ರಾಷ್ಟ್ರೀಯ ಸ್ವಯಂಸೇವಕ ಸಂಘದ ನೋಂದಾವಣೆ ಹಾಗೂ ಅದರ ಆರ್ಥಿಕ ಮತ್ತು ಸಾಂಸ್ಥಿಕ ಕಾರ್ಯವೈಖರಿಯ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಸಂಘದ ಆಂತರಿಕ ಪದ್ಧತಿಗಳು ಹಾಗೂ ಗುರುದಕ್ಷಿಣೆ ಪ್ರಕ್ರಿಯೆಯ ಕುರಿತು ಶ್ರೀ ಲಕ್ಷ್ಮೀಶ ಗಬ್ಲಡ್ಕ ಅವರು ತಮ್ಮ ವೈಯಕ್ತಿಕ ಅನುಭವ ಮತ್ತು ವಿಶ್ಲೇಷಣೆಯನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ತಮ್ಮದೀರ್ಘ ಸಂಘ ಸಹವಾಸದ ಕಾರಣ ವಸ್ತುನಿಷ್ಠವಾಗಿ ಅವರು ಮಂಡಿಸಿರುವ ಪ್ರಮುಖ ಅಂಶಗಳ ವರದಿ ಇಲ್ಲಿದೆ.
ಆರೆಸ್ಸೆಸ್ ಸಂಘಟನಾತ್ಮಕವಾಗಿ ಇಡೀ ದೇಶವನ್ನು ಸುಮಾರು 2500 ರಿಂದ 3000 ತಾಲೂಕುಗಳಾಗಿ ವಿಂಗಡಿಸಿಕೊಂಡಿದೆ. ಪ್ರತಿ ವರ್ಷ ಆಷಾಢ ಮಾಸದಲ್ಲಿ ದೇಶದ ಎಲ್ಲಾ ಬೂತ್ ಮತ್ತು ಗ್ರಾಮ ಮಟ್ಟದ ಶಾಖೆಗಳಲ್ಲಿ ಗುರುಪೂಜೆ ಕಾರ್ಯಕ್ರಮ ಜರುಗುತ್ತದೆ. ಸಂಘವು ಯಾವುದೇ ವ್ಯಕ್ತಿಯನ್ನು ಗುರುವನ್ನಾಗಿ ಸ್ವೀಕರಿಸದೆ, ಕೇಸರಿ ಧ್ವಜವನ್ನು ಗುರು ಎಂದು ನಂಬಿ ಅದಕ್ಕೆ ಪ್ರಣಾಮ ಸಲ್ಲಿಸುತ್ತದೆ. ಸ್ವಯಂಸೇವಕರು ಮುಚ್ಚಿದ ಕವರ್‌ನಲ್ಲಿ ತಮಗೆ ಸಾಧ್ಯವಿರುವ ಹಣವನ್ನು ಹಾಕಿ ಧ್ವಜದ ಮುಂದಿರುವ ತಟ್ಟೆಗೆ ಸಮರ್ಪಿಸುವುದು ಇಲ್ಲಿನ ಪದ್ಧತಿಯಾಗಿದೆ.

ಗುರುದಕ್ಷಿಣೆ ಸಂಗ್ರಹ ಮತ್ತು ಅದರ ಲೆಕ್ಕ ನಿರ್ವಹಣೆಯಲ್ಲಿ ಸಂಘವು ತನ್ನದೇ ಆದ ವಿಶಿಷ್ಟ ಮತ್ತು ರಹಸ್ಯ ನಿಯಮಗಳನ್ನು ಪಾಲಿಸಿಕೊಂಡು ಬಂದಿದೆ. ಸಾಮಾನ್ಯವಾಗಿ ದಕ್ಷಿಣೆ ಹಾಕುವ ಕವರ್‌ನ ಮೇಲಾಗಲಿ, ಒಳಗಾಗಲಿ ಸ್ವಯಂಸೇವಕರು ಹೆಸರು ಬರೆಯುವಂತಿಲ್ಲ. ಕವರ್‌ನ ಒಳಗಡೆ ಕೇವಲ ಮೊತ್ತ ಮತ್ತು ಒಂದು ಕ್ರಮಸಂಖ್ಯೆಯನ್ನು ಬರೆಯಲಾಗಿರುತ್ತದೆ. ಈ ಕ್ರಮಸಂಖ್ಯೆಯನ್ನು ಶಾಖೆಯ ಮುಖ್ಯಸ್ಥರು ಮಾತ್ರ ಪ್ರತ್ಯೇಕವಾಗಿ ಆಯಾ ವ್ಯಕ್ತಿಯ ಹೆಸರಿನ ಮುಂದೆ ದಾಖಲಿಸಿಕೊಂಡಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಹೆಸರಷ್ಟೇ ಬರೆದು, ಮೊತ್ತವನ್ನು ನಮೂದಿಸದೆ ಕೊಡುವ ಪದ್ಧತಿಯೂ ಇದೆ. ಪ್ರತಿಯೊಬ್ಬ ಸ್ವಯಂಸೇವಕನು ಪ್ರತಿ ವರ್ಷ ತನ್ನ ಗುರುದಕ್ಷಿಣೆ ಮೊತ್ತವನ್ನು ಶೇಕಡಾ 10 ರಷ್ಟು ಹೆಚ್ಚಿಸುತ್ತಾ ಹೋಗಬೇಕು ಎಂಬ ವಾಡಿಕೆ ಇದೆ.
ಸಂಗ್ರಹವಾದ ಹಣವನ್ನು ಎಲ್ಲರ ಸಮ್ಮುಖದಲ್ಲಿ ಎಣಿಸುವುದಿಲ್ಲ. ಶಾಖೆಯ ಮುಖ್ಯ ಶಿಕ್ಷಕರು, ಪ್ರಾರ್ಥನಾ ಪ್ರಮುಖ್ ಮತ್ತು ಮತ್ತೊಬ್ಬರು ಮಾತ್ರ ಸೇರಿ ಲೆಕ್ಕ ಮಾಡುತ್ತಾರೆ. ಈ ಮೊತ್ತವನ್ನು ಬಹಿರಂಗಪಡಿಸುವುದಿಲ್ಲ. ಪುಸ್ತಕದಲ್ಲಿ ಲೆಕ್ಕ ಬರೆಯುವಾಗ ದಶಾಂಶ ಪದ್ಧತಿಯನ್ನು ಬಳಸಲಾಗುತ್ತದೆ. ಅಂದರೆ 100 ರೂಪಾಯಿಯನ್ನು 10 ಎಂದೂ, 1000 ರೂಪಾಯಿಯನ್ನು 100 ಎಂದೂ ಹಾಗೂ 1 ಲಕ್ಷ ರೂಪಾಯಿಯನ್ನು 10000 ಎಂದೂ ದಾಖಲಿಸಲಾಗುತ್ತದೆ. ಈ ರಹಸ್ಯ ನಿರ್ವಹಣೆಯ ನಡುವೆಯೂ, ಸ್ಥಳೀಯ ಸ್ವಯಂಸೇವಕರು ಯಾರೂ ಒಂದು ರೂಪಾಯಿಯ ಲೆಕ್ಕವನ್ನೂ ಕೇಳುವುದಿಲ್ಲ. ಅಲ್ಲಿ ಯಾವುದೇ ರೀತಿಯ ಹಣಕಾಸಿನ ಅವ್ಯವಹಾರಗಳು ನಡೆಯುವುದಿಲ್ಲ ಎಂಬ ಗಾಢ ನಂಬಿಕೆ ಸ್ವಯಂಸೇವಕರಲ್ಲಿದೆ.

ಸಂಘದಲ್ಲಿ ಮಂಡಲ, ತಾಲೂಕು, ಜಿಲ್ಲೆ ಮತ್ತು ವಿಭಾಗ ಮಟ್ಟದಲ್ಲಿ ವಾರ್ಷಿಕ ಸಂಗ್ರಹಣೆಯ ಗುರಿಯನ್ನು ನೀಡಲಾಗುತ್ತದೆ. ಈ ಗುರಿ ನಿಗದಿಪಡಿಸುವುದರಿಂದ ಹಣದ ವಸೂಲಾತಿ ಸುಲಭವಾಗುತ್ತದೆ ಎಂಬುದು ಒಂದು ವಾದ. ತಾಲೂಕೊಂದರ ಕನಿಷ್ಠ ವಾರ್ಷಿಕ ಸಂಗ್ರಹವನ್ನು 10 ಲಕ್ಷ ರೂಪಾಯಿ ಎಂದು ಅಂದಾಜಿಸಿದರೂ, ದೇಶದ 2500 ತಾಲೂಕುಗಳಿಂದ ವಾರ್ಷಿಕವಾಗಿ ಸುಮಾರು 250 ಕೋಟಿ ರೂಪಾಯಿ ಸಂಗ್ರಹವಾಗುತ್ತದೆ. ಕಳೆದ 10 ವರ್ಷಗಳ ಅವಧಿಯಲ್ಲಿ ಕನಿಷ್ಠ 2500 ಕೋಟಿ ರೂಪಾಯಿ ಸಂಗ್ರಹವಾಗಿರಬಹುದು ಎಂಬ ಲೆಕ್ಕಾಚಾರವಿದೆ. 2005 ರ ಆಸುಪಾಸಿನಲ್ಲಿ ಮಂಗಳೂರು ಮಹಾನಗರವೊಂದರಲ್ಲೇ ತಲಾ 1 ಲಕ್ಷ ರೂಪಾಯಿ ಗುರುದಕ್ಷಿಣೆ ನೀಡುವ 100 ಕ್ಕೂ ಹೆಚ್ಚು ಜನರಿದ್ದರು. 50 ಸಾವಿರ, 25 ಸಾವಿರ ನೀಡುವವರು ಸಾವಿರಾರೂ ಸಂಖ್ಯೆಯಲ್ಲಿದ್ದರು. ಪ್ರಸ್ತುತ ದಿನಗಳಲ್ಲಿ 1 ಲಕ್ಷ ರೂಪಾಯಿ ನೀಡುವವರ ಸಂಖ್ಯೆ 250 ಕ್ಕೂ ದಾಟರಬಹುದು ಎಂದು ಅಂದಾಜಿಸಲಾಗಿದೆ. ಸಂಘವು ಅಧಿಕೃತವಾಗಿ ನೋಂದಾವಣೆ ಆಗದ ಕಾರಣ ಮತ್ತು ಪ್ಯಾನ್ ಕಾರ್ಡ್ ಇಲ್ಲದ ಕಾರಣ, ಸಾಂಪ್ರದಾಯಿಕ ಬ್ಯಾಂಕ್ ಖಾತೆಗಳನ್ನು ತೆರೆಯಲು ಸಾಧ್ಯವಾಗುವುದಿಲ್ಲ.



