ಸುಳ್ಯದ ನಿದ್ದೆ ಕೆಡಿಸಿದ್ದ ನಾಪತ್ತೆ ಪ್ರಕರಣ: ತಾಯಿಯ ನೋವು ಅರಿತು  ‘ಸಾಕಾರ’ದ ಜತೆ ನಿಂತವರಿಗೆ ಧನ್ಯವಾದ


ಅಂದು ಸುಳ್ಯದಲ್ಲಿ ಹಬ್ಬದ ವಾತಾವರಣ. ಮತ್ತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಾಯಕನಿಗೆ ಅದ್ಧೂರಿ ಸನ್ಮಾನ ಕಾರ್ಯಕ್ರಮ. ಇಡೀ ಊರೇ ಅಲ್ಲಿ ನೆರೆದಿತ್ತು. ‘ಜನಮರುಳೋ ಜಾತ್ರೆ ಮರುಳೋ’ ಎನ್ನುವಂತೆ ಜನಸ್ತೋಮ ಅಲ್ಲಿ ಸೇರಿತ್ತು. ಇಂತಹ ಸಡಗರದ ಸಂದಣಿಯ ನಡುವೆ ಪತ್ರಕರ್ತ ಎಂಬ ನೆಲೆಯಲ್ಲಿ ಮತ್ತು ನಮ್ಮ‌ಊರಿನದೂ ಒಂದು ಸಂಸ್ಥೆಯ  ಸನ್ಮಾನ ಮಾಡುವುದು ಇದ್ದ ಕಾರಣ ಅಲ್ಲಿ  ನಿಂತಿದ್ದೆ.ಅಲ್ಲಿನ ಭಾಷಣದ ಅಬ್ಬರದ ನಡುವೆಯೇ ನನ್ನ ಮೊಬೈಲ್ ರಿಂಗಣಿಸಿತು. ಅದೊಂದು ಅಪರೂಪದ ಕರೆ, ಆದರೆ ಅದರಲ್ಲಿ ತುಂಬಿದ್ದ ಆತಂಕ ಮಾತ್ರ ಪರಿಚಿತವಾಗಿತ್ತು.
ಕರೆಯ ಆ ಕಡೆಯಿಂದ ಕೇಳಿಸಿದ್ದು ಒಂದೇ ವಿನಂತಿ: “ಸಚಿವರಿಗೆ ಹೇಳಿ ನಮ್ಮ ಊರಿನ ಆ ಕಾಣೆಯಾದ ಹುಡುಗನನ್ನು ಹುಡುಕಿ ಕೊಡಲು ಸಾಧ್ಯವೇ?” ಎಂದು.

ಸುಳ್ಯದ ಸಂಭ್ರಮಕ್ಕೂ ಬೆಂಗಳೂರಿನಲ್ಲಿ ಕಾಣೆಯಾದ ಹುಡುಗನಿಗೂ ಏನು ಸಂಬಂಧ ಎಂದು ನಾನು ಆಶ್ಚರ್ಯಪಟ್ಟೆ. ಅಲ್ಲಿನ ಶಾಸಕರ ಮೂಲಕ ಸಚಿವರು ಒತ್ತಡ ಹೇರಿದರೆ ಹುಡುಗ ಬೇಗ ಸಿಗಬಹುದು ಎಂಬುದು ಅವರ ನಂಬಿಕೆಯಾಗಿತ್ತು. ಪೋಲೀಸ್ ಕೇಸ್ ಮಾಡದೆ ಬೇರೆ ದಾರಿ ಇಲ್ಲವೇ ಎಂಬ ಮರುಪ್ರಶ್ನೆಯೂ ಎದುರಾಯಿತು. ಏಕೆಂದರೆ, ಗ್ರಾಮೀಣ ಭಾಗದ ಜನರಿಗೆ ಇಂದಿಗೂ ಕೋರ್ಟು, ಕಚೇರಿ, ಪೋಲೀಸ್ ಎಂದರೆ ಒಂದು ರೀತಿಯ ಭಯ. ಕೇಸ್ ದಾಖಲಿಸಿದರೆ ಹುಡುಗನ ಹೆತ್ತವರು ಠಾಣೆಯ ಮೆಟ್ಟಿಲು ಅಲೆಯಬೇಕಾಗಬಹುದು ಎಂಬ ಆತಂಕ ಅವರದಾಗಿತ್ತು.

ಊರಿಗೆ ಬರುತ್ತೇನೆಂದು ಕೆಲಸದ ಜಾಗದಿಂದ ಹೊರಟ ಹುಡುಗ ನಾಪತ್ತೆಯಾಗಿ ಆಗಲೇ ಆರು ದಿನ ಕಳೆದಿತ್ತು. ಮೊಬೈಲ್ ಸಂಪೂರ್ಣ ಸ್ವಿಚ್ ಆಫ್ ಆಗಿತ್ತು.

ಆದರೆ, ಕೇವಲ ಪ್ರಭಾವಿ ವ್ಯಕ್ತಿಗಳ ಭರವಸೆಗಳ ಮಾತಿನಿಂದ ಇಂತಹ ವ್ಯವಸ್ಥೆಗಳು ಚಲಿಸುವುದಿಲ್ಲ ಎಂಬ ವಾಸ್ತವ ನನಗೆ ತಿಳಿದಿತ್ತು. ಮೊದಲು ಕಾನೂನುಬದ್ಧವಾಗಿ ದೂರು ದಾಖಲಿಸಿ, ನಂತರ ಪತ್ರಿಕೆಗಳಲ್ಲಿ ಸುದ್ದಿ ಮಾಡಿದರೆ ಮಾತ್ರ ಏನಾದರೂ ದಾರಿ ಕಾಣಬಹುದು ಎಂದು ನಿರ್ಧರಿಸಿ ತಕ್ಷಣ ಪೋಲೀಸ್ ಠಾಣೆಗೆ ಕರೆ ಮಾಡಿದೆ. ಅಲ್ಲಿ ವಿಚಾರಿಸಿದಾಗ ಮತ್ತೊಂದು ಧರ್ಮಸಂಕಟದ ಕಥೆ ಎದುರಾಯಿತು. ಆ ಮಗನ ತಾಯಿ ಕಳೆದ ಎರಡು ದಿನಗಳಿಂದ ಠಾಣೆಗೆ ಬಂದು ಮಗನನ್ನು ಹುಡುಕಿ ಕೊಡಿ ಎಂದು ಕಣ್ಣೀರು ಹಾಕುತ್ತಿದ್ದರಂತೆ. ಆದರೆ ಯಾರೋ ಕೊಟ್ಟ ತಪ್ಪು ಸಲಹೆಯಿಂದಾಗಿ, ಕೇಸ್ ದಾಖಲಿಸಲು ಒಪ್ಪುತ್ತಿರಲಿಲ್ಲ. ದೂರಿಲ್ಲದೆ ತನಿಖೆ ನಡೆಸಲು ಕಾನೂನಿನಲ್ಲಿ ಅವಕಾಶವಿರಲಿಲ್ಲ. ಪೋಲೀಸರು ನನ್ನನ್ನು ಒಮ್ಮೆ ಠಾಣೆಗೆ ಬರುವಂತೆ ಕೋರಿದರು.

ನಾನು ಠಾಣೆಗೆ ಹೊರಟಾಗ ಆ ತಾಯಿಯನ್ನು ಒಪ್ಪಿಸಿ ಪೊಲೀಸರು ದೂರು ತೆಗೆದುಕೊಂಡರು  ಮತ್ತು ಪೋಲೀಸರು ಮತ್ತೆ ನನಗೆ ಕರೆ ಮಾಡಿ ನೀವು ನಿಮ್ಮ‌ ಪ್ರಯತ್ನ ಮುಂದುವರೆಸಿ ನಾವು ನಮ್ಮ‌ಕೆಲಸ ಮಾಡುತ್ತೇವೆ ಎಂದರು. ಹಾಗೇ ಠಾಣೆಯ ಕಡೆ ಹೋದೆ. ನನ್ನನ್ನು ನೋಡುತ್ತಿದ್ದಂತೆ ಆ ತಾಯಿಯ ಕಣ್ಣುಗಳಲ್ಲಿ ಒಂದು ಸಣ್ಣ ಆಶಾಕಿರಣ ಮೂಡಿತು. “ಸಚಿವರು ಸುಳ್ಯದಿಂದ ಹೊರಟುಹೋದರೇ? ಅವರನ್ನೊಮ್ಮೆ ಭೇಟಿಯಾಗಿ ನನ್ನ ಮಗನನ್ನು ಹುಡುಕಿಸಿಕೊಡಲು ಹೇಳಿ” ಎಂದು ಗದ್ಗದಿತ ಕಂಠದಿಂದ ಕೇಳಿದರು. ಮೊದಲು ಕೇಸ್ Process ಮುಗಿಯಲಿ. ಆಮೇಲೆ ಸಚಿವರನ್ನು ನೋಡೋಣ ಎಂದು ಅವರಿಗೆ ಧೈರ್ಯ ತುಂಬಿದೆ.

ಆದರೆ ಅಂದಿನ ಆಟ ಬೇರೆಯೇ ಆಗಿತ್ತು. ಸಚಿವರ ಸನ್ಮಾನದ ಬಂದೋಬಸ್ತ್ ನಿಮಿತ್ತ ಠಾಣಾಧಿಕಾರಿ ಸೇರಿದಂತೆ ಪ್ರಮುಖ ಸಿಬ್ಬಂದಿ ಸ್ಥಳದಲ್ಲಿ ಇರಲಿಲ್ಲ. ಹಾಗಾಗಿ ದೂರು ದಾಖಲಾಗುವುದು ತಡವಾಯಿತು. ಆ ತಾಯಿ ಕೈಯಲ್ಲೊಂದು ಎಫ್‌ಐಆರ್ ಪ್ರತಿಯನ್ನು ಹಿಡಿದು ಠಾಣೆಯಿಂದ ಹೊರಬರುವಷ್ಟರಲ್ಲಿ ಸಚಿವರು ಸುಳ್ಯದ ಗಡಿ ದಾಟಿಯಾಗಿತ್ತು. ಒಂದು ವೇಳೆ ಅವರು ಸಿಕ್ಕಿದ್ದರೂ, ಅಂದು ತಮ್ಮ ಬೇಡಿಕೆಗಳ ಮಹಾಪೂರ ಹೊತ್ತು ತಂದಿದ್ದ ನೂರಾರು ಜನರ ನಡುವೆ ಈ ಬಡ ತಾಯಿಯ ಆಕ್ರಂದನ ಎಷ್ಟು ಪರಿಣಾಮ ಬೀರಬಲ್ಲದು ಎಂಬ ಸಂಶಯ ನನಗಿತ್ತು. ಹಾಗಾಗಿ ಸಚಿವರು ಸಿಗಲಿಲ್ಲ ಎಂಬ ಆ ತಾಯಿಯ ನಿರಾಸೆ ನನ್ನನ್ನು ಅಷ್ಟಾಗಿ ಕಾಡಲಿಲ್ಲ. ನಮ್ಮ ಕೈಲಿದ್ದ ಅಸ್ತ್ರವೇ ಬೇರೆಯಾಗಿತ್ತು.

ತಕ್ಷಣ ಆ ತಾಯಿಯ ಕೈಯಿಂದ ಎಫ್‌ಐಆರ್ ಪ್ರತಿ ಪಡೆದು, ನಮ್ಮ ವೆಬ್ ನ್ಯೂಸ್ ಪೋರ್ಟಲ್‌ನಲ್ಲಿ ಸುದ್ದಿಯನ್ನು ಪ್ರಕಟಿಸಿದೆವು. ಅಲ್ಲಿಗೆ ನಿಲ್ಲದೆ, ಸಹೋದ್ಯೋಗಿ ಪತ್ರಕರ್ತ ಸ್ನೇಹಿತರಿಗೆಲ್ಲ ಹಂಚಿ ಎಲ್ಲಾ ಪ್ರಮುಖ ನ್ಯೂಸ್ ಸೈಟ್‌ಗಳಲ್ಲಿ ಸುದ್ದಿ ಬಿತ್ತರವಾಗುವಂತೆ ಮಾಡಿದೆವು.

ಅಲ್ಲಿಯವರೆಗೆ ಆ ಹುಡುಗ ಕಾಣೆಯಾದ ವಿಷಯ ಆ ತಾಯಿಯ ಆಪ್ತ ವಲಯದ ಒಂದಿಬ್ಬರನ್ನು ಬಿಟ್ಟರೆ ಯಾರಿಗೂ ತಿಳಿದಿರಲಿಲ್ಲ. ಆದರೆ ಸುದ್ದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಅದು ಕಾಡ್ಗಿಚ್ಚಿನಂತೆ ಹರಡಿತು. ಊರಿನ ಜನರಿಗೆ ಆತ ಇನ್ನೂ ಓದುತ್ತಿದ್ದಾನೆಂದಷ್ಟೇ ತಿಳಿದಿತ್ತು, ಆತ ಬದುಕಿನ ಬಂಡಿ ಸಾಗಿಸಲು ಬೆಂಗಳೂರಿಗೆ ಕೆಲಸಕ್ಕೆ ಹೋಗಿದ್ದ ವಿಷಯವೇ ಯಾರಿಗೂ ತಿಳಿದಿರಲಿಲ್ಲ.

ನಾಪತ್ತೆಯಾದ ಸುದ್ದಿ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಊರಿನ ಜಾಗೃತ ಯುವಕರು ಕಾರ್ಯಪ್ರವೃತ್ತರಾದರು. ಹುಡುಗನ ಭಾವಚಿತ್ರ ಎಲ್ಲಾ ವಾಟ್ಸಾಪ್ ಗ್ರೂಪ್‌ಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಹೋಯಿತು.

ಹುಡುಕಾಟದ ತೀವ್ರತೆ ಹೆಚ್ಚಾಯಿತು. ಆತ ಕೆಲಸ ಮಾಡುತ್ತಿದ್ದ ಸಂಸ್ಥೆಯವರ ಮೂಲಕ ಬೆಂಗಳೂರಿನಲ್ಲೂ ಒಂದು ದೂರು ದಾಖಲಿಸಲಾಯಿತು. ಹುಡುಗನ ಸ್ನೇಹಿತರು ಮತ್ತು ಊರಿನ ಯುವಕರು ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಆತನ ಫೋಟೋ ಹಿಡಿದು ಅಲೆಯಲಾರಂಭಿಸಿದರು.

ಹೀಗೆ ಆತಂಕ, ನಿರೀಕ್ಷೆ ಮತ್ತು ನಿರಾಸೆಗಳ ನಡುವೆ ಮೂರು ದಿನಗಳು ಉರುಳಿದವು. ಕೊನೆಗೂ ಮೂರನೇ ದಿನದ ರಾತ್ರಿ, ಆತ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದ ಆವರಣದಲ್ಲಿ ಪತ್ತೆಯಾದ ಎಂಬ ಶುಭ ಸುದ್ದಿ ಸಿಕ್ಕಿತು. ಇಡೀ ಊರು ಒಂದೇ ಬಾರಿಗೆ ನಿಟ್ಟುಸಿರು ಬಿಟ್ಟಿತು.

ಈ ಕಾರ್ಯಾಚರಣೆಯ ಹಿಂದೆ ನಿಜವಾದ ಮಾನವೀಯತೆಯ ದೀವಿಗೆಯಾಗಿ ನಿಂತವರು ರಶೀದ್ ಎಲಿಮಲೆ, ಖಾದರ್ ಜೀರ್ಮುಕ್ಕಿ, ಹಾರಿಸ್, ಝೈರುದ್ದೀನ್ ಮತ್ತು ಅಶ್ರಫ್ ಹೆಚ್.ಎಮ್ ಸೇರಿದಂತೆ ಎಮ್.ಎಮ್.ವೈ.ಸಿ ತಂಡದ ಯುವಕರು. ಇವರು ಮಧ್ಯರಾತ್ರಿಯೇ ಬೆಂಗಳೂರಿಗೆ ಧಾವಿಸಿ, ಹುಡುಗನನ್ನು ಸುರಕ್ಷಿತವಾಗಿ ಆತನ ಕುಟುಂಬದವರ ಕೈಗೆ ಒಪ್ಪಿಸಿದ್ದರು.

ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಆ ಹುಡುಗನನ್ನು ಮರುದಿನ ಬೆಳಿಗ್ಗೆ ಸುಳ್ಯ ಠಾಣೆಗೆ ಕರೆತಂದು, ಕಾನೂನಾತ್ಮಕ ಪ್ರಕ್ರಿಯೆ ಮುಗಿಸಿ ಹೆತ್ತ ತಾಯಿಯ ಮಡಿಲಿಗೆ ಸೇರಿಸಲಾಯಿತು.

ಅಲ್ಲಿ ಏನಾಗಿತ್ತು ಎಂದು ಕೇಳಿದರೆ ಆ ಯುವಕನ ಬಳಿ ಸ್ಪಷ್ಟ ಉತ್ತರವಿಲ್ಲ. ಮಹಾನಗರದ ಚಕ್ರವ್ಯೂಹದಲ್ಲಿ ತಪ್ಪಾದ ಸಹವಾಸದ ದೋಷವೋ, ಅಥವಾ ಊರಿಗೆ ಹೊರಡುವಾಗ ಕೈಲಿದ್ದ ಅಲ್ಪಸ್ವಲ್ಪ ಹಣವನ್ನು ನೋಡಿ ಯಾರಾದರೂ ಬ್ಲಾಕ್ ಮೇಲ್ ಮಾಡಿ ಮೊಬೈಲ್ ಮತ್ತು ಹಣ ಕಿತ್ತುಕೊಂಡಿದ್ದರೋ ತಿಳಿಯದು. ಆಘಾತದಿಂದ ಆತ ದಾರಿ ಕಾಣದೆ ಅಲೆದಾಡಿದ್ದ. ಒಟ್ಟಿನಲ್ಲಿ ಒಂದು ವಾರದ ಆ ತಲ್ಲಣದ ಪ್ರಹಸನ ಸುಖಾಂತ್ಯ ಕಂಡಿತ್ತು.

ಈ ಘಟನೆ ಇಂದಿನ ಪೀಳಿಗೆಗೆ ಮತ್ತು ಹೆತ್ತವರಿಗೆ ದೊಡ್ಡದೊಂದು ಪಾಠ. ಹದಿಹರೆಯದ ಯುವಕರು ಬದುಕು ಅರಸಿ ದೊಡ್ಡ ನಗರಗಳಿಗೆ ಹೋದಾಗ ಅಪರಿಚಿತರೊಂದಿಗೆ ಅತಿಯಾದ ಒಡನಾಟ ಬೆಳೆಸಿಕೊಳ್ಳುವುದು ಅಪಾಯಕಾರಿ. ಯಾರಾದರೂ ನಮ್ಮೊಂದಿಗೆ ಅತಿಯಾದ ಆಪ್ತತೆ ತೋರುತ್ತಿದ್ದಾರೆ ಎಂದರೆ ಅವರ ಹಿಂದೆ ಸ್ವಾರ್ಥ ಅಡಗಿರಬಹುದು ಎಂಬ ಎಚ್ಚರವಿರಬೇಕು. ದುಷ್ಟ ಶಕ್ತಿಗಳು ತರುಣರನ್ನು ದುಶ್ಚಟಗಳ ದಾಸರನ್ನಾಗಿಸಿ, ತಮ್ಮ ಕೆಟ್ಟ ಕೆಲಸಗಳಿಗೆ ದಾಳವಾಗಿ ಬಳಸಿಕೊಳ್ಳುವ ಜಾಲಗಳು ಸಕ್ರಿಯವಾಗಿವೆ. ಆದ್ದರಿಂದ ಹೆತ್ತವರು ತಮ್ಮ ಮಕ್ಕಳನ್ನು ದೂರದ ಊರುಗಳಿಗೆ ಕಳುಹಿಸುವಾಗ ಅವರ ನಡೆನುಡಿ ಸಹವಾಸಗಳ ಬಗ್ಗೆ ತೀವ್ರ ನಿಗಾ ವಹಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

ಕಣ್ಣೀರು ಹಾಕುತ್ತಾ ಠಾಣೆಯ ಮೆಟ್ಟಿಲೇರಿದ ತಾಯಿಗೆ ಧೈರ್ಯ ತುಂಬಿ, ದೂರು ದಾಖಲಿಸಿ, ವ್ಯಾಪಕ ಜಾಲ ಬೀಸಿ ಆ ಮಗನನ್ನು ಹೆತ್ತವರ ಮಡಿಲಿಗೆ ತಲುಪಿಸುವವರೆಗೂ ಸಾಕಾರ ನ್ಯೂಸ್ ಕೇವಲ ಸುದ್ದಿಗಾಗಿ ಕೆಲಸ ಮಾಡಲಿಲ್ಲ; ಬದಲಿಗೆ ಒಂದು ಕುಟುಂಬದ ಜೀವಂತ ಆಶಾಕಿರಣವಾಗಿ ಜೊತೆಗಿತ್ತು. ಕೇವಲ ಬ್ರೇಕಿಂಗ್ ನ್ಯೂಸ್‌ಗಳ ಬೆನ್ನಟ್ಟದೆ, ದೊಡ್ಡವರಿಗೆ ಬಕೇಟು ಹಿಡಿಯುತ್ತಾ ಕೂರದೇ  ಸಂಕಷ್ಟದಲ್ಲಿರುವ ಜನರ ನೋವಿಗೆ ಸ್ಪಂದಿಸುವುದೇ ಸಾಕಾರ ನ್ಯೂಸ್ ಧ್ಯೇಯ. ಈ ಮಾನವೀಯ ಕಾರ್ಯಾಚರಣೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೈಜೋಡಿಸಿದ ಪ್ರತಿಯೊಂದು ಸಹೃದಯಿ ಜೀವಕ್ಕೂ ನಮ್ಮ ಅನಂತ ಧನ್ಯವಾದಗಳು.

-ಸಾಹುಕಾರ್ ಅಚ್ಚು, ಸಾಕಾರ ನ್ಯೂಸ್

Leave a Reply

Discover more from

Subscribe now to keep reading and get access to the full archive.

Continue reading