ಖರ್ಗೆ ಯೂಸ್ ಲೆಸ್ ಫೆಲೋಸ್ ಎಂದ ವಿಷಯದ ಮರ್ಮ:ಸಿದ್ಧಾಂತ ವರ್ಸಸ್ ವ್ಯಕ್ತಿಪೂಜೆ

ಬೆಂಗಳೂರಿನ ಕೆಪಿಸಿಸಿ ಪದಗ್ರಹಣ ಸಮಾರಂಭದಲ್ಲಿ ನಡೆದ ಆ ಒಂದು ಘಟನೆ ಕೇವಲ ಒಂದು ಕ್ಷಣದ ಗದ್ದಲವಾಗಿರಲಿಲ್ಲ; ಅದು ಇಂದು ಕಾಂಗ್ರೆಸ್ ಪಕ್ಷವನ್ನು ಒಳಗಿನಿಂದಲೇ ಕೊರೆಯುತ್ತಿರುವ ಗಂಭೀರ ಕಾಯಿಲೆಯೊಂದರ ಬಹಿರಂಗ ಪ್ರದರ್ಶನವಾಗಿತ್ತು. ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡುವಾಗ ‘ಡಿಕೆ ಡಿಕೆ’ ಎಂದು ಕೂಗಿದ ಕಾರ್ಯಕರ್ತರನ್ನು ‘ಯೂಸ್-ಲೆಸ್ ಫೆಲೋಸ್’ ಎಂದು ಕರೆದು, ವ್ಯಕ್ತಿಪೂಜೆ ಪಕ್ಷಕ್ಕೆ ಮಾರಕ ಎಂದು ಎಚ್ಚರಿಸಿದಾಗ ಅಲ್ಲಿ ಕೇವಲ ಶಿಸ್ತಿನ ಪಾಠವಿರಲಿಲ್ಲ, ಬದಲಿಗೆ ಪಕ್ಷದ ಭವಿಷ್ಯದ ಬಗೆಗಿನ ತೀವ್ರ ಆತಂಕವಿತ್ತು.


ಒಬ್ಬ ಹಿರಿಯ ಮುತ್ಸದ್ದಿ ನಾಯಕ ವೇದಿಕೆಯಲ್ಲಿದ್ದಾಗ ಶಿಸ್ತು, ಸಂಯಮ ಪಾಲಿಸುವುದು ಕಾರ್ಯಕರ್ತರ ಕನಿಷ್ಠ ಕರ್ತವ್ಯ. ಆದರೆ ಇಂದಿನ ರಾಜಕಾರಣದಲ್ಲಿ ಸೈದ್ಧಾಂತಿಕ ಬದ್ಧತೆಗಿಂತ ಹೆಚ್ಚಾಗಿ ತಮ್ಮ ‘ಬಕೆಟ್ ಬುದ್ಧಿ’ಯನ್ನು ಪ್ರದರ್ಶಿಸುವುದೇ ದೊಡ್ಡ ಸಾಧನೆ ಎಂದುಕೊಂಡಿರುವ ಮೂರ್ಖರ ಹಿಂಡು ಸೃಷ್ಟಿಯಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಸ್ತುತ ಸ್ಥಿತಿಗತಿಯನ್ನು ಅವಲೋಕಿಸಿದಾಗ ಕೆಲವು ಕಹಿ ಸತ್ಯಗಳು ಬಿಚ್ಚಿಕೊಳ್ಳುತ್ತವೆ.

ಕಾಂಗ್ರೆಸ್ ಪಕ್ಷದ ಇಂದಿನ ಬಹುದೊಡ್ಡ ದುರಂತವೆಂದರೆ, ದಿನ ಕಳೆದಂತೆ ಪಕ್ಷ ಸೊರಗುತ್ತಿದ್ದರೆ, ನಾಯಕರ ವೈಯಕ್ತಿಕ ಪ್ರತಿಷ್ಠೆಗಳು ಮತ್ತು ಅವರ ಸುತ್ತಲಿನ ಬೆಂಬಲಿಗರ ಹಾರಾಟ ಮಾತ್ರ ಮುಗಿಲು ಮುಟ್ಟುತ್ತಿದೆ. ತಮ್ಮ ಸ್ವಂತ ಚಾರ್ಮ್ ಅಥವಾ ವರ್ಚಸ್ಸಿನಿಂದ ಕನಿಷ್ಠ ಒಂದು ಗ್ರಾಮ ಪಂಚಾಯತ್ ಚುನಾವಣೆಯನ್ನೂ ಗೆಲ್ಲಲಾಗದ ಅದೆಷ್ಟೋ “ಪರಾವಲಂಬಿ ನಾಯಕರು” ಇಂದು ಪಕ್ಷದಲ್ಲಿ ಸೃಷ್ಟಿಯಾಗಿದ್ದಾರೆ. ಇವರ ಇಡೀ ರಾಜಕಾರಣ ನಿಂತಿರುವುದೇ ಹೈಕಮಾಂಡ್ ಮಟ್ಟದಲ್ಲೋ ಅಥವಾ ಪ್ರಭಾವಿ ರಾಜ್ಯ ನಾಯಕರ ನೆರಳಿನಲ್ಲೋ ಗುರುತಿಸಿಕೊಳ್ಳುವುದರ ಮೇಲೆ ಮಾತ್ರ.

ಯಾವ ಸಂಘಟನೆ ಅಥವಾ ಪಕ್ಷ ತನ್ನ  ಸೈದ್ಧಾಂತಿಕ ನೆಲೆಗಟ್ಟನ್ನು ಕಳೆದುಕೊಂಡು ವ್ಯಕ್ತಿ ಕೇಂದ್ರಿತವಾಗುತ್ತದೆಯೋ, ಅಲ್ಲಿ ನಿಸ್ವಾರ್ಥ ಸೇವೆಗೆ ಬೆಲೆ ಇರುವುದಿಲ್ಲ. ತಲೆಮಾರುಗಳಿಂದ ಕಾಂಗ್ರೆಸ್ ಸಿದ್ಧಾಂತವನ್ನು ನಂಬಿ, ಪಕ್ಷಕ್ಕಾಗಿ ಬೆವರು ಹರಿಸಿದ ನಿಸ್ವಾರ್ಥ ಕಾರ್ಯಕರ್ತರು ಇಂದು ಮೂಲೆಗುಂಪಾಗುತ್ತಿದ್ದಾರೆ. ಅವರ ಜಾಗವನ್ನು ಇಂದು ಬಕೆಟ್ ಹಿಡಿಯುವ, ನಾಯಕರ ಬೂಟು ನೆಕ್ಕುವ ಮತ್ತು ಚಮಚಾಗಿರಿ ಮಾಡುವ ಜೈಕಾರದ ಗ್ಯಾಂಗ್‌ಗಳು ಆಕ್ರಮಿಸಿಕೊಳ್ಳುತ್ತಿವೆ. ಇಂತಹ ಹಿಂಬಾಲಕರನ್ನು ಸಾಕಿ ಬೆಳೆಸುವ ನಾಯಕರು ತಮಗೆ ತಾತ್ಕಾಲಿಕವಾಗಿ ದೊಡ್ಡ ಶಕ್ತಿ ಬಂದಂತೆ ಭ್ರಮಿಸಬಹುದು, ಆದರೆ ಸುದೀರ್ಘ ಅವಧಿಯಲ್ಲಿ ಇದು ಪಕ್ಷದ ತಳಹದಿಯನ್ನೇ ಸಡಿಲಗೊಳಿಸುತ್ತಿದೆ.

ಕಾಂಗ್ರೆಸ್ ಮೊದಲಿನಿಂದಲೂ ಬಣ ರಾಜಕೀಯದಿಂದಲೇ ಬಡವಾಗಿರುವ ಪಕ್ಷ. ಆದರೆ ಇತ್ತೀಚಿನ ದಿನಗಳಲ್ಲಿ ಈ ಬಣ ರಾಜಕೀಯ ಕಾರ್ಯಕರ್ತರ ಅತಿರೇಕದ ವರ್ತನೆಗಳಿಂದಾಗಿ ಮತ್ತಷ್ಟು ವಿಕೋಪಕ್ಕೆ ಹೋಗುತ್ತಿದೆ. ನಾಯಕರುಗಳ ನಡುವೆ ಭಿನ್ನಾಭಿಪ್ರಾಯಗಳು ಸಹಜ, ಆದರೆ ಅದನ್ನು ಬೀದಿಗೆ ತಂದು, ರಾಷ್ಟ್ರೀಯ ಅಧ್ಯಕ್ಷರ ಸಮ್ಮುಖದಲ್ಲೇ ಗುಂಪುಗಾರಿಕೆ ಪ್ರದರ್ಶಿಸುವುದು ಆತ್ಮಹತ್ಯಾತ್ಮಕ ನಡೆ. ಈ ರೀತಿಯ ಅತಿರೇಕದ ವರ್ತನೆಗಳು ವಿರೋಧ ಪಕ್ಷಗಳಿಗೆ ಸುಲಭವಾಗಿ ಅಸ್ತ್ರಗಳನ್ನು ಒದಗಿಸಿಕೊಡುತ್ತವೆ ಮತ್ತು ತಟಸ್ಥ ಮತದಾರರಲ್ಲಿ ಪಕ್ಷದ ಬಗ್ಗೆ ಜಿಗುಪ್ಸೆ ಮೂಡುವಂತೆ ಮಾಡುತ್ತವೆ.

ಪಕ್ಷ ಬಲಗೊಳ್ಳಬೇಕಿರುವುದು ಸೈದ್ಧಾಂತಿಕ ಬದ್ಧತೆಯಿಂದೇ ಹೊರತು, ನಾಯಕರ ವೈಯಕ್ತಿಕ ಪಿಆರ್  ಸ್ಟಂಟ್‌ಗಳಿಂದಲ್ಲ. ವ್ಯಕ್ತಿಪೂಜೆ ಎಂಬುದು ಪಕ್ಷದ ಆಂತರಿಕ ಪ್ರಜಾಪ್ರಭುತ್ವವನ್ನು ಕೊಲ್ಲುವ ವಿಷ.

ಖರ್ಗೆಯವರು ಅಂದು ವೇದಿಕೆಯಲ್ಲಿ ಆಕ್ರೋಶ ಹೊರಹಾಕಿದ್ದು ಕೇವಲ ಆ ಕ್ಷಣದ ಗದ್ದಲಕ್ಕಲ್ಲ, ಬದಲಿಗೆ ಪಕ್ಷದೊಳಗೆ ತಳವೂರುತ್ತಿರುವ ಈ ಮಾರಕ ಸಂಸ್ಕೃತಿಯನ್ನು ಕಂಡು. ಕಾಂಗ್ರೆಸ್ ಹಿತದೃಷ್ಟಿಯಿಂದ ಈ ‘ಚಮಚಾಗಿರಿ’ ಮತ್ತು ‘ವ್ಯಕ್ತಿ ಕೇಂದ್ರಿತ’ ರಾಜಕಾರಣಕ್ಕೆ ತಕ್ಷಣವೇ ಬ್ರೇಕ್ ಬೀಳಬೇಕಿದೆ. ಬಕೆಟ್ ಹಿಡಿಯುವವರಿಗೆ ಮಣೆ ಹಾಕುವುದನ್ನು ನಿಲ್ಲಿಸಿ, ಪಕ್ಷದ ಸಿದ್ಧಾಂತಕ್ಕೆ ಮತ್ತು ಸಂಘಟನೆಗೆ ಪ್ರಾಮಾಣಿಕವಾಗಿ ದುಡಿಯುವವರನ್ನು ಗುರುತಿಸದಿದ್ದರೆ, ನಾಯಕರ ಪ್ರತಿಷ್ಠೆಯ ಜಿದ್ದಾಜಿದ್ದಿನಲ್ಲಿ ಪಕ್ಷ ಮತ್ತಷ್ಟು ಪ್ರಪಾತಕ್ಕೆ ಕುಸಿಯುವುದರಲ್ಲಿ ಯಾವುದೇ ಅನುಮಾನಗಳಿಲ್ಲ

-ಸಾಹುಕಾರ್ ಅಚ್ಚು

Leave a Reply

Discover more from

Subscribe now to keep reading and get access to the full archive.

Continue reading