ರಾಜ್ಯದಲ್ಲಿ ಗ್ಯಾಸ್ ಗೀಸರ್ ಸೋರಿಕೆಯಿಂದ ಸಂಭವಿಸುತ್ತಿರುವ ಸಾವುಗಳ ಸರಣಿ ಮುಂದುವರಿದಿದ್ದು, ಕೊಡಗು ಜಿಲ್ಲೆಯ ಸೋಮವಾರಪೇಟೆಯ ಹೋಂ ಸ್ಟೇಯೊಂದರಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ಪ್ರವಾಸಕ್ಕೆ ಬಂದಿದ್ದ ಮೈಸೂರು ಮೂಲದ ಯುವತಿಯೊಬ್ಬಳು ಸ್ನಾನದ ಕೋಣೆಯಲ್ಲೇ ಉಸಿರುಗಟ್ಟಿ ಧಾರುಣವಾಗಿ ಸಾವನ್ನಪ್ಪಿದ್ದಾಳೆ. ಮೈಸೂರಿನ ಯರಗನಹಳ್ಳಿಯ ಪಾಪಣ್ಣ ಬಡಾವಣೆಯ ನಿವಾಸಿಗಳಾದ ಜಗನ್ನಾಥ್ ಹಾಗೂ ರೇಣುಕಾ ದಂಪತಿಯ ಪುತ್ರಿ ವಿನುತಾ (27) ಮೃತಪಟ್ಟ ದುರ್ದೈವಿ.

ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬಂದಿದ್ದ ವಿನುತಾ, ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದ ಹೋಂ ಸ್ಟೇಯೊಂದರಲ್ಲಿ ತಂಗಿದ್ದರು. ಮುಂಜಾನೆ ಸ್ನಾನ ಮಾಡಲು ಬಾತ್ ರೂಮಿಗೆ ತೆರಳಿದ್ದ ಸಂದರ್ಭದಲ್ಲಿ ಗ್ಯಾಸ್ ಗೀಸರ್‌ನಿಂದ ಅನಿಲ ಸೋರಿಕೆಯಾಗಿದೆ. ದುರಂತವೆಂದರೆ, ಈಕೆ ಸ್ನಾನ ಮಾಡುತ್ತಿದ್ದ ಬಾತ್ ರೂಂನಲ್ಲಿ ಯಾವುದೇ ಕಿಟಕಿ ಅಥವಾ ವೆಂಟಿಲೇಶನ್ ಇರಲಿಲ್ಲ ಎನ್ನಲಾಗಿದೆ. ಗೀಸರ್‌ನಿಂದ ಹೊರಬಂದ ವಿಷಗಾಳಿ (ಕಾರ್ಬನ್ ಮೊನಾಕ್ಸೈಡ್) ಕೋಣೆಯ ತುಂಬಾ ಆವರಿಸಿದ್ದರಿಂದ, ಆಮ್ಲಜನಕ ಸಿಗದೆ ವಿನುತಾ ಸ್ಥಳದಲ್ಲೇ ಉಸಿರುಗಟ್ಟಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಗ್ಯಾಸ್ ಗೀಸರ್‌ಗಳಲ್ಲಿ ಎಲ್‌ಪಿಜಿ ಅನಿಲವು ಸಂಪೂರ್ಣವಾಗಿ ದಹನವಾಗದೆ ಇಂಟರ್ನಲ್ ಆಗಿ ಭಾಗಶಃ ದಹನಗೊಂಡಾಗ ಅತ್ಯಂತ ಅಪಾಯಕಾರಿ, ಬಣ್ಣ ಹಾಗೂ ವಾಸನೆ ರಹಿತ ಕಾರ್ಬನ್ ಮೊನಾಕ್ಸೈಡ್ ಅನಿಲ ಬಿಡುಗಡೆಯಾಗುತ್ತದೆ. ಮುಚ್ಚಿದ ಮತ್ತು ಗಾಳಿ-ಬೆಳಕಿನ ವ್ಯವಸ್ಥೆ ಇಲ್ಲದ ಬಾತ್‌ರೂಮ್‌ಗಳಲ್ಲಿ ಈ ಅನಿಲ ವೇಗವಾಗಿ ಹರಡುತ್ತದೆ. ವಾಸನೆ ಇಲ್ಲದಿರುವುದರಿಂದ ಜನರು ಇದನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗದೆ, ಕೆಲವೇ ನಿಮಿಷಗಳಲ್ಲಿ ಪ್ರಜ್ಞೆ ತಪ್ಪಿ ಸಾವನ್ನಪ್ಪುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ.
ಗ್ಯಾಸ್ ಗೀಸರ್ ಬಳಸುವಾಗ ಸಾರ್ವಜನಿಕರು ಹಾಗೂ ಪ್ರವಾಸಿ ತಾಣಗಳ ಮಾಲೀಕರು ಕಡ್ಡಾಯವಾಗಿ ಕೆಲವು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕೆಂದು ಆರೋಗ್ಯ ಮತ್ತು ಪೊಲೀಸ್ ಇಲಾಖೆ ಎಚ್ಚರಿಸಿದೆ. ಗ್ಯಾಸ್ ಗೀಸರ್ ಇರುವ ಸ್ನಾನದ ಕೋಣೆಗಳಲ್ಲಿ ಕಡ್ಡಾಯವಾಗಿ ಕಿಟಕಿ ಅಥವಾ ಎಕ್ಸಾಸ್ಟ್ ಫ್ಯಾನ್ ಇರಬೇಕು. ಗಾಳಿಯಾಡದ ಕೋಣೆಗಳಲ್ಲಿ ಗ್ಯಾಸ್ ಗೀಸರ್ ಅಳವಡಿಸುವುದು ಜೀವಕ್ಕೆ ಕುತ್ತು ತರಬಲ್ಲದು. ಸಾಧ್ಯವಾದಷ್ಟು ಮಟ್ಟಿಗೆ ಗ್ಯಾಸ್ ಸಿಲಿಂಡರ್ ಹಾಗೂ ಗೀಸರ್ ಘಟಕವನ್ನು ಬಾತ್ ರೂಂನ ಹೊರಭಾಗದಲ್ಲಿ ಅಳವಡಿಸಿ, ಕೇವಲ ಬಿಸಿ ನೀರಿನ ಪೈಪ್ ಲೈನ್ ಅನ್ನು ಮಾತ್ರ ಒಳಗಡೆ ತರುವುದು ಸುರಕ್ಷಿತವಾಗಿದೆ. ಗೀಸರ್ ಹಾಗೂ ಗ್ಯಾಸ್ ಪೈಪ್‌ಲೈನ್‌ಗಳನ್ನು ಕಾಲಕಾಲಕ್ಕೆ ತಜ್ಞರಿಂದ ತಪಾಸಣೆಗೆ ಒಳಪಡಿಸಿ, ಸೋರಿಕೆ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಜೊತೆಗೆ ಸ್ನಾನದ ಕೋಣೆಗೆ ತೆರಳಿದವರು ದೀರ್ಘಕಾಲದವರೆಗೆ ಹೊರಗೆ ಬಾರದಿದ್ದರೆ ಕುಟುಂಬಸ್ಥರು ತಕ್ಷಣವೇ ಗಮನ ಹರಿಸಬೇಕು.

ಸರಣಿ ದುರಂತಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ವ್ಯಕ್ತವಾಗಿದ್ದು, ಮಾನವ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ಇಂತಹ ಗ್ಯಾಸ್ ಗೀಸರ್‌ಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕು ಅಥವಾ ಕಠಿಣ ನಿಯಮಾವಳಿ ಜಾರಿಗೆ ತರಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬರುತ್ತಿದೆ.


