ತಿಳಿಸಿ ತಮಗೆ ತೊಂದರೆಯಾಗಬಹುದು ಎಂಬ ಭೀತಿಯಿಂದ, ಹರಿಣಿ ಹಾಗೂ ವಿನಯ್ ಸೇರಿ ಮಗುವಿನ ಉಸಿರುಗಟ್ಟಿಸಿ ಕೊಲೆಗೈದಿದ್ದಾರೆ.

ಕೊಲೆಯ ಬಳಿಕ ಪೊಲೀಸರ ಕಣ್ಣಿಗೆ ಮಣ್ಣೆರಚಲು ಹರಿಣಿ ಸುಳ್ಳು ಕಥೆಯೊಂದನ್ನು ಸೃಷ್ಟಿಸಿದ್ದಳು. ಗಂಡ ನಿದ್ರೆಯಲ್ಲಿ ಮಗುವಿನ ಮೇಲೆ ಬಿದ್ದು, ಉಸಿರುಗಟ್ಟಿ ಮಗು ಮೃತಪಟ್ಟಿದೆ ಹಾಗೂ ಗಂಡನಿಗೆ ನೈಸರ್ಗಿಕವಾಗಿ ಪೆಟ್ಟಾಗಿದೆ ಎಂಬಂತೆ ಬಿಂಬಿಸಲು ಅಭಿನಂದನ್ ಅವರ ಮೃತದೇಹವನ್ನು ಮಗುವಿನ ಮೇಲೆಯೇ ಮಲಗಿಸಿ ನಾಟಕವಾಡಲು ಯತ್ನಿಸಿದ್ದಳು.

ಕೃತ್ಯ ಮುಗಿಸಿದ ನಂತರ ಪ್ರಿಯಕರ ವಿನಯ್ ಸ್ಥಳದಿಂದ ಪರಾರಿಯಾಗಿದ್ದ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಚಿಕ್ಕಬಾಣಾವರ ಪೊಲೀಸರು ಪರಿಶೀಲನೆ ನಡೆಸಿದಾಗ, ಅಭಿನಂದನ್ ತಲೆಯಲ್ಲಿದ್ದ ಆಳವಾದ ಗಾಯದ ಗುರುತುಗಳು ಅನುಮಾನ ಮೂಡಿಸಿದ್ದವು. ಜೊತೆಗೆ ಮನೆಯ ಸಿಸಿಟಿವಿ ಕ್ಯಾಮೆರಾಗಳು ಇದ್ದಕ್ಕಿದ್ದಂತೆ ಆಫ್ ಆಗಿರುವುದು ಪೊಲೀಸರ ಶಂಕೆಯನ್ನು ಮತ್ತಷ್ಟು ಹೆಚ್ಚಿಸಿತು.

ಹರಿಣಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ, ಆಕೆ ಪೊಲೀಸರ ಚಾಣಾಕ್ಷ ಪ್ರಶ್ನೆಗಳಿಗೆ ತಡಬಡಾಯಿಸಿ ಅಸಲಿ ಸತ್ಯವನ್ನು ಬಾಯ್ಬಿಟ್ಟಿದ್ದಾಳೆ. ಚಿಕ್ಕಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ನಿ ಹರಿಣಿಯನ್ನು ಈಗಾಗಲೇ ಬಂಧಿಸಲಾಗಿದೆ. ಕೃತ್ಯ ಎಸಗಿ ತಲೆಮರೆಸಿಕೊಂಡಿರುವ ಪ್ರಿಯಕರ ವಿನಯ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading