ಅದೇಕೋ ಇತ್ತೀಚಿನ ದಿನಗಳಲ್ಲಿ ಸುತ್ತಲಿನ ಜಗತ್ತನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದಂತೆ, ನಮ್ಮ ನಡುವೆ ಬದುಕುತ್ತಿರುವ ಮನುಷ್ಯರಲ್ಲಿ ಎರಡು ವಿಭಿನ್ನ ಲೋಕಗಳು ಎದ್ದು ಕಾಣಿಸುತ್ತವೆ. ಕೆಲವೊಮ್ಮೆ ಹೀಗೇ ಆಲೋಚನೆಯಲ್ಲಿ ಮುಳುಗಿಹೋದಾಗ ಕಂಡುಕೊಂಡ ಸತ್ಯ ಇದು.
ನಮ್ಮ ನಡುವೆ ಒಂಟೆಪಕ್ಷಿಗಳಂತಿರುವ ಕೆಲವು ಮನುಷ್ಯರಿದ್ದಾರೆ. ಮರುಭೂಮಿಯಲ್ಲಿ ಎಷ್ಟೇ ದೊಡ್ಡ ಬಿರುಗಾಳಿ ಬೀಸಿದರೂ, ಅದರಿಂದ ತಪ್ಪಿಸಿಕೊಳ್ಳಲು ಮರಳಿನಲ್ಲಿ ತಲೆ ಬಚ್ಚಿಟ್ಟುಕೊಂಡು ‘ನನಗೇನೂ ಆಗಿಲ್ಲ’ ಎಂದುಕೊಳ್ಳುವ ಒಂಟೆಪಕ್ಷಿಯ ಸ್ವಭಾವ ಅವರದ್ದು. ಸುತ್ತಲಿರುವ ಇಡೀ ಜಗತ್ತೇ ಸುಟ್ಟು ಉರಿದರೂ, ತನ್ನ ಆಶಯ, ತನ್ನ ಮನೆ ಸುರಕ್ಷಿತವಾಗಿದ್ದರೆ ಸಾಕು, ಬೇರೇನನ್ನೂ ಅವರು ಗಣಿಸುವುದೇ ಇಲ್ಲ. ಹಸಿವಿನಿಂದ ಕಂಗಾಲಾದವರ ಆಕ್ರಂದನವಾಗಲಿ, ನೋವಿನಿಂದ ನರಳುವವರ ಕಣ್ಣೀರಾಗಲಿ ಹುಟ್ಟಿದ ಜಾತಿಯ ಕಾರಣಕ್ಕೆ ಅನುಭವಿಸುವ ಅವಮಾನವಾಗಲಿ, ಯಾರೋ ತಮ್ಮ ಕಡೆಯವರು ಭೂತಕಾಲದಲ್ಲಿ ಮಾಡಿದ ಅತಿರೇಕಗಳ ಕಾರಣ ಕಾಲಕಾಲಕ್ಕೆ ಅನುಮಾನಿತರಾಗಿ ಮನಸೊಳಗೇ ನೋವುಣ್ಣುವವರ ಸ್ಥಿತಿಯಾಗಲೀ ಅವರ ಮನಸ್ಸನ್ನು ತಟ್ಟುವುದೇ ಇಲ್ಲ. ಇತರರ ಕಣ್ಣೀರಿಗೆ ಒಂದು ಹನಿ ನೀರಿನ ಬೆಲೆಯನ್ನೂ ನೀಡದ ಇವರ ಜಗತ್ತು, ಕೇವಲ ‘ನಾನು’, ‘ನನ್ನದು’ ಎಂದಷ್ಟೇ ಶುರುವಾಗಿ ಅಲ್ಲಿಗೇ ಅಂತ್ಯವಾಗುತ್ತದೆ. ಸ್ವಾರ್ಥದ ಪರಾಕಾಷ್ಠೆ ಎಂದರೆ ಇದೇ ಇರಬೇಕು. ಆದರೆ ಅದೇ ಒಂಟೆಪಕ್ಷಿಗೆ ಗೊತ್ತಿಲ್ಲ. ಊರಿಗೆ ಬೆಂಕಿ ಹಿಡಿದರೆ ತಾನೂ ಸುಟ್ಟು ಹೋಗುತ್ತೇನೆಂದು!
ಆದರೆ, ಇದಕ್ಕೆ ತದ್ವಿರುದ್ಧವಾಗಿ ಬದುಕುವ ಕೆಲವು ಸಾಮಾನ್ಯ ಮನುಷ್ಯರನ್ನೂ ನೋಡುತ್ತೇವೆ. ಇವರ ಬದುಕು ಹಾಗಿರುವುದಿಲ್ಲ. ತಮ್ಮ ಸ್ವಂತ ಸಮಸ್ಯೆಗಳ ಬೆಟ್ಟದ ಆಚೆಗೂ, ತಮಗೆ ಆಪ್ತರಾದವರ ಕಷ್ಟಗಳನ್ನು ತಮ್ಮ ಹೆಗಲ ಮೇಲೆ ಹೊತ್ತು ನಡೆಯುವ ಗುಣ ಇವರದ್ದು. ರಾತ್ರಿಯಿಡೀ ಹಾಸಿಗೆಯ ಮೇಲೆ ಎಷ್ಟೇ ಹೊರಳಾಡಿದರೂ ಇತರರ ಚಿಂತೆಯಲ್ಲಿ ಇವರಿಗೆ ನಿದ್ದೆ ಬರುವುದಿಲ್ಲ.
ಇನ್ನು ಕೆಲವು ಜನಗಳಂತೂ ಯಾವುದೇ ದೊಡ್ಡ ವೈಯಕ್ತಿಕ ಸಮಸ್ಯೆಗಳಿಲ್ಲದಿದ್ದರೂ ಇವರ ಮನಸ್ಸು ನೆಮ್ಮದಿಯಾಗಿರುವುದಿಲ್ಲ. ಹಗಲಿನಲ್ಲಿ ರಸ್ತೆಯಲ್ಲಿ ಕಂಡ ಕರುಳು ಕರಗಿಸುವ ಯಾವುದೋ ಒಂದು ದೃಶ್ಯ, ಪತ್ರಿಕೆಯಲ್ಲೋ ಅಥವಾ ಟಿವಿಯಲ್ಲೋ ಪ್ರಸಾರವಾದ ಯಾವತ್ತೂ ನೋಡಿಯೇ ಇರದ ಅಪರಿಚಿತ ಮನುಷ್ಯರ ನೋವಿನ ಸುದ್ದಿಗಳು ಇವರ ನಿದ್ದೆಗೆಡಿಸುತ್ತವೆ. ಮೈಲುಗಳಷ್ಟು ದೂರದಲ್ಲಿ ಎಲ್ಲೋ ಇರುವ, ಇನ್ಯಾವತ್ತೂ ನೋಡುವ ಸಾಧ್ಯತೆಯೇ ಇಲ್ಲದ ಯಾರೋ ಒಬ್ಬರ ಸಂಕಟವೂ ಇವರ ಸ್ವಂತ ಸಂಕಟವಾಗಿಬಿಡುತ್ತದೆ; ಅದನ್ನು ನೆನೆದು ಇವರ ಕಣ್ಣುಗಳು ತೇವವಾಗುತ್ತವೆ.
ಅತ್ತ ಸ್ವಾರ್ಥಿ ಮನುಷ್ಯರು ಹಾಸಿಗೆಗೆ ಒರಗುವ ಮುನ್ನವೇ ಸುಖವಾಗಿ ನಿದ್ದೆಗೆ ಜಾರುತ್ತಾರೆ. ಯಾಕೆಂದರೆ ತಮ್ಮದಲ್ಲದ ಯಾವುದೇ ಸಮಸ್ಯೆ ಅವರನ್ನು ಬಾಧಿಸುವುದೇ ಇಲ್ಲವಲ್ಲ! ಅವರು ಸುಖಭೋಗದಲ್ಲಿ ತೇಲುತ್ತಾ ನಿದ್ದೆ ಮಾಡುತ್ತಿರುವಾಗ, ಇತ್ತ ಸಹಜೀವಿಗಳ ನೋವನ್ನು ಎದೆಗೆ ಅಪ್ಪಿಕೊಳ್ಳುತ್ತಾ ನಿದ್ದೆಯಿಲ್ಲದೆ ಕಣ್ಣು ತೆರೆದು ಮಲಗುವ ಹಲವಾರು ಜೀವಗಳು ನಮ್ಮ ನಡುವೆ ಇವೆ.
ಒಂಟಿಯಾಗುವ ರಾತ್ರಿಗಳಲ್ಲಿಯೂ ನೆಮ್ಮದಿಯಿಂದ ಮಲಗಲಾಗದೆ, ಇತರರ ಕಷ್ಟಗಳಿಗಾಗಿ ಕರಗುವ ಮರುಗುವ ಆರ್ದ್ರ ಹೃದಯಗಳು ಇನ್ನೂ ಈ ಲೋಕದಲ್ಲಿ ಇದೆ. ‘ತೋರಿಕೆಯ ಆಧ್ಯಾತ್ಮ’ಜಪತಪ ಪೂಜೆ ನಮಾಜುಗಳಲ್ಲಿ ಮುಳುಗಿ ತನಗಾಗಿ ಮಾತ್ರ ದೇವರಲ್ಲಿ ಕೈ ಎತ್ತಿ ಬೇಡುವ, ಆದರೆ ತನ್ನ ಕಣ್ಮುಂದೆಯೇ ಕೈಚಾಚುವವನೆಡೆಗೆ ತಿರುಗಿಯೂ ನೋಡದವರಿಂದಲ್ಲ, ಯಾರದ್ದೋ ಕಷ್ಟಕ್ಕೆ ಮರುಗುತ್ತಾ ಅವರ ಭಾರಗಳಿಗೆ ಹೆಗಲಾಗುತ್ತಾ ಹೀಗೇ ಬದುಕಲ್ಲಿಸಾರ್ಥಕತೆ ಕಂಡುಕೊಳ್ಳಲು ಬಯಸುವ ಜನರಿರುವುದರಿಂದಲೇ ಕರುಣೆಯ ಸೆಲೆ ಈ ಭೂಮಿಯಲ್ಲಿ ಇಂದಿಗೂ ಬತ್ತಿಹೋಗದೆ ಜೀವಂತವಾಗಿ ಉಳಿದಿರುವುದು!

