ಧ್ವನಿವರ್ಧಕದಲ್ಲಿ ಆಝಾನ್ ಹೇಳುತ್ತಲೇ ಕುಸಿದು ಬಿದ್ದು ಮೃತ್ಯು.

ಹೊನ್ನಾವರದ ಕಡೆಯ  ಮಸೀದಿಯೊಂದರಲ್ಲಿ ಧಾರ್ಮಿಕ ಸೇವೆ ಸಲ್ಲಿಸುತ್ತಿದ್ದ ಕುಕ್ಕಾಜೆಯ ನಿವಾಸಿ,ಧಾರ್ಮಿಕ ಪಂಡಿತರಾದ ಅಬ್ದುಲ್ ಲತೀಫ್ ಮದನಿ ಅವರು ಆಝಾನ್ (ಬಾಂಗ್) ಕರೆ ನೀಡುತ್ತಿದ್ದಾಗಲೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದ  ಘಟನೆ ಸಂಭವಿಸಿದೆ.

ತಮ್ಮ ದೈನಂದಿನ ಉದ್ಯೋಗ ಹಾಗೂ ಧಾರ್ಮಿಕ ಕರ್ತವ್ಯದ ಭಾಗವಾಗಿ ಅವರು ಮಸೀದಿಯಲ್ಲಿ ಅತ್ಯಂತ ಶ್ರದ್ಧೆಯಿಂದ ಆಝಾನ್ ಕೂಗುತ್ತಿದ್ದರು. ಈ ಪವಿತ್ರ ಕರ್ಮವನ್ನು ನಿರ್ವಹಿಸುತ್ತಿರುವಾಗಲೇ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆನ್ನಲಾಗಿದೆ. ತಕ್ಷಣವೇ ಅವರನ್ನು ರಕ್ಷಿಸಲು ಯತ್ನಿಸಲಾಯಿತಾದರೂ, ಅಷ್ಟರಲ್ಲೇ ಅವರು ಅಸುನೀಗಿದ್ದರು.

ಮೃತ ಅಬ್ದುಲ್ ಲತೀಫ್ ಮದನಿ ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು, ತಮ್ಮ ಪಾಂಡಿತ್ಯ ಹಾಗೂ ಧಾರ್ಮಿಕ ನಿಷ್ಠೆಯಿಂದಾಗಿ ಸ್ಥಳೀಯವಾಗಿ ಅಪಾರ ಗೌರವಕ್ಕೆ ಪಾತ್ರರಾಗಿದ್ದರು. ಮೃತರ ಅಕಾಲಿಕ ನಿಧನಕ್ಕೆ ಸ್ಥಳೀಯರು ಹಾಗೂ ಧಾರ್ಮಿಕ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇಹಲೋಕ ತ್ಯಜಿಸಿದ ಮೃತರು ತಮ್ಮ ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಇವರ ನಿಧನದಿಂದ ಕುಕ್ಕಾಜೆ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ನಿಮ್ಮದೊಂದು ಉತ್ತರ