ಸುವೇಂದು ಅಧಿಕಾರಿಯನ್ನು ಹೊಗಳಿದ ಮೆಹುವ ಮೊಯಿತ್ರ: ಪಶ್ಚಿಮ ಬಂಗಾಳದಲ್ಲಿ ಸಂಭವಿಸುತ್ತಿರುವುದೇನು?

ಪಶ್ಚಿಮ ಬಂಗಾಳದ ಸದ್ಯದ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ನಡುವಿನ ಹಳೆಯ ಬಾಂಧವ್ಯದ ವಿಚಾರ ಈಗ ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಬಿಬಿಸಿ ಸಂದರ್ಶನವೊಂದರಲ್ಲಿ ಮಹುವಾ ಮೊಯಿತ್ರಾ ಅವರು ಸುವೇಂದು ಅಧಿಕಾರಿ ಕುರಿತು ಆಡಿರುವ ಪ್ರಶಂಸೆಯ ಮಾತುಗಳು ಬಂಗಾಳದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ.
ಬಿಜೆಪಿಯ ಪ್ರಖರ ಟೀಕಾಕಾರರಾಗಿ ಗುರುತಿಸಿಕೊಂಡಿರುವ ಮಹುವಾ ಮೊಯಿತ್ರಾ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಜೊತೆಗಿನ ತಮ್ಮ ವೈಯಕ್ತಿಕ ಬಾಂಧವ್ಯವನ್ನು ಸಂದರ್ಶನದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.

2014ರಲ್ಲಿ ತನಗೆ ಚುನಾವಣಾ ಸೀಟು ಸಿಗದೇ ಹೋದಾಗ ಸುವೇಂದು ಅಧಿಕಾರಿ ಮೊದಲು ಬಂದು ತನ್ನನ್ನು ಸಾಂತ್ವನಿಸಿದ್ದರು ಎಂಬುದನ್ನು ಮಹುವಾ ನೆನಪಿಸಿಕೊಂಡಿದ್ದಾರೆ. ರಾಜಕೀಯವಾಗಿ ಸದ್ಯ ಬೇರೆ ಬೇರೆ ದ್ರುವಗಳಲ್ಲಿದ್ದರೂ, ತನ್ನ ಜೀವನದ ಪ್ರತಿಯೊಂದು ಕಷ್ಟದ ಹಾಗೂ ಪ್ರಮುಖ ಘಟ್ಟದಲ್ಲೂ ಸುವೇಂದು ಅಧಿಕಾರಿ ತನಗೆ ನೆರವಾಗಿದ್ದಾರೆ ಎಂದು ಮಹುವಾ ಹೇಳಿಕೆ ನೀಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗಷ್ಟೇ ತೃಣಮೂಲ ಕಾಂಗ್ರೆಸ್ ಆಡಳಿತ ಕೊನೆಗೊಂಡು ಸುವೇಂದು ಅಧಿಕಾರಿ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮಮತಾ ಬ್ಯಾನರ್ಜಿ ಅವರು ರಾಜಕೀಯವಾಗಿ ತೀವ್ರ ಹಿನ್ನಡೆ ಅನುಭವಿಸಿ, ತೃಣಮೂಲ ಕಾಂಗ್ರೆಸ್ ಒಳಗಿನ ಆಂತರಿಕ ಬಂಡಾಯ ಜೋರಾಗಿರುವ ಬೆನ್ನಲ್ಲೇ ಈ ಸಂದರ್ಶನ ಪ್ರಸಾರವಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಸದಾ ಕೇಂದ್ರ ಸರ್ಕಾರದ ವಿರುದ್ಧ ಮತ್ತು ಬಿಜೆಪಿಯ ಸಿದ್ಧಾಂತಗಳ ವಿರುದ್ಧ ಸಂಸತ್ತಿನಲ್ಲಿ ಗಟ್ಟಿ ಧ್ವನಿಯಲ್ಲಿ ಗುಡುಗುವ ಮಹುವಾ ಮೊಯಿತ್ರಾ ಅವರ ಈ ಆಪ್ತತೆಯ ಮಾತುಗಳು ಹಲವು ರಾಜಕೀಯ ಲೆಕ್ಕಾಚಾರಗಳಿಗೆ ಎಡೆಮಾಡಿಕೊಟ್ಟಿವೆ.


ಮಹುವಾ ಅವರ ಈ ಹೇಳಿಕೆಯ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ ಪಕ್ಷದ ಈ ಗಟ್ಟಿಧ್ವನಿ ಮುಂದಿನ ದಿನಗಳಲ್ಲಿ ಬಿಜೆಪಿಗೆ ಹೋಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆ ರಾಜಕೀಯ ವಿಶ್ಲೇಷಕರಲ್ಲಿ ಮೂಡಿದೆ. ಸದ್ಯಕ್ಕೆ ಮಹುವಾ ಮೊಯಿತ್ರಾ ಅವರು ಕಟು ಬಿಜೆಪಿ ವಿರೋಧಿ ಸಿದ್ಧಾಂತವನ್ನು ಹೊಂದಿರುವುದರಿಂದ ನೇರವಾಗಿ ಕಮಲ ಪಾಳಯ ಸೇರುವುದು ದೂರದ ಮಾತು ಎನಿಸಿದರೂ, ರಾಜಕಾರಣದಲ್ಲಿ ಯಾವುದೂ ಅಸಾಧ್ಯವಲ್ಲ. ತೃಣಮೂಲ ಕಾಂಗ್ರೆಸ್ ಒಳಗಿನ ಆಂತರಿಕ ಬೇಗುದಿ ಮತ್ತು ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಸುವೇಂದು ಅಧಿಕಾರಿ ಅವರೊಂದಿಗಿನ ಆಪ್ತತೆ ಭವಿಷ್ಯದಲ್ಲಿ ಬಂಗಾಳ ರಾಜಕೀಯದ ಚಿತ್ರಣವನ್ನು ಬದಲಿಸಿದರೂ ಅಚ್ಚರಿಯಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಸದ್ಯಕ್ಕಂತೂ ಮಹುವಾ ಅವರ ಈ ಹೇಳಿಕೆ ತೃಣಮೂಲ ಕಾಂಗ್ರೆಸ್ ಪಾಳಯದಲ್ಲಿ ತಳಮಳ ಸೃಷ್ಟಿಸಿದ್ದರೆ, ಬಿಜೆಪಿ ನಾಯಕರಿಗೆ ಹೊಸ ರಾಜಕೀಯ ಅಸ್ತ್ರ ಸಿಕ್ಕಂತಾಗಿದೆ. ಭವಿಷ್ಯದಲ್ಲಿ ಈ ಹಳೆಯ ಬಾಂಧವ್ಯ ಹೊಸ ರಾಜಕೀಯ ತಿರುವಿಗೆ ಕಾರಣವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Discover more from

Subscribe now to keep reading and get access to the full archive.

Continue reading