ಮಂಗಳೂರು, ಜೂನ್ 21: ಕರಾವಳಿ ಕರ್ನಾಟಕದ ಪ್ರಮುಖ ಆರ್ಥಿಕ ಮೂಲವಾಗಿರುವ ಅಡಿಕೆ ಉದ್ಯಮ ಇಂದು ಬಹುಮುಖ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದು, ವ್ಯಾಪಾರಿಗಳು, ಬೆಳೆಗಾರರು, ಸಾರಿಗೆದಾರರು ಹಾಗೂ ಈ ವಲಯವನ್ನು ಅವಲಂಬಿಸಿರುವ ಸಾವಿರಾರು ಕಾರ್ಮಿಕರ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ದೀರ್ಘಕಾಲದಿಂದ ವಿವಿಧ ಸಮಸ್ಯೆಗಳಿಗೆ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ಅಡಿಕೆ ವರ್ತಕರ ಒಕ್ಕೂಟ ಮತ್ತು ಮಂಗಳೂರು ಲಾರಿ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ ಹೋರಾಟದ ಹಾದಿ ಹಿಡಿದಿದ್ದು, ಸಮಸ್ಯೆ ಬಗೆಹರಿಯದಿದ್ದಲ್ಲಿ ಜೂನ್ 24ರಿಂದ ಎಲ್ಲಾ ರೀತಿಯ ಅಡಿಕೆ ವ್ಯವಹಾರಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದೆ.
ಸಾರಿಗೆ ವ್ಯವಸ್ಥೆಯಲ್ಲಿನ ಗೊಂದಲದಿಂದ ಆರ್ಥಿಕ ಹೊರೆ
ಅಡಿಕೆ ಸಾಗಾಟದ ವೇಳೆ ಸಂಭವಿಸುವ ಹಾನಿ ಅಥವಾ ನಷ್ಟದ ಸಂಪೂರ್ಣ ಹೊಣೆಯನ್ನು ಕೇವಲ ರವಾನೆದಾರರ ಮೇಲೆ ಹೊರಿಸಲಾಗುತ್ತಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಸರಕುಗಳನ್ನು ಸಾಗಿಸುವ ವೇಳೆ ಕಾನೂನು ತೊಡಕುಗಳು ಅಥವಾ ಇತರ ಕಾರಣಗಳಿಂದ ಸಮಸ್ಯೆಗಳು ಎದುರಾದಾಗ ಅದರ ಸಂಪೂರ್ಣ ಹೊರೆ ಲಾರಿ ಮಾಲಕರು ಮತ್ತು ವ್ಯಾಪಾರಿಗಳ ಮೇಲೇ ಬೀಳುತ್ತಿದೆ. ಇದರಿಂದ ಅನೇಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಹಾರಾಷ್ಟ್ರದಲ್ಲಿ ಕಿರುಕುಳದ ಆರೋಪ
ಅಡಿಕೆ ವ್ಯಾಪಾರಿಗಳು ಮಹಾರಾಷ್ಟ್ರ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯವೈಖರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಿಂದ ಸಾಗುವ ಅಡಿಕೆ ವಾಹನಗಳನ್ನು ಗಡಿ ಪ್ರದೇಶಗಳಲ್ಲಿ ತಡೆದು ಅನಗತ್ಯ ಪರಿಶೀಲನೆ ನಡೆಸುವುದು, ದಾಖಲೆಗಳ ಹೆಸರಿನಲ್ಲಿ ವಾಹನಗಳನ್ನು ಗಂಟೆಗಟ್ಟಲೆ ಅಥವಾ ದಿನಗಟ್ಟಲೆ ನಿಲ್ಲಿಸುವುದು, ವ್ಯಾಪಾರಕ್ಕೆ ಅಡ್ಡಿಪಡಿಸುವ ರೀತಿಯ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇದರಿಂದ ಸರಕು ವಿತರಣೆಯಲ್ಲಿ ವಿಳಂಬ ಉಂಟಾಗುತ್ತಿದ್ದು, ವ್ಯಾಪಾರಿಗಳ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುತ್ತಿದೆ.
ಸರಕು ಕೊಟ್ಟರೂ ಹಣ ಬಾರದ ಪರಿಸ್ಥಿತಿ

ಇತ್ತೀಚಿನ ದಿನಗಳಲ್ಲಿ ಅನೇಕ ವ್ಯಾಪಾರಿಗಳು ಸರಕು ಪೂರೈಸಿದ ಬಳಿಕವೂ ತಿಂಗಳುಗಟ್ಟಲೆ ಹಣ ಪಡೆಯಲು ಪರದಾಡುವಂತಾಗಿದೆ. ಕೆಲವೊಂದು ಪ್ರಕರಣಗಳಲ್ಲಿ ಕೋಟ್ಯಂತರ ರೂಪಾಯಿ ಬಾಕಿ ಉಳಿದಿದ್ದು, ಹಣ ವಸೂಲಿ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ಮಟ್ಟದ ವ್ಯಾಪಾರಿಗಳು ಗಂಭೀರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಾಲ ಪಡೆದು ವ್ಯವಹಾರ ನಡೆಸುತ್ತಿರುವ ಅನೇಕರು ಬಡ್ಡಿಯ ಹೊರೆ ತಾಳಲಾರದೇ ಸಂಕಷ್ಟಕ್ಕೀಡಾಗಿದ್ದಾರೆ.
ನಗದು ವ್ಯವಹಾರ ಮತ್ತು ಗರ್ಬಲ್ ಪದ್ಧತಿಗೂ ಸಂಕಷ್ಟ

ದಶಕಗಳಿಂದ ಅಡಿಕೆ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ನಗದು ವ್ಯವಹಾರ ಮತ್ತು ಗಾರ್ಬಲ್ ಗೆ ಸಂಬಂಧಿಸಿದಂತೆ ನಿಯಮಾವಳಿಗಳ ಗೊಂದಲ ಹೆಚ್ಚಾಗಿದೆ. ಈ ವ್ಯವಹಾರಗಳಿಗೆ ಸ್ಪಷ್ಟ ಮಾರ್ಗಸೂಚಿಗಳ ಕೊರತೆ ಮತ್ತು ಕಾನೂನಾತ್ಮಕ ಅಡೆತಡೆಗಳು ವ್ಯಾಪಾರ ವಹಿವಾಟನ್ನು ಸಂಕೀರ್ಣಗೊಳಿಸಿವೆ. ಇದರಿಂದ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಾಗಿದ್ದು, ವ್ಯಾಪಾರ ನಡೆಸಲು ಸೂಕ್ತ ವಾತಾವರಣದ ಕೊರತೆ ಎದುರಾಗಿದೆ.

ಬೆಳೆಗಾರರು ಮತ್ತು ಕಾರ್ಮಿಕರ ಬದುಕಿನ ಮೇಲೂ ಪರಿಣಾಮ
ಮಾರುಕಟ್ಟೆಯಲ್ಲಿನ ಅಸ್ಥಿರತೆ ಮತ್ತು ವ್ಯವಹಾರದಲ್ಲಿನ ಅನಿಶ್ಚಿತತೆಯಿಂದ ಬೆಳೆಗಾರರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ಏರಿಳಿತ, ಹಣ ಪಾವತಿಯಲ್ಲಿ ವಿಳಂಬ ಮತ್ತು ಖರೀದಿದಾರರ ಸಮಸ್ಯೆಯಿಂದ ರೈತರಲ್ಲಿ ಆತಂಕ ಮನೆಮಾಡಿದೆ. ಅಡಿಕೆ ಉದ್ಯಮವನ್ನು ಅವಲಂಬಿಸಿರುವ ಲೋಡಿಂಗ್-ಅನ್‌ಲೋಡಿಂಗ್ ಕಾರ್ಮಿಕರು, ಸಾರಿಗೆ ಸಿಬ್ಬಂದಿ, ಗೋದಾಮು ಕಾರ್ಮಿಕರು ಸೇರಿದಂತೆ ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೂ ಇದರಿಂದ ಹೊಡೆತ ಬೀಳುವ ಆತಂಕ ವ್ಯಕ್ತವಾಗಿದೆ.
ಹೋರಾಟಕ್ಕೆ ಒಕ್ಕೂಟದ ಕರೆ
ಅಡಿಕೆ ವರ್ತಕರ ಒಕ್ಕೂಟದ ತುರ್ತು ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ, ಜೂನ್ 22ರ ಮಧ್ಯರಾತ್ರಿಯಿಂದಲೇ ಎಲ್ಲಾ ಸಾರಿಗೆದಾರರು ಅಡಿಕೆ ಸರಕುಗಳ ಸಂಗ್ರಹಣೆ ಮತ್ತು ಸಾಗಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಿದ್ದಾರೆ. ಜೂನ್ 22ರ ಸಂಜೆಯೊಳಗೆ ಸರ್ಕಾರ ಅಥವಾ ಸಂಬಂಧಿಸಿದ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ, ಜೂನ್ 23ರಂದು ಪತ್ರಿಕಾಗೋಷ್ಠಿ ನಡೆಸಿ ಹೋರಾಟದ ಮುಂದಿನ ರೂಪುರೇಷೆಗಳನ್ನು ಪ್ರಕಟಿಸಲಾಗುವುದು.
ಇದಾದ ಬಳಿಕವೂ ಸಮಸ್ಯೆ ಬಗೆಹರಿಯದೆ ಉಳಿದಲ್ಲಿ, ಜೂನ್ 24ರಿಂದ ನಗದು ಖರೀದಿ, ಮಾರಾಟ ಹಾಗೂ ಗರ್ಬಲ್ ವ್ಯಾಪಾರ ಸೇರಿದಂತೆ ಎಲ್ಲಾ ರೀತಿಯ ಅಡಿಕೆ ವ್ಯವಹಾರಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು ಎಂದು ಒಕ್ಕೂಟ ಸ್ಪಷ್ಟಪಡಿಸಿದೆ.
ಅಡಿಕೆ ಉದ್ಯಮವು ಕರಾವಳಿ ಭಾಗದ ಲಕ್ಷಾಂತರ ಜನರ ಜೀವನಾಧಾರವಾಗಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಅರಿತು ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಅಡಿಕೆ ವರ್ತಕರು ಮತ್ತು ಸಾರಿಗೆದಾರರು ಒತ್ತಾಯಿಸಿದ್ದಾರೆ.




