
ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿ (ರಿ) ವತಿಯಿಂದ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ, ಘಟಕದ 2ನೇ ಕಾರ್ಯಕ್ರಮವಾದ ರಕ್ತದಾನ ಜಾಗೃತಿ ಕಾರ್ಯಾಗಾರ ಹಾಗೂ ರಕ್ತದಾನ ಸೇವಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜೂನ್ 16ರಂದು ಇಲ್ಲಿನ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಸುಳ್ಯ ಪಯಸ್ವಿನಿ ಘಟಕಾಧ್ಯಕ್ಷರಾದ ಜೆ.ಎಫ್.ಎಂ. ಲತಾಶ್ರೀ ಸುಪ್ರೀತ್ ಮೋಂಟಡ್ಕ ಅವರು ವಹಿಸಿದ್ದರು. ಶ್ರೀ ಶಾರದಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸ್ವರ್ಣಕಲಾ ಎ.ಎಸ್. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂಸ್ಥೆಯ ಸತ್ಕಾರ್ಯಕ್ಕೆ ಶುಭ ಹಾರೈಸಿದರು.

ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೇಸರ್ ಡಾ. ಅವಿನಾಶ್ ಎಸ್. ಅವರು ರಕ್ತದಾನ ಜಾಗೃತಿ ಕಾರ್ಯಾಗಾರದ ಉಪನ್ಯಾಸ ನಡೆಸಿ, ರಕ್ತದಾನದ ಮಹತ್ವ ಹಾಗೂ ಅದರಿಂದಾಗುವ ಪ್ರಯೋಜನಗಳ ಕುರಿತು ವಿದ್ಯಾರ್ಥಿಗಳಿಗೆ ಸವಿಸ್ತಾರವಾದ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ, ಬರೋಬ್ಬರಿ 109 ಬಾರಿ ರಕ್ತದಾನ ಮಾಡುವ ಮೂಲಕ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡು, ಸಮಾಜಕ್ಕೆ ಪ್ರೇರಣೆಯಾಗಿರುವ ಶ್ರೀ ಶೈಲೇಶ್ ಅಂಬೆಕಲ್ಲು ಅವರಿಗೆ ಜೇಸಿಐ ಸುಳ್ಯ ಪಯಸ್ವಿನಿಯ 2026ರ ರಕ್ತದಾನ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜೇಸಿಐ ಸುಳ್ಯ ಪಯಸ್ವಿನಿಯ ಸ್ಥಾಪಕ ಸದಸ್ಯರು ಹಾಗೂ ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರಿ ಸಂಘ (ನಿ.) ಪುತ್ತೂರು ಇದರ ಅಧ್ಯಕ್ಷರಾದ ಚಂದ್ರ ಕೋಲ್ಚಾರ್ ಅವರು ಸನ್ಮಾನಿತರನ್ನು ಶ್ಲಾಘಿಸಿ, ಅಭಿನಂದನಾ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷರಾದ ಪಿ.ಎಸ್. ಗಂಗಾಧರ್ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಶಾರದಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಪ್ರಸನ್ನ ಎನ್.ಎಸ್. ಸ್ವಾಗತಿಸಿದರು. ಜೇಸಿ ಪ್ರಶಾಂತ್ ಅಂಬೆಕಲ್ಲು ಜೇಸಿವಾಣಿ ವಾಚಿಸಿದರು ಮತ್ತು ಜೇಸಿ ಸತ್ಯಶಾಂತಿ ತ್ಯಾಗಮೂರ್ತಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಕಾರ್ಯಕ್ರಮದ ಸಂಚಾಲಕ ಜೇಸಿ ಮಹೇಶ್ ಮೇರ್ಕಜೆ ಅವರು ಸನ್ಮಾನಿತರ ಸನ್ಮಾನ ಪತ್ರವನ್ನು ವಾಚಿಸಿದರು. ಕಾರ್ಯದರ್ಶಿ ಜೇಸಿ ಹೆಚ್.ಜಿ.ಎಫ್. ತಾರಾ ಮಾಧವ ಚೂಂತಾರು ವಂದಿಸಿದರು.

ಈ ಮಾಹಿತಿ ಕಾರ್ಯಾಗಾರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಸಾರ್ವಜನಿಕರು ಹಾಗೂ ಜೇಸಿಐ ಸುಳ್ಯ ಪಯಸ್ವಿನಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.


