ಮದುವೆಯಾಗಿ ಕೇವಲ ಒಂದು ವಾರದಲ್ಲೇ, ಮಧ್ಯರಾತ್ರಿ ಪತಿಯ ಮೊಬೈಲ್‌ನಲ್ಲಿ ತಾನೇ ಅಲಾರಾಂ ಇಟ್ಟು ಚಿನ್ನಾಭರಣಗಳೊಂದಿಗೆ ನಿಗೂಢವಾಗಿ ನಾಪತ್ತೆಯಾಗಿದ್ದ ನವವಿವಾಹಿತೆಯ ಪ್ರಕರಣವು ಸುಖಾಂತ್ಯ ಕಂಡಿದೆ. ಕಡಬ ತಾಲೂಕಿನ ನೂಜಿಬಾಳ್ತಿಲದಿಂದ ನಾಪತ್ತೆಯಾಗಿದ್ದ ಯುವತಿಯು ಕೊನೆಗೂ ಶಿವಮೊಗ್ಗದ ತನ್ನ ತವರು ಮನೆಯಲ್ಲಿ ಪತ್ತೆಯಾಗಿದ್ದು, ಆತಂಕದಲ್ಲಿದ್ದ ಕುಟುಂಬಸ್ಥರು ಹಾಗೂ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ.
ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ನಿವಾಸಿ ಇಪ್ಪತ್ತೊಂಬತ್ತು ವರ್ಷದ ಮೊಹಮ್ಮದ್ ಆಶಿಕ್ ಎಂಬುವವರಿಗೂ, ಶಿವಮೊಗ್ಗದ ಹದಿನೆಂಟು ವರ್ಷದ ಆರ್ ಫೈನ್ ಮೆಹತಾಬ್ ಎಂಬುವವರಿಗೂ ಕಳೆದ ಮೇ ಮೂವತ್ತೊಂದರಂದು ಶಿವಮೊಗ್ಗದ ಮಸೀದಿಯೊಂದರಲ್ಲಿ ಮುಸ್ಲಿಂ ಧಾರ್ಮಿಕ ವಿಧಿವಿಧಾನದಂತೆ ವಿವಾಹವಾಗಿತ್ತು. ಜೂನ್ ಎರಡರಂದು ಕಲ್ಲುಗುಡ್ಡೆಯಲ್ಲಿ ಅದ್ಧೂರಿ ಮದುವೆ ಔತಣಕೂಟವೂ ನಡೆದಿತ್ತು. ಜೂನ್ ಆರರ ರಾತ್ರಿ ದಂಪತಿಗಳು ಊಟ ಮುಗಿಸಿ ಮಲಗಿದ್ದು, ಮಧ್ಯರಾತ್ರಿ ಹನ್ನೆರಡು ಗಂಟೆಗೆ ಪತಿ ಎದ್ದು ನೋಡಿದಾಗಲೂ ಪತ್ನಿ ಪಕ್ಕದಲ್ಲೇ ಇದ್ದಳು. ಆದರೆ ಜೂನ್ ಏಳರ ನಸುಕಿನ ಜಾವ ಸರಿಯಾಗಿ ಎರಡು ಗಂಟೆಗೆ ಆಶಿಕ್ ಅವರ ಮೊಬೈಲ್‌ನಲ್ಲಿ ದಿಢೀರನೆ ಅಲಾರಾಂ ರಿಂಗಣಿಸಿದೆ.



