ಮಗನ ಸಾವಿನ ಸುದ್ದಿ ಕೇಳಿ ತಾಯಿ ನಿಧನ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪರಿಸರದಲ್ಲಿ ತಾಯಿ ಮತ್ತು ಮಗ ಇಬ್ಬರೂ ಅಲ್ಪಾವಧಿಯ ಅಂತರದಲ್ಲಿ ಮೃತಪಟ್ಟ ಅತ್ಯಂತ ಆಘಾತಕಾರಿ ಹಾಗೂ ದುಃಖದಾಯಕ ಘಟನೆಯೊಂದು ವರದಿಯಾಗಿದೆ.

ಟೆಪ್ಪಾಲುಕಟ್ಟೆಯ  ನಾರಾಯಣ ನಾಯ್ಕರ ಪತ್ನಿ ಗಿರಿಜಾ (75 ವರ್ಷ) ಮತ್ತು ಅವರ ಪುತ್ರ ಪರಮೇಶ್ವರ ನಾಯ್ಕ (43 ವರ್ಷ) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.ಗಿರಿಜಾ ಅವರ ಪುತ್ರರಾದ ಪರಮೇಶ್ವರ ನಾಯ್ಕ ಅವರು ಆಕಸ್ಮಿಕವಾಗಿ ಬಿದ್ದು ತಲೆಗೆ ಗಂಭೀರ ಗಾಯ ಮಾಡಿಕೊಂಡಿದ್ದರು. ತಕ್ಷಣ ಅವರನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಜೂನ್ 6 ರಂದು ನಿಧನರಾದರು.

ಪರಮೇಶ್ವರ ನಾಯ್ಕ ಅವರ ಮೃತದೇಹವನ್ನು ಮನೆಗೆ ತಂದಾಗ, ಮಗನ ಸಾವಿನ ವಿಷಯ ತಿಳಿದ ತಾಯಿ ಗಿರಿಜಾ ಅವರು ತೀವ್ರ ಆಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಕುಸಿದು ಬಿದ್ದರು. ತಕ್ಷಣ ಅವರನ್ನು ಅಯ್ಯನಕಟ್ಟೆ ಕ್ಲಿನಿಕ್‌ಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ, ನಂತರ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು.

ಕುಟುಂಬದವರಿಗೆ ಮತ್ತಷ್ಟು ಆಘಾತವಾಗಬಾರದು ಎಂಬ ಕಾರಣಕ್ಕೆ ಗಿರಿಜಾ ಅವರ ಮೃತದೇಹವನ್ನು ಸುಳ್ಯದ ಶೈತ್ಯಾಗಾರದಲ್ಲಿ ಇರಿಸಲಾಗಿತ್ತು. ಮೃತರ ಅಳಿಯ ಗಣೇಶ್ ಅವರು ಲಡಾಖ್‌ನಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರು ಊರಿಗೆ ಆಗಮಿಸಿದ ಬಳಿಕ ಜೂನ್ 8 ರಂದು ಗಿರಿಜಾ ಅವರ ಮೃತದೇಹವನ್ನು ಸ್ವಗೃಹಕ್ಕೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಮಗನ ಸಾವಿನ ಬೆನ್ನಲ್ಲೇ ತಾಯಿಯೂ ಮೃತಪಟ್ಟಿರುವುದು ಇಡೀ ಕುಟುಂಬವನ್ನು ತೀವ್ರ ಶೋಕದಲ್ಲಿ ಮುಳುಗಿಸಿದೆ. ಮೃತ ಗಿರಿಜಾ ಅವರು ಸದ್ಯ ಒಂದು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading