ಕೇರಳ ವಿಧಾನಸಭೆಯಲ್ಲಿ ಬಸವಣ್ಣನ ವಚನ ವೈಭವ: ಮತ್ತೆ ಕನ್ನಡ ಪ್ರೇಮ ಮೆರೆದ ಶಾಸಕ ಎ.ಕೆ.ಎಂ ಅಶ್ರಫ್‌

ತಿರುವನಂತಪುರಂ: ಕೇರಳ ವಿಧಾನಸಭೆಯು ಮತ್ತೊಮ್ಮೆ ಕನ್ನಡದ ಸಾಹಿತ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ಮಂಜೇಶ್ವರ ಕ್ಷೇತ್ರದ ಶಾಸಕ ಎ.ಕೆ.ಎಂ ಅಶ್ರಫ್ (Akm Ashraf) ಅವರು ತಮ್ಮ ಭಾಷಣದಲ್ಲಿ ಜಗದ್ಗುರು ಬಸವಣ್ಣನವರ ಪ್ರಸಿದ್ಧ ವಚನಗಳನ್ನು ಉಲ್ಲೇಖಿಸುವ ಮೂಲಕ ಸದನದಲ್ಲಿ ಕನ್ನಡದ ಕಲರವ ಮೂಡಿಸಿದ್ದಾರೆ. ಈ ಮೂಲಕ ಗಡಿನಾಡಿನಲ್ಲಿ ತಮ್ಮ ಕನ್ನಡ ಪ್ರೇಮವನ್ನು ಎತ್ತಿ ಹಿಡಿದಿರುವ ಶಾಸಕರು, ಕನ್ನಡಿಗರ ಹೃದಯ ಗೆದ್ದಿದ್ದಾರೆ.ಈ ಬಾರಿಯ ಕೇರಳ ಅಸೆಂಬ್ಲಿಯ ಮೊದಲ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಶಾಸಕ ಅಶ್ರಫ್, ಸಮಾಜದಲ್ಲಿ ಸೌಹಾರ್ದತೆಯ ಅಗತ್ಯವನ್ನು ಪ್ರತಿಪಾದಿಸಲು 12ನೇ ಶತಮಾನದ ಕ್ರಾಂತಿ ಯೋಗಿ ಬಸವಣ್ಣನವರ ವಚನವನ್ನು ಆಶ್ರಯಿಸಿದರು.

ತಮ್ಮ ಭಾಷಣದ ಆರಂಭದಲ್ಲಿ:”ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ,ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ,ನಿಮ್ಮ ಮನೆಯ ಮಗನೆಂದೆನಿಸಯ್ಯಾ ಕೂಡಲಸಂಗಮದೇವಾ…”ಎಂಬ ವಿಶ್ವಮಾನವ ಸಂದೇಶದ ವಚನವನ್ನು ಸದನದಲ್ಲಿ ಅತ್ಯಂತ ಹೆಮ್ಮೆಯಿಂದ ವಾಚಿಸಿದರು. ಜಾತಿ-ಮತಗಳ ಬೇಧ ಮರೆತು ಎಲ್ಲರನ್ನೂ ಒಂದೇ ಎಂದು ಕಾಣುವ ಈ ವಚನದ ಮೂಲಕ ಅವರು ಕೇರಳ ವಿಧಾನಸಭೆಯಲ್ಲಿ ಕೋಮು ಸೌಹಾರ್ದತೆಯ ಪಾಠ ಬೋಧಿಸಿದ್ದು ವಿಶೇಷವಾಗಿತ್ತು.ಮಾತನಾಡುವ ಶೈಲಿ ಮತ್ತು ಸತ್ಯಶುದ್ಧ ಕಾಯಕದ ಮಹತ್ವವನ್ನು ಸಾರುತ್ತಾ, ಭಾಷಣದ ಅಂತ್ಯದಲ್ಲಿ ಬಸವಣ್ಣನವರ ಮತ್ತೊಂದು ಪ್ರಸಿದ್ಧ ವಚನವನ್ನು ಶಾಸಕರು ಉಲ್ಲೇಖಿಸಿದರು:

“ನುಡಿದರೆ ಮುತ್ತಿನ ಹಾರದಂತಿರಬೇಕು,
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು,
ನುಡಿದರೆ ಸ್ಪಟಿಕದ ಶಲಾಖೆಯಂತಿರಬೇಕು,
ನುಡಿದರೆ ಲಿಂಗ ಮೆಚ್ಚಿ ನಟ,
ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮನೆಂತೊಲಿವನಯ್ಯಾ…”ಮಾತು ಮತ್ತು ಕೃತಿ ಒಂದಾಗಿದ್ದರೆ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂಬ ಸಂದೇಶದೊಂದಿಗೆ ಅವರು ತಮ್ಮ ಮಾತುಗಳನ್ನು ಮುಗಿಸಿದರು.ಶಾಸಕ ಅಶ್ರಫ್ ಅವರಿಗೆ ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲಿರುವ ಗೌರವ ಇಂದಿನದಲ್ಲ. ಈ ಹಿಂದಿನ ಅವಧಿಯಲ್ಲೂ ಹಾಗೂ ಈ ಬಾರಿಯೂ ಅವರು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಇದೇ ಕನ್ನಡ ಭಾಷೆಯಲ್ಲಿ. ಆ ಮೂಲಕ ತಾವು ‘ಕನ್ನಡ ತಾಯಿಯ ವರಪುತ್ರ’ ಎಂಬುದನ್ನು ಅವರು ಪದೇ ಪದೇ ಸಾಬೀತುಪಡಿಸುತ್ತಾ ಬಂದಿದ್ದಾರೆ.

ಕಳೆದ ಅಸೆಂಬ್ಲಿ ಕಲಾಪಗಳಲ್ಲೂ ಅವರು ಕನ್ನಡದ ಮೊದಲ ರಾಷ್ಟ್ರಕವಿ, ಮಂಜೇಶ್ವರದ ಹೆಮ್ಮೆಯ ಕವಿ ಗೋವಿಂದ ಪೈ ಅವರ ಕಾವ್ಯಗಳನ್ನು ಆಗಾಗ ಉಲ್ಲೇಖಿಸಿ ಗಮನ ಸೆಳೆಯುತ್ತಿದ್ದರು. ಇದೀಗ ಕೇರಳದ ಸದನದಲ್ಲಿ ಕನ್ನಡದ ವಚನ ಸಾಹಿತ್ಯದ ಸುಧೆ ಹರಿಸುವ ಮೂಲಕ ಗಡಿನಾಡ ಕನ್ನಡಿಗರ ಅಸ್ಮಿತೆಯನ್ನು ಮತ್ತಷ್ಟು ಎತ್ತಿಹಿಡಿದಿದ್ದಾರೆ. ಶಾಸಕರ ಈ ಕಾರ್ಯಕ್ಕೆ ಕರ್ನಾಟಕ ಮತ್ತು ಕೇರಳದ ಗಡಿಭಾಗದ ಕನ್ನಡಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

Leave a Reply

Discover more from

Subscribe now to keep reading and get access to the full archive.

Continue reading