ನಿಲ್ಲಿಸಿದ್ದ ಕಾರಿನಲ್ಲಿ ಏರ್ ಬ್ಯಾಗ್ ಓಪನ್: ವ್ಯಕ್ತಿ ಸಾವು

 

 

ಮುಂಬೈನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಏರ್‌ಬ್ಯಾಗ್ ಅನಿರೀಕ್ಷಿತವಾಗಿ ತೆರೆದುಕೊಂಡ ಪರಿಣಾಮ, ಅದರ ಪ್ಲಾಸ್ಟಿಕ್ ಕವಚವು ಕುತ್ತಿಗೆಗೆ ಬಡಿದು 25 ವರ್ಷದ ಕಾರು ವ್ಯಾಪಾರಿಯೊಬ್ಬರು ಅತಿಯಾದ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ.

ಮೀರಾ ರಸ್ತೆಯ ಟಿಯಾರಾ ಹಿಲ್ಸ್ ನಿವಾಸಿ ಮೋಹಿತ್ ಸೋನಿ ಬುಧವಾರ ರಸ್ತೆಬದಿಯಲ್ಲಿ ಕಾರನ್ನು ನಿಲ್ಲಿಸಿ ಪರಿಶೀಲಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಕಾರಿನ ಸ್ಟೀರಿಂಗ್ ವೀಲ್‌ನಲ್ಲಿದ್ದ ಏರ್‌ಬ್ಯಾಗ್ ಇದ್ದಕ್ಕಿದ್ದಂತೆ ಸಡಿಲಗೊಂಡು ಸ್ಫೋಟಗೊಂಡಿದೆ. ಈ ಸಂದರ್ಭದಲ್ಲಿ ಹಾರಿಬಂದ ಪ್ಲಾಸ್ಟಿಕ್ ಕವರ್ ಮೋಹಿತ್ ಅವರ ಕುತ್ತಿಗೆಯ ಬಲಭಾಗಕ್ಕೆ ಬಲವಾಗಿ ಬಡಿದು ಆಳವಾದ ಗಾಯವನ್ನು ಉಂಟುಮಾಡಿದೆ.

ದಾರಿಹೋಕರೊಬ್ಬರು ಕಾರಿನೊಳಗೆ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನರಾಗಿದ್ದ ಮೋಹಿತ್ ಅವರನ್ನು ಗಮನಿಸಿ ಸ್ಥಳೀಯರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾಶಿಮಿರಾ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ, ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಯಾರೂ ಇಲ್ಲದ ಸಮಯದಲ್ಲಿ ಘಟನೆ ನಡೆದಿದ್ದರಿಂದ ತಕ್ಷಣಕ್ಕೆ ಚಿಕಿತ್ಸೆ ಸಿಗದೆ ಅತಿಯಾದ ರಕ್ತಸ್ರಾವದಿಂದಲೇ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತಪಾಸಣೆಯಲ್ಲಿ ವಾಹನಕ್ಕೆ ಯಾವುದೇ ಬಾಹ್ಯ ಡಿಕ್ಕಿ ಅಥವಾ ಹಾನಿಯ ಲಕ್ಷಣಗಳು ಕಂಡುಬಂದಿಲ್ಲ. ಪೊಲೀಸರು ಸದ್ಯಕ್ಕೆ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading