ವಿವಾಹವಾದ 39ನೇ ದಿನ 19 ರ ಯುವತಿ ಆತ್ಮಹತ್ಯೆ: ಕೂದಲಿನ ಬಗೆಗೂ ಕೊಂಕು ನುಡಿ

ವಿವಾಹವಾದ 39ನೇ ದಿನಕ್ಕೆ 19 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಪತಿ ಮತ್ತು ಆತನ ಕುಟುಂಬದವರ ವಿರುದ್ಧ ಯುವತಿಯ ಕುಟುಂಬಸ್ಥರು ಗಂಭೀರ ಗೃಹ ಹಿಂಸೆಯ ದೂರು ನೀಡಿದ್ದಾರೆ.

ಕೇರಳದ ಆಲಪ್ಪುಳ ಜಿಲ್ಲೆಯ  ಪುನ್ನಪ್ರ  ಮುಹಮ್ಮದ್ ನೌಫಲ್ ಎಂಬಾತನ ಪತ್ನಿ ಫಾತಿಮಾ ಮೃತಪಟ್ಟ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಪತಿ ಮುಹಮ್ಮದ್ ನೌಫಲ್, ಅತ್ತೆ ರುಮೈಲತ್ ಮತ್ತು ಪತಿಯ ಸಹೋದರಿ ಬೀಮಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ಏಪ್ರಿಲ್ 19 ರಂದು ಫಾತಿಮಾ ಮತ್ತು ಮುಹಮ್ಮದ್ ನೌಫಲ್ ಅವರ ವಿವಾಹ ನಡೆದಿತ್ತು. ಕಳೆದ ತಿಂಗಳು 28ರ ರಾತ್ರಿ ಫಾತಿಮಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಕ್ರೀದ್ ಹಬ್ಬದ ಆಚರಣೆಗಾಗಿ ಫಾತಿಮಾ ತನ್ನ ಪತಿ ಮುಹಮ್ಮದ್ ನೌಫಲ್ ಜೊತೆ ತವರಿಗೆ ಬಂದಿದ್ದರು. ಈ ವೇಳೆ ಪತಿಗೆ ಬಂದ ಒಂದು ಫೋನ್ ಕರೆಯ ನಂತರ ಆತ ಮನೆಯಿಂದ ಹೊರಗೆ ಹೋಗಿದ್ದನು. ಫಾತಿಮಾ ನಿರಂತರವಾಗಿ ಪತಿಯೊಂದಿಗೆ ಫೋನ್‌ನಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದಳು. ಕೊನೆಯದಾಗಿ ಪತಿ ನೌಫಲ್ ಮಾಡಿದ ಫೋನ್ ಕರೆಯ ಬೆನ್ನಲ್ಲೇ ಫಾತಿಮಾ ನೇಣಿಗೆ ಶರಣಾಗಿದ್ದಾಳೆ. ಮೃತಪಡುವ ಸಮಯದಲ್ಲಿ ಫಾತಿಮಾ ಗರ್ಭಿಣಿಯಾಗಿದ್ದರು.

ವಿವಾಹವಾದ ಮೊದಲ ದಿನಗಳಿಂದಲೇ ಪತಿ ಮತ್ತು ಆತನ ಕುಟುಂಬಸ್ಥರು ತನಗೆ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಫಾತಿಮಾ ಅವರ ಸಹೋದರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ತಲೆಯಲ್ಲಿ ಕೂದಲು ಕಡಿಮೆ ಇದೆ ಎಂಬ ಕಾರಣಕ್ಕೆ ಪತಿ ಮತ್ತು ಆತನ ಮನೆಯವರು ಆಕೆಯನ್ನು ನಿರಂತರವಾಗಿ ನಿಂದಿಸುತ್ತಿದ್ದರು. ಮನೆ ಮಾತ್ರವಲ್ಲದೆ ರೈಲು, ಬಸ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲೂ ಇತರರ ಮುಂದೆ ಫಾತಿಮಾಳನ್ನು ಅವಮಾನಿಸುತ್ತಿದ್ದರು.
ಇದಲ್ಲದೆ ಫಾತಿಮಾಗೆ ದೆವ್ವ ಹಿಡಿದಿದೆ ಎಂದು ಹೇಳಿ ಆಲಪ್ಪುಳದಲ್ಲಿರುವ ಉಸ್ತಾದ್ ಬಳಿ ಚಿಕಿತ್ಸೆಗೆ ಕರೆದೊಯ್ದಿದ್ದರು ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿವಾಹದ ಸಮಯದಲ್ಲಿ ಯುವತಿಯ ಕುಟುಂಬದವರು 11.5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ನೀಡಿದ್ದರೂ, ಅದು ಕಡಿಮೆಯಾಗಿದೆ ಎಂದು ಅತ್ತೆ ಮತ್ತು ಪತಿಯ ಸಹೋದರಿ ಆಕ್ಷೇಪಿಸಿದ್ದರು. ಅಷ್ಟೇ ಅಲ್ಲದೆ, ಅದು ಅಸಲಿ ಚಿನ್ನ ಹೌದೇ ಎಂದು ಖಚಿತಪಡಿಸಿಕೊಳ್ಳಲು ಆಭರಣಗಳನ್ನು ಉಜ್ಜಿ ನೋಡಿದ್ದರು.
ಪತಿ ಮುಹಮ್ಮದ್ ನೌಫಲ್‌ಗೆ ಮತ್ತೊಬ್ಬ ಯುವತಿಯೊಂದಿಗೆ ಸಂಬಂಧ ಇರುವುದು ಫಾತಿಮಾಗೆ ತಿಳಿದಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ಪತಿ ನೌಫಲ್ ಆಕೆಯನ್ನು ಮಧ್ಯರಾತ್ರಿ 2 ಗಂಟೆಗೆ ಮನೆಯಿಂದ ಹೊರಹಾಕಿದ್ದನು. ಈ ವಿಷಯವನ್ನು ಫಾತಿಮಾ ತನ್ನ ಕುಟುಂಬದವರಿಗೂ ತಿಳಿಸಿದ್ದಳು. ಆಲಪ್ಪುಳದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನೌಫಲ್, ಆ ಅಂಗಡಿ ತನ್ನದೇ ಎಂದು ಸುಳ್ಳು ಹೇಳಿ ಮದುವೆಯಾಗಿದ್ದನು. ಹೆಚ್ಚಿನ ವರದಕ್ಷಿಣೆ ಕೇಳಿ ಆಕೆಗೆ ಮಾನಸಿಕವಾಗಿ ಪೀಡಿಸುತ್ತಿದ್ದನೆಂದು ದೂರಿನಲ್ಲಿ ತಿಳಿಸಲಾಗಿದೆ.

ಫಾತಿಮಾ ಅವರ ತಂದೆ ಮೀನುಗಾರರಾಗಿದ್ದಾರೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಪತಿಯ ಮನೆಯವರು ಆಕೆಯ ಕುಟುಂಬವನ್ನು ಕುಲದ ಕುರಿತು ಅಪಹಾಸ್ಯ ಮಾಡಿ ಜಾತಿ ನಿಂದನೆ ಮಾಡುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತ್ರಿಕ್ಕೊನ್ನಪ್ಪುಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗಮನಿಸಿ: ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ನೀವು ಯಾವುದೇ ರೀತಿಯ ಮಾನಸಿಕ ಒತ್ತಡ ಅಥವಾ ತೊಂದರೆಗಳನ್ನು ಅನುಭವಿಸುತ್ತಿದ್ದರೆ, ದಯವಿಟ್ಟು ಉಚಿತ್ ಸಹಾಯವಾಣಿ ಸಂಖ್ಯೆಗಳಾದ 1056 ಅಥವಾ 0471-2552056 ಅಥವಾ ಮೊಬೈಲ್ ಸಂಖ್ಯೆ 9152987821 ಗೆ ಕರೆ ಮಾಡಿ ಸಹಾಯ ಪಡೆಯಿರಿ.

Leave a Reply

Discover more from

Subscribe now to keep reading and get access to the full archive.

Continue reading