ಕೌಟುಂಬಿಕ ಜೀವನ ಅಡ್ಜಸ್ಟ್ ಮೆಂಟ್ ಸೂಸೈಡ್ ಡಿವೋರ್ಸ್ ಗಳ ಬಗೆಗೊಂದಿಷ್ಟು..

ಕಳೆದ ಒಂದು ತಿಂಗಳಿನಿಂದ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿ ಮಾಡಿದ  ಆತ್ಮಹತ್ಯೆಯ ವರದಿಗಳನ್ನು ಗಮನಿಸಿದರೆ, ಕೌಟುಂಬಿಕ ಕಲಹಗಳ ಕಾರಣದಿಂದಲೇ  ಹೆಚ್ಚು ಜನ ಪ್ರಾಣ ಕಳೆದುಕೊಂಡಿರುವುದು ಸ್ಪಷ್ಟವಾಗುತ್ತದೆ.

ಈ ದುರಂತಗಳನ್ನು ಕೇವಲ ಭಾವನಾತ್ಮಕವಾಗಿ ನೋಡುವುದಕ್ಕಿಂತ, ಇದರ ಹಿಂದಿರುವ ಸಾಮಾಜಿಕ ಮತ್ತು ಮಾನಸಿಕ ಅಂಶಗಳನ್ನು ವಿಶ್ಲೇಷಿಸಬೇಕಾದ ತುರ್ತು ಇಂದಿದೆ. ಸಾಮಾನ್ಯವಾಗಿ ಆತ್ಮಹತ್ಯೆ ಎಂದರೆ ಮಹಿಳೆಯರ ಸಂಕಷ್ಟಗಳೇ ಮುನ್ನೆಲೆಗೆ ಬರುತ್ತವೆ. ಆದರೆ ಅಂಕಿ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪುರುಷರ ಆತ್ಮಹತ್ಯೆಯಲ್ಲೂ ಕೌಟುಂಬಿಕ ಸಮಸ್ಯೆಗಳದ್ದೇ ಸಿಂಹಪಾಲು ಇದೆ. ದುರಂತವೆಂದರೆ, ಗಂಡಸೊಬ್ಬ ಆತ್ಮಹತ್ಯೆ ಮಾಡಿಕೊಂಡಾಗ ಸಮಾಜ ಅದನ್ನು ಮೇಲ್ನೋಟಕ್ಕೆ ಹಣಕಾಸಿನ ಬಿಕ್ಕಟ್ಟು ಎಂದು ಸರಳೀಕರಿಸಿಬಿಡುತ್ತದೆ. ಆದರೆ ಆರ್ಥಿಕ ನಷ್ಟಕ್ಕಿಂತ ಹೆಚ್ಚಾಗಿ, ಆ ನಷ್ಟದ ಸಂದರ್ಭದಲ್ಲಿ ಸ್ವಂತ ಕುಟುಂಬದೊಳಗೆ ಸಿಗಬೇಕಾದ ಮಾನಸಿಕ ಬೆಂಬಲ ಸಿಗದೆ, ಒಂಟಿತನ ಮತ್ತು ಕೌಟುಂಬಿಕ ಒತ್ತಡದಿಂದ ವ್ಯಕ್ತಿ ಸಂಪೂರ್ಣವಾಗಿ ಕುಗ್ಗಿ ಹೋಗಿರುತ್ತಾನೆ ಎಂಬುದನ್ನು ನಾವು ಮರೆತುಬಿಡುತ್ತೇವೆ.

ಇಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ  ಸಂವಹನದ ಕೊರತೆ. ಕಷ್ಟದಲ್ಲಿರುವ ವ್ಯಕ್ತಿ ತನ್ನ ನೋವನ್ನು ಆಪ್ತರ ಬಳಿ ಹೇಳಿಕೊಂಡಿರುವುದಿಲ್ಲವೇ ಎಂಬ ಪ್ರಶ್ನೆ ಎದುರಾಗುತ್ತದೆ. ಹೇಳಿರುತ್ತಾರೆ. ಆದರೆ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಕೌಟುಂಬಿಕ ಸಮಸ್ಯೆಗಳಿಗೆ ಸಿಗುವ ಪ್ರತಿಕ್ರಿಯೆಗಳು ತುಂಬಾ ಸಾಂಪ್ರದಾಯಿಕವಾದವು. ಎಲ್ಲಾ ಕಡೆಯೂ ಇರೋದೇ, ಸ್ವಲ್ಪ ಅಡ್ಜಸ್ಟ್ ಮಾಡ್ಕೋಬೇಕು ಎನ್ನುವ ತೇಪೆ ಹಚ್ಚುವ ಸಾಂತ್ವನಗಳು ದೊರೆಯುತ್ತವೆಯೇ ಹೊರತು, ಸಮಸ್ಯೆಯ ಮೂಲ ಕಾರಣವನ್ನು ಹುಡುಕಿ ತಾರ್ಕಿಕ ಪರಿಹಾರ ಕಂಡುಕೊಳ್ಳುವ ಗಂಭೀರ ಪ್ರಯತ್ನಗಳು ನಡೆಯುವುದೇ ಇಲ್ಲ. ಈ ನಿರಂತರ ನಿರ್ಲಕ್ಷ್ಯವೇ ವ್ಯಕ್ತಿಯನ್ನು ಅಸಹಾಯಕತೆಯ ಕೊನೆಗೆ ತಲುಪಿಸುತ್ತದೆ.
ಇದರೊಂದಿಗೆ, ಇಂದಿನ ಡಿಜಿಟಲ್ ಯುಗದ ಕೃತಕ ಬದುಕು ಕೂಡ ಈ ಬಿಕ್ಕಟ್ಟನ್ನು ತೀವ್ರಗೊಳಿಸುತ್ತಿದೆ.

ಸಾಮಾಜಿಕ ಜಾಲತಾಣಗಳು ಮತ್ತು ವಾಟ್ಸಾಪ್ ಸ್ಟೇಟಸ್‌ಗಳು ಸೃಷ್ಟಿಸಿರುವ ಭ್ರಮಾಲೋಕದಲ್ಲಿ ಪ್ರತಿಯೊಬ್ಬರೂ ತಮ್ಮ ಬದುಕಿನ ಅತ್ಯುತ್ತಮ ಕ್ಷಣಗಳನ್ನು ಮಾತ್ರ ಪ್ರದರ್ಶಿಸುತ್ತಿದ್ದಾರೆ. ಈ ಕೃತಕ ಜಗತ್ತನ್ನು ವಾಸ್ತವ ಎಂದು ನಂಬುವ ಸಾಮಾನ್ಯ ಮನಸ್ಸುಗಳು, ತಮ್ಮ ಕೌಟುಂಬಿಕ ಕಹಿ ಸತ್ಯಗಳನ್ನು ಅದಕ್ಕೆ ಹೋಲಿಸಿಕೊಂಡು ತೀವ್ರವಾದ ಕೀಳರಿಮೆಗೆ ಒಳಗಾಗುತ್ತಿವೆ.

ಬದುಕನ್ನು ಕೊನೆಗಾಣಿಸಿಕೊಳ್ಳುವ ಪರಮಾವಧಿ ನಿರ್ಧಾರಕ್ಕಿಂತ, ಪರಸ್ಪರ ಒಪ್ಪಿಗೆಯಾಗದ ಸಂಬಂಧದಿಂದ ಗೌರವಯುತವಾಗಿ ಹೊರಬರುವ ವಿಚ್ಛೇದನ ತಾರ್ಕಿಕವಾಗಿ ಎಷ್ಟೋ ಉತ್ತಮ. ಆದರೆ ಇಲ್ಲಿ ಮುಖ್ಯ ಅಡ್ಡಿಯಾಗಿರುವುದು ಸಮಾಜದ ದೃಷ್ಟಿಕೋನ. ವಿಚ್ಛೇದನ ಪಡೆದರೆ ಸಮಾಜ ಎದುರಿಸುವುದು ಹೇಗೆ ಎನ್ನುವ ಸಾಮಾಜಿಕ ಭಯ ಇಂದಿಗೂ ಅನೇಕರನ್ನು ನರಕಸದೃಶ ಬದುಕಿನಲ್ಲಿ ಮುಂದುವರಿಯುವಂತೆ ಅಥವಾ ಪ್ರಾಣ ಕಳೆದುಕೊಳ್ಳುವಂತೆ ಒತ್ತಾಯಿಸುತ್ತಿದೆ. ವಿಚ್ಛೇದಿತರನ್ನು ಕೀಳಾಗಿ ನೋಡುವ ಸಮಾಜದ ದೃಷ್ಟಿಕೋನ ಬದಲಾಗಬೇಕಿದೆ.

ಮದುವೆಯಾಯಿತು ಎಂದರೆ ಮುಗಿಯಿತು, ಇನ್ನುಳಿದ ಬದುಕನ್ನು ಅನುಭವಿಸಲೇಬೇಕು ಎನ್ನುವ ಸಾಂಪ್ರದಾಯಿಕ ಹಠಮಾರಿತನಕ್ಕಿಂತ, ಬದುಕನ್ನು ಸಕಾರಾತ್ಮಕವಾಗಿ ಮರುರೂಪಿಸಿಕೊಳ್ಳುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇರಬೇಕು.

ಕೊನೆಯದಾಗಿ, ಪೋಷಕರ ಪಾತ್ರವೂ ಇಲ್ಲಿ ವಿಶ್ಲೇಷಣೆಗೆ ಒಳಪಡಬೇಕಾಗುತ್ತದೆ. ಮದುವೆಯ ನಂತರವೂ ತಮ್ಮ ಮಕ್ಕಳ ಮಾನಸಿಕ ಏರುಪೇರುಗಳಿಗೆ, ಅವರ ಅಹವಾಲುಗಳಿಗೆ ಸೂಕ್ತವಾಗಿ ಸ್ಪಂದಿಸುವ ಮುಕ್ತ ವಾತಾವರಣ ಮನೆಯಲ್ಲಿ ಇರಬೇಕು. ಕೇವಲ ಸಂಸಾರ ಉಳಿಸಬೇಕು ಎನ್ನುವ ಸಾಮಾಜಿಕ ಪ್ರತಿಷ್ಠೆಗಿಂತ ಮಗನ ಅಥವಾ ಮಗಳ ಜೀವ ಮುಖ್ಯ ಎನ್ನುವ ಪ್ರಾಯೋಗಿಕ ಆಲೋಚನೆ ಪೋಷಕರಲ್ಲಿ ಬಂದರೆ, ದುರಂತದ ನಂತರ ಮರುಕಪಡುವುದನ್ನು ದೊಡ್ಡ ಮಟ್ಟದಲ್ಲಿ ತಪ್ಪಿಸಬಹುದು.

ಅಂತಿಮವಾಗಿ, ಸಾವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ; ಸಂಬಂಧಗಳ ಮರುಮೌಲ್ಯಮಾಪನ ಮತ್ತು ಮುಕ್ತ ಸಂವಹನ ಇಂದಿನ ತುರ್ತು ಅಗತ್ಯವಾಗಿದೆ.

-ಸಾಹುಕಾರ್ ಅಚ್ಚು

Leave a Reply

Discover more from

Subscribe now to keep reading and get access to the full archive.

Continue reading