ತೀವ್ರ ಆರ್ಥಿಕ ಬಿಕ್ಕಟ್ಟು ಹಾಗೂ ಹಸಿವಿನ ಬೇಗೆಯನ್ನು ತಾಳಲಾರದೆ ಒಂದೇ ಕುಟುಂಬದ ನಾಲ್ವರು ಹತ್ತಿರದ ಹೋಟೆಲ್‌ನಲ್ಲಿ ಕೊನೆಯ ಬಾರಿಗೆ ಹೊಟ್ಟೆತುಂಬಾ ಊಟ ಸವಿದು, ನದಿಗೆ ಹಾರಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ ಕರುಣಾಜನಕ ಘಟನೆಯೊಂದು ಬೆಳಕಿಗೆ ಬಂದಿದೆ. ಮೂಲತಃ ಕೋತಮಂಗಲಂ ನಿವಾಸಿಗಳಾದ ನಾರಾಯಣನ್, ಅವರ ಅಂಧ ಪತ್ನಿ ಬಿಜಿಮೋಲ್, ಮಕ್ಕಳಾದ ಅನ್ನಾ (6) ಹಾಗೂ ಎರಡು ವರ್ಷದ ಗಂಡು ಮಗು ದುರಂತ ಅಂತ್ಯ ಕಂಡ ದುರ್ದೈವಿಗಳಾಗಿದ್ದಾರೆ. ಭಾನುವಾರ ಬೆಳಗ್ಗೆ ನಾಪತ್ತೆಯಾಗಿದ್ದ ಕೊನೆಯ ಮಗು ಅನ್ನಾಳ ಶವ ಪತ್ತೆಯಾಗುವುದರೊಂದಿಗೆ ಇಡೀ ಕುಟುಂಬದ ಕಥೆ ಮುಕ್ತಾಯಗೊಂಡಿದೆ.

ಮೃತ ನಾರಾಯಣನ್ ದಿನಗೂಲಿ ಕಾರ್ಮಿಕನಾಗಿದ್ದರೆ, ಪತ್ನಿ ಬಿಜಿಮೋಲ್ ಹುಟ್ಟುತ್ತಲೇ ದೃಷ್ಟಿಹೀನರಾಗಿದ್ದರು. ಗುರುವಾಯೂರಿನ ದತ್ತಿ ಸಂಸ್ಥೆಯೊಂದರ ಸಹಾಯದಿಂದ ಇವರ ವಿವಾಹ ನಡೆದಿತ್ತು. ಆದರೆ, ಸಂಬಂಧಿಕರಿಂದ ದೂರವಿದ್ದ ಈ ಕುಟುಂಬ ತೀವ್ರ ಬಡತನದಿಂದಾಗಿ ವಾಸವಿದ್ದ ಮನೆಯ ಬಾಡಿಗೆಯನ್ನೂ ಕಟ್ಟಲಾಗದೆ ಬೀದಿಗೆ ಬಿದ್ದಿತ್ತು. ಬಡತನ ತಾಳಲಾರದೆ ಕಳೆದ ವಾರವಷ್ಟೇ ಈ ದಂಪತಿ ಮಕ್ಕಳೊಂದಿಗೆ ಕೋಥಮಂಗಲಂ ಪೊಲೀಸ್ ಠಾಣೆಗೆ ಬಂದು ತಮಗೆ ಸಾಯಲು ಬಿಡಿ ಎಂದು ಕಣ್ಣೀರಿಟ್ಟಿದ್ದರು. ಆಗ ಕರಗಿದ ಪೊಲೀಸರು ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ, ಇವರಿಗೆ ಬಾಡಿಗೆ ಮನೆ ಕೊಡಿಸಿ ಮಾನವೀಯತೆ ಮೆರೆದಿದ್ದರು. ಆದರೆ, ಪೊಲೀಸರು ನೆರವು ನೀಡಿದ ಕೆಲವೇ ದಿನಗಳಲ್ಲಿ ಕುಟುಂಬ ಈ ಕಠಿಣ ನಿರ್ಧಾರ ಕೈಗೊಂಡಿರುವುದು ಎಲ್ಲರನ್ನೂ ಆಘಾತಕ್ಕೀಡು ಮಾಡಿದೆ.

ಶುಕ್ರವಾರ ರಾತ್ರಿ ಈ ಭೀಕರ ಘಟನೆ ನಡೆದಿದೆ. ಇಡೀ ಕುಟುಂಬವು ಹತ್ತಿರದ ಐಶ್ವರ್ಯಾ ಹೋಟೆಲ್‌ನಲ್ಲಿ ಕೊನೆಯ ಬಾರಿಗೆ ಊಟ ಮುಗಿಸಿ ಹೊರಬರುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಪತ್ತೆಯಾಗಿವೆ. ಅಲ್ಲಿಂದ ಇವರೆಲ್ಲರೂ ನೇರವಾಗಿ ಪಿರಾವೊಮ್ ಸೇತುವೆಯ ಕಡೆಗೆ ನಡೆದುಕೊಂಡು ಹೋಗಿ ಮುವಾಟ್ಟುಪುಳ ನದಿಗೆ ಜಿಗಿದಿದ್ದಾರೆ. ಶುಕ್ರವಾರವೇ ಎರಡು ವರ್ಷದ ಮಗುವಿನ ಶವ ತೇಲುತ್ತಿರುವುದನ್ನು ಸ್ಥಳೀಯ ಮೀನುಗಾರರೊಬ್ಬರು ಗಮನಿಸಿದಾಗ ಈ ಮಹಾ ದುರಂತ ಜಗತ್ತಿಗೆ ಗೊತ್ತಾಗಿದೆ. ತದನಂತರ ಬಿಜಿಮೋಲ್, ಶನಿವಾರ ನಾರಾಯಣನ್ ಹಾಗೂ ಭಾನುವಾರ ಮುಂಜಾನೆ ಅಬಕಾರಿ ಕಡವು ಪ್ರದೇಶದಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ 6 ವರ್ಷದ ಅನ್ನಾಳ ಶವವನ್ನು ಹೊರತೆಗೆದಿದ್ದಾರೆ.
ಸದ್ಯ ಪಿರಾವೊಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಬಡತನ ಹಾಗೂ ಹಸಿವು ಒಂದು ಸುಂದರ ಕುಟುಂಬವನ್ನು ಹೇಗೆ ಇಲ್ಲದಂತೆ ಮಾಡಿತು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಆರ್ಥಿಕ ಸಂಕಷ್ಟಗಳಿಗೆ ಆತ್ಮಹತ್ಯೆ ಎಂದಿಗೂ ಪರಿಹಾರವಲ್ಲ. ನಮ್ಮ ಸುತ್ತಮುತ್ತ ಇಂತಹ ಕಷ್ಟದಲ್ಲಿರುವ ಕುಟುಂಬಗಳಿದ್ದರೆ ಅವರಿಗೆ ಸಹಾಯ ಹಸ್ತ ಚಾಚುವುದು ಎಲ್ಲರ ಕರ್ತವ್ಯವಾಗಿದೆ.







