ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ: ರಸ್ತೆಯಲ್ಲೇ ನಿಲ್ಲುವ ನೀರು; ಕೆಎನ್‌ಆರ್ ಕಂಪೆನಿಯ ಅವೈಜ್ಞಾನಿಕ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ

ಮಾಣಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಕೊನೆಗೂ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಆದರೆ, ಕಳೆದ ನಾಲ್ಕೈದು ವರ್ಷಗಳಿಂದ ಕಾಮಗಾರಿಯ ನೆಪದಲ್ಲಿ ವಾಹನ ಸವಾರರು ಮತ್ತು ಸ್ಥಳೀಯ ನಿವಾಸಿಗಳು ಪಡುತ್ತಿರುವ ಯಾತನೆ ಮಾತ್ರ ಇನ್ನೂ ಮುಗಿದಿಲ್ಲ. ಸಾರ್ವಜನಿಕರ ಇಷ್ಟೆಲ್ಲಾ ಕಷ್ಟಗಳಿಗೆ ಕ್ಯಾರೇ ಅನ್ನದ ಗುತ್ತಿಗೆ ಸಂಸ್ಥೆ ‘ಕೆಎನ್‌ಆರ್ ಕಂಪೆನಿ’, ತನಗೆ ತೋಚಿದಂತೆ ಅತ್ಯಂತ ಅವೈಜ್ಞಾನಿಕ ಹಾಗೂ ವಟ್ರಾಸಿ (ಅಸಮರ್ಪಕ) ಕೆಲಸ ಮಾಡುತ್ತಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಂಗಳೂರು ಕಡೆಯಿಂದ ಮಾಣಿ ಪೇಟೆಗೆ ಅಥವಾ ಪುತ್ತೂರು-ಮೈಸೂರು ರಸ್ತೆಗೆ ಪ್ರವೇಶಿಸುವ ವಾಹನಗಳು ಮಾಣಿ ಗ್ರಾಮದ ಹಳೀರ ಎಂಬಲ್ಲಿ ಸರ್ವಿಸ್ ರಸ್ತೆಯನ್ನು ಬಳಸಬೇಕಾಗುತ್ತದೆ. ಆದರೆ, ಈ ಸರ್ವಿಸ್ ರಸ್ತೆಯ ನಿರ್ಮಾಣ ಸಂಪೂರ್ಣ ಅವೈಜ್ಞಾನಿಕವಾಗಿದೆ. ಪ್ರಸ್ತುತ ಮಳೆಗಾಲ ಆರಂಭವಾಗಿರುವುದರಿಂದ, ಹೆದ್ದಾರಿಯ ಪ್ರವೇಶ ಭಾಗದಲ್ಲೇ ಮಳೆನೀರು ಮತ್ತು ಕೆಸರು ಹರಿದು ಬಂದು ರಸ್ತೆಯಲ್ಲೇ ನಿಲ್ಲುತ್ತಿದೆ.ಮುಖ್ಯ ಕಾರಣ ಈ ಭಾಗದಲ್ಲಿ ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು ಮತ್ತು ಸಂಪೂರ್ಣವಾದ ತಡೆಗೋಡೆಯನ್ನು ನಿರ್ಮಿಸದೇ ಇರುವುದೇ ಆಗಿದೆ. ಇದರಿಂದಾಗಿ ಸುತ್ತಮುತ್ತಲಿನ ಗುಡ್ಡ ಹಾಗೂ ಮೇಲ್ಭಾಗದ ನೀರೆಲ್ಲವೂ ನೇರವಾಗಿ ಹೆದ್ದಾರಿಗೆ ನುಗ್ಗುತ್ತಿದೆ.ರಸ್ತೆಯಲ್ಲಿ ಮೊಣಕಾಲಿನವರೆಗೆ ನೀರು ನಿಲ್ಲುತ್ತಿರುವುದರಿಂದ ದಿನನಿತ್ಯ ಶಾಲೆಗೆ ಹೋಗುವ ಸಣ್ಣ ಸಣ್ಣ ಮಕ್ಕಳು, ಸಾರ್ವಜನಿಕರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ವೇಗವಾಗಿ ಚಲಿಸುವ ವಾಹನಗಳು ರಸ್ತೆ ಬದಿಯ ನೀರು ಮತ್ತು ಕೆಸರನ್ನು ಪಾದಚಾರಿಗಳ ಮೇಲೆ ಎರೆಚುತ್ತಾ ಸಾಗುತ್ತಿವೆ. ಈ ದೃಶ್ಯಗಳು ದಿನಾಲೂ ಮರುಕಳಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ.ಸರ್ವಿಸ್ ರಸ್ತೆಗೆ ಪ್ರವೇಶಿಸುವ ಭಾಗದಲ್ಲಿ ಯಾವುದೇ ರೀತಿಯ ವೇಗ ನಿಯಂತ್ರಕಗಳನ್ನು (ಹಂಪ್ಸ್) ನಿರ್ಮಿಸಿಲ್ಲ. ಇದರಿಂದಾಗಿ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳು ಬ್ರೇಕ್ ಹಾಕದೆಯೇ ಅದೇ ರಭಸದಲ್ಲಿ ಸರ್ವಿಸ್ ರಸ್ತೆಗೆ ನುಗ್ಗುತ್ತಿವೆ. ಇದರಿಂದಾಗಿ ಒಳ ರಸ್ತೆಗಳಿಂದ ಬರುವ ವಾಹನಗಳು ಹಾಗೂ ನಡೆದುಕೊಂಡು ಹೋಗುವ ಪಾದಚಾರಿಗಳ ನಡುವೆ ಭಾರೀ ಅಪಘಾತ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ.

“ಕಾಮಗಾರಿ ನಡೆಸುವ ಗುತ್ತಿಗೆ ಸಂಸ್ಥೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ತಕ್ಷಣವೇ ಹಳೀರದ ಸರ್ವಿಸ್ ರಸ್ತೆ ಬಳಿ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಬೇಕು, ತಡೆಗೋಡೆ ನಿರ್ಮಿಸಬೇಕು ಹಾಗೂ ವಾಹನಗಳ ವೇಗಕ್ಕೆ ಬ್ರೇಕ್ ಹಾಕಲು ಹಂಪ್ಸ್ ಅಳವಡಿಸಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ” ಎಂದು ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರು ತೀವ್ರ ಎಚ್ಚರಿಕೆ ನೀಡಿದ್ದಾರೆ.

– ವಿಶೇಷ ವರದಿ, ಸಲೀಂ ಮಾಣಿ.

 

 

Leave a Reply

Discover more from

Subscribe now to keep reading and get access to the full archive.

Continue reading