ಸುಧಾಕರ ರೈ ಯವರಿಗೆ ‘ಸಜ್ಜನ ಶ್ರೇಷ್ಠ ರಕ್ತದಾನಿ’ ಪ್ರಶಸ್ತಿ ಪ್ರದಾನ; ಉಚಿತ ತರಬೇತಿ ಕಾರ್ಯಾಗಾರ ಹಾಗೂ ಗಣ್ಯರಿಗೆ ಸನ್ಮಾನ

ಬೆಂಗಳೂರು: ಡಾ. ಉಮ್ಮರ್ ಬೀಜದಕಟ್ಟೆ ನೇತೃತ್ವದ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ವಿವಿಧ ಕಂಪನಿಗಳ ಉದ್ಯೋಗಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕ ಸಂಹಿತೆಗಳು, ಪ್ರಮುಖ ನಿಬಂಧನೆಗಳು, ಉದ್ಯೋಗದಾತರ ಅನುಸರಣೆ ಮತ್ತು ದಾಖಲಾತಿ ಅವಶ್ಯಕತೆಗಳ ಕುರಿತ ಉಚಿತ ತರಬೇತಿ ಕಾರ್ಯಕ್ರಮವು ಜುಲೈ 11 ರಂದು ಬೆಂಗಳೂರಿನ ವೈಟ್ ಫೀಲ್ಡ್ ಏರಿಯಾ ವಾಣಿಜ್ಯ ಮತ್ತು ಕೈಗಾರಿಕಾ ಅಸೋಸಿಯೇಷನ್ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಈ ವಿಶೇಷ ಸಂದರ್ಭದಲ್ಲಿ ಸುಳ್ಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಯೂ, ಬರೋಬ್ಬರಿ 168 ಬಾರಿ ರಕ್ತದಾನ ಮಾಡಿ ದಾಖಲೆ ನಿರ್ಮಿಸಿರುವ ಖ್ಯಾತ ಉದ್ಯಮಿ ಪಿ. ಬಿ. ಸುಧಾಕರ ರೈ ಅವರಿಗೆ ‘ಸಜ್ಜನ ಶ್ರೇಷ್ಠ ರಕ್ತದಾನಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಸಹಾಯಕ ಕಾರ್ಮಿಕ ಇಲಾಖೆ ಕಮಿಷನರ್ ಗುರುದಾಸ್ ಎಂ. ಭಟ್, “ಮನುಷ್ಯ ಸಮಾಜಮುಖಿಯಾಗಿ ಬೆಳೆಯಲು ಮಾನವ ಸಂಪನ್ಮೂಲ ತರಬೇತಿ ಅತ್ಯಗತ್ಯ. ಯಾವುದೇ ಒಬ್ಬ ವ್ಯಕ್ತಿ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಬೇಕಾದರೆ ತಾನು ಬಂದ ದಾರಿ ಮತ್ತು ತನಗೆ ಸಹಾಯ ಮಾಡಿದ ಕೊಟ್ಟ ಕೈಯನ್ನು ಎಂದಿಗೂ ಮರೆಯಬಾರದು. ಅಂತಹ ವ್ಯಕ್ತಿಗಳು ಮಾತ್ರ ಮುಂದೆ ಯಶಸ್ವಿ ಸಾಮಾಜಿಕ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ,” ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಸಜ್ಜನ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆ ಮಾತನಾಡಿ, “ಸಜ್ಜನ ಪ್ರತಿಷ್ಠಾನವು ಸಾಮಾಜಿಕ ಕೆಲಸಗಳೊಂದಿಗೆ ರಕ್ತದಾನಿಗಳನ್ನು ಗುರುತಿಸುವ ಸತ್ಕಾರ್ಯಕ್ಕೆ ಮುಂದಾಗಿದೆ. ಮುಂಬರುವ ವರ್ಷಗಳಲ್ಲೂ ಇಂತಹ ಪ್ರಶಸ್ತಿ ನೀಡಲು ಈ ಕಾರ್ಯಕ್ರಮ ಪ್ರೇರಣೆಯಾಗಿದೆ. 168 ಬಾರಿ ರಕ್ತದಾನ ಮಾಡಿ ಸಮಾಜಕ್ಕೆ ಮಾದರಿಯಾಗಿರುವ ಸುಳ್ಯದ ಉದ್ಯಮಿ ಪಿ. ಬಿ. ಸುಧಾಕರ ರೈ ಅವರಿಗೆ ಈ ಪ್ರಶಸ್ತಿ ನೀಡುವ ಮೂಲಕ ಹೊಸ ಚಾಲನೆ ನೀಡಿದ್ದೇವೆ. ಮುಂದಿನ ವರ್ಷಗಳಲ್ಲಿ ಅವರ ಮಾರ್ಗದರ್ಶನದಲ್ಲೇ ಮತ್ತಷ್ಟು ರಕ್ತದಾನಿಗಳನ್ನು ಗುರುತಿಸುವ ಕೆಲಸ ಮಾಡಲಿದ್ದೇವೆ,” ಎಂದರು.ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಜವಾಬ್ದಾರಿ ನಿರ್ವಹಿಸಿದ ಅನುಭವಿ ಅಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಶ್ರೀ ಇಬ್ರಾಹಿಂ ಗೂನಡ್ಕ ಮತ್ತು ನಿವೃತ್ತ ಸಹಾಯಕ ಕಾರ್ಮಿಕ ಇಲಾಖೆ ಕಮಿಷನರ್ ಶ್ರೀ ಗುರುದಾಸ್ ಎಂ. ಭಟ್ ಈ ಇಬ್ಬರು ಮಹಾನ್ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.

ಇಬ್ರಾಹಿಂ ಗೂನಡ್ಕ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಸಾಸ್ ಸಮೂಹ ಸಂಸ್ಥೆಗಳ ಮಾನವ ಸಂಪನ್ಮೂಲ ನಿರ್ದೇಶಕರು ಹಾಗೂ ಬಿಸಿನೆಸ್ ಹೆಡ್ ಆಗಿರುವ ರಾಜಶೇಖರ ರೈ ಅವರು ಶ್ರೇಷ್ಠ ರಕ್ತದಾನಿ ಪ್ರಶಸ್ತಿ ಪುರಸ್ಕೃತ ಸುಧಾಕರ ರೈ ಅವರೊಂದಿಗಿನ ಒಡನಾಟವನ್ನು ಸ್ಮರಿಸಿ, ಅಭಿನಂದನಾ ಭಾಷಣ ಮಾಡಿದಖ್ಯಾತ ನ್ಯಾಯವಾದಿ ಹಾಗೂ ಸಜ್ಜನ ಕನ್ನಡ ನಾಡು-ನುಡಿ ವಿಭಾಗದ ರಾಜ್ಯ ಸಂಚಾಲಕರಾದ ಅಡ್ವೊಕೇಟ್ ಮಂಜುನಾಥ್ ಬಿ. ಹಾಗೂ ಕಾರ್ಮಿಕ ನಿಬಂಧನೆಗಳ ಮಾಹಿತಿತಜ್ಞ ಶೇಖರ್ ಗಣಗಲೂರು ಅವರು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಉದ್ಯೋಗಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು. ವಿವಿಧ ಕಂಪನಿಗಳಿಂದ ಆಗಮಿಸಿದ್ದ 65ಕ್ಕೂ ಹೆಚ್ಚು ಉದ್ಯೋಗಿಗಳು ಇದರ ಸದುಪಯೋಗ ಪಡಿಸಿಕೊಂಡರು.

ಮುಖ್ಯ ಅತಿಥಿಗಳಾಗಿ ಬೆಂಗಳೂರು ಮಯೂರ್ ಸಿಲ್ಕ್ಸ್ ಆಡಳಿತ ನಿರ್ದೇಶಕ ನೌಶಾದ್ ಎಡವಲತ್ತ್, ಇನೋವಿ ಮೊಬಿಲಿಟಿ ಸಲ್ಯುಶನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಹೆಚ್.ಆರ್ ಹೆಡ್ ವಾಸು ಎಂ, ಲಗುನ ಕ್ಲೋತಿಂಗ್ ಕಂಪನಿಯ ಹೆಚ್.ಆರ್ ಮುಖ್ಯಸ್ಥ ಸದಾಶಿವ, ಬೀಜದಕಟ್ಟೆ ಕಲ್ಚರಲ್ ಫೌಂಡೇಶನ್ ಅಧ್ಯಕ್ಷ ನಟರಾಜು ಬಿ, ಸಜ್ಜನ ಪ್ರತಿಷ್ಠಾನ ನಿರ್ದೇಶಕರಾದ ರಹೀಂ ಬೀಜದಕಟ್ಟೆ, ಫಾರ್ಮ್ಯಾಡ್ ಲಿಮಿಟೆಡ್ ಕಂಪನಿಯ ಸಹಾಯಕ ಉಪಾಧ್ಯಕ್ಷರಾದ ಆರಿಸ್ ಪಿ. ಎಂ ಮತ್ತು ಹೆರಿಟೇಜ್ ಗ್ರೂಪ್ ನ ರಹೀಂ ಕೊಪ್ಪದಕಜೆ ಉಪಸ್ಥಿತರಿದ್ದರು.ಶೇಖರ್ ಗಣಗಲೂರು ಅವರು ಅರ್ಥಗರ್ಭಿತ ಕನ್ನಡ ಪದಪುಂಜಗಳೊಂದಿಗೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ಶರೀಫ್ ಜೆಟ್ಟಿಪಳ್ಳ ಸ್ವಾಗತಿಸಿ, ಪ್ರತಿಷ್ಠಾನದ ಸದಸ್ಯ ಶಂಶಾಕ್ ವಂದಿಸಿದರು. ಸಜ್ಜನ ಪ್ರತಿಷ್ಠಾನದ ನಿರ್ದೇಶಕರುಗಳಾದ ಶರೀಫ್ ಜಟ್ಟಿಪಳ್ಳ, ಮಂಜುನಾಥ್ ಹಿರಿಯೂರ್ ಮತ್ತು ಮೊಹಮ್ಮದ್ ಮಾಝಿನ್ ಕಾರ್ಯಕ್ರಮದ ಯಶಸ್ವಿ ಸಂಯೋಜನೆ ಮಾಡಿದರು.

Leave a Reply

Discover more from

Subscribe now to keep reading and get access to the full archive.

Continue reading